Advertisement

ಬಸ್‌ ತಂಗುದಾಣ ಸ್ಥಳಾಂತರ; ಸುಗಮ ಸಂಚಾರ 

10:18 AM Nov 30, 2018 | Team Udayavani |

ಮಹಾನಗರ : ನಂತೂರು ಜಂಕ್ಷನ್‌ನಲ್ಲಿ ಕೆಪಿಟಿ ಕಡೆ ಹೋಗುವ ಬಸ್‌ ಗಳಿಗೆ ತಂಗುದಾಣವನ್ನು ಜಂಕ್ಷನ್‌ನಿಂದ ಸುಮಾರು 25 ಮೀ. ಮುಂದುಗಡೆಗೆ (ಕೆಪಿಟಿ ಕಡೆಗೆ) ಸ್ಥಳಾಂತರಿಸಲಾಗಿದ್ದು, ಇದರಿಂದಾಗಿ ಜಂಕ್ಷನ್‌ನಲ್ಲಿ ವಾಹನಗಳ ಒತ್ತಡ ಕಡಿಮೆಯಾಗಿ ವಾಹನ ಸಂಚಾರ ಸುಲಲಿತಗೊಳ್ಳಲಿದೆ.

Advertisement

ಆದರೆ ಪ್ರಯಾಣಿಕರಿಗೆ ಈ ಬಗ್ಗೆ ಮಾಹಿತಿ-ಮಾರ್ಗದರ್ಶನ ನೀಡಲು ಸೂಚನ ಫಲಕ ಇಲ್ಲದಿರುವುದು ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿದೆ. ಆದ್ದರಿಂದ ಸೂಚನಾಫ‌ಲಕ ಅಳವಡಿಸುವುದು ಅಗತ್ಯ. ಹಂಪನಕಟ್ಟೆ , ಮಂಗಳಾದೇವಿ ಮತ್ತು ಕಂಕನಾಡಿ ಕಡೆಯಿಂದ ನಂತೂರು ಮೂಲಕ ಕೆಪಿಟಿ ಕಡೆಗೆ ರೂಟ್‌ ನಂ. 13 ಜಿ, 14, 15,44, 47, 62, 65 ನಂಬ್ರದ ಸಿಟಿ ಬಸ್‌ ಗಳು ಮತ್ತು ಕೆಲವು ಸರ್ವಿಸ್‌ ಬಸ್‌ಗಳು ಸಂಚರಿಸುತ್ತಿವೆ. ಈಗ ಈ ಎಲ್ಲ ಬಸ್‌ಗಳಿಗೆ ನಂತೂರಿನಲ್ಲಿ ತಂಗುದಾಣವನ್ನು ಆದಿಶಕ್ತಿ ಕಾಂಪ್ಲೆಕ್ಸ್‌ ಸಮೀಪ ವ್ಯವಸ್ಥೆ ಮಾಡಲಾಗಿದೆ. ಹೊಸ ಬಸ್‌ ತಂಗುದಾಣವನ್ನೂ ಅಲ್ಲಿ ನಿರ್ಮಿ ಸಲಾಗಿದೆ.

ಜಂಕ್ಷನ್‌ನಲ್ಲಿ ಹೊಸತಾಗಿ ಸಿಗ್ನಲ್‌ ಲೈಟ್‌ ಅಳವಡಿಸಿದ್ದರೂ ಕೆಪಿಟಿ ಕಡೆಗೆ ಹೋಗುವ ಬಸ್‌ಗಳಿಗೆ ನಂತೂರು ಜಂಕ್ಷನ್‌ ಮೂಲಕ ಮುಂದೆ ಸಾಗಲು ಫ್ರೀ ಲೆಫ್ಟ್‌ ಸೌಲಭ್ಯವಿದೆ. ಹಾಗಾಗಿ ಜಂಕ್ಷನ್‌ನಲ್ಲಿ ಬಸ್‌ಗಳು ನಿಲ್ಲುವ ಆವಶ್ಯಕತೆಯಿಲ್ಲ. ಜಂಕ್ಷನ್‌ನಲ್ಲಿ ಬಿಕರ್ನಕಟ್ಟೆ ಕಡೆಗೆ ಹೋಗುವ ಬಸ್‌ಗಳ ನಿಲುಗಡೆಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಬಸ್‌ ಗಳು ಕೂಡ ಅಲ್ಲಿ ಹೆಚ್ಚು ಹೊತ್ತು ನಿಲ್ಲದೆ ಇರುವ ಜನರನ್ನು ಪಿಕಪ್‌ ಮಾಡಿಕೊಂಡು ಕೂಡಲೇ ನಿರ್ಗಮಿಸುವಂತಾಗಬೇಕು. ಆ ಮಾತ್ರ ಜಂಕ್ಷನ್‌ನಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆ ಸಾಧ್ಯ ಎನ್ನುವುದು ಸಂಚಾರಿ ಪೊಲೀಸರ ಅಂಬೋಣ.

ಟೈಮ್‌ ಕೀಪರ್‌ ನೇಮಿಸಿ
ಬಿಕರ್ನಕಟ್ಟೆ ಕಡೆಗೆ ಹೋಗುವ ಬಸ್‌ಗಳ ಸಮಯ ಪಾಲನೆಗೆ ನಂತೂರು ಜಂಕ್ಷನ್‌ ನಲ್ಲಿ ಟೈಮ್‌ ಕೀಪರ್‌ ಇದ್ದಾರೆ. ಆದರೆ ಕೆಪಿಟಿ ಮಾರ್ಗವಾಗಿ ಸಂಚರಿಸುವ ಬಸ್‌ಗಳಿಗೆ ಟೈಮ್‌ ಕೀಪರ್‌ ಇಲ್ಲ. ಟೈಮ್‌ ಕೀಪರ್‌ ನೇಮಕ ಮಾಡಿದರೆ ಪ್ರಯಾಣಿಕರಿಗೆ, ಬಸ್‌ ಸಿಬಂದಿಗೆ ಮಾರ್ಗದರ್ಶನ ನೀಡಲು, ಈ ಮಾರ್ಗದಲ್ಲಿ ಓಡಾಡುವ ಬಸ್‌ಗಳ ಸಮಯ ಪಾಲನೆಗೆ ಮತ್ತು ವೇಗ ಮಿತಿಗೆ ಕಡಿವಾಣ ಹಾಕಲು ಸಹಕಾರಿಯಾಗುವುದು ಎಂದು ಟ್ರಾಫಿಕ್‌ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. 

ಟೈಮ್‌ ಕೀಪರ್‌ಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಮತ್ತು ಬಸ್‌ ಸಿಬಂದಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಕಾರ್ಯವನ್ನು ಕೆಲವು ದಿನಗಳಿಂದ ಕರಾವಳಿ ಶ್ರಮಿಕರ ಸಂಘದ (ಇದು ಚಾಲಕ-ನಿರ್ವಾಹಕರ ಸಂಘಟನೆ) ಕಾರ್ಯಕರ್ತರು ನಿರ್ವಹಿಸುತ್ತಿದ್ದಾರೆ. ಜಂಕ್ಷನ್‌ನಲ್ಲಿ ನಿಲ್ಲಿಸುವ ಬಸ್‌ ಚಾಲಕರ ಮೇಲೆ ಪೊಲೀಸರು ನಿರ್ಧಾಕ್ಷಿಣ್ಯವಾಗಿ ಕ್ರಮ ಜರಗಿಸಬೇಕು ಎಂದು ಈ ಸಂಘಟನೆಯ ಮುಖಂಡ ಲೋಹಿತ್‌ ಆಗ್ರಹಿಸಿದ್ದಾರೆ.

Advertisement

ಕೇಸು; ಬಸ್‌ ಮುಟ್ಟುಗೋಲು
ಹೊಸ ಬಸ್‌ ತಂಗುದಾಣದ ಬದಲು ಈ ಹಿಂದಿನಂತೆ ನಂತೂರು ಜಂಕ್ಷನ್‌ನಲ್ಲಿಯೇ ಬಸ್‌ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿ ಇಳಿಸುವ ಬಸ್‌ಗಳ ಚಾಲಕರ ವಿರುದ್ಧ ಟ್ರಾಫಿಕ್‌ ಪೊಲೀಸರು ಕ್ರಮ ಜರಗಿಸುತ್ತಿದ್ದಾರೆ. ಸುಮಾರು ಎರಡು ವಾರಗಳಿಂದ ಕೇಸು ದಾಖಲಿಸುತ್ತಿದ್ದು, ಬುಧವಾರ ನಾಲ್ಕು ಬಸ್‌ಗಳನ್ನು ಮುಟ್ಟು ಗೋಲು ಹಾಕಲಾಗಿದೆ. 

ಸಹಕಾರ ಅಗತ್ಯ
ಕೆಪಿಟಿ ಕಡೆಗೆ ಹೋಗುವ ಬಸ್‌ಗಳ ತಂಗುದಾಣವನ್ನು ಸ್ಥಳಾಂತರ ಮಾಡಿದ್ದರಿಂದ ಈಗ ನಂತೂರು ಜಂಕ್ಷನ್‌ನಲ್ಲಿ ಬಸ್‌ ಗಳ ಒತ್ತಡ ಕಡಿಮೆಯಾಗಿದೆ. ಸಂಚಾರ ವ್ಯವಸ್ಥೆ ಕೊಂಚ ಮಟ್ಟಿಗೆ ಸುಲಲಿತವಾಗಿದೆ. ಈ ವ್ಯವಸ್ಥೆ ಇದೇ ರೀತಿಯಲ್ಲಿ ಮುಂದುವರಿಯಬೇಕು. ಇದಕ್ಕೆ ಬಸ್‌ ಸಿಬಂದಿ, ಸಾರ್ವಜನಿಕರ ಸಹಕಾರವೂ ಬೇಕು.
 - ಮಂಜುನಾಥ ಶೆಟ್ಟಿ,
ಎಸಿಪಿ (ಸಂಚಾರ ವಿಭಾಗ)

ಪರಿಶೀಲಿಸಲಾಗುವುದು
ಈ ಜಂಕ್ಷನ್‌ನಲ್ಲಿ ಕೆಪಿಟಿ ಮಾರ್ಗವಾಗಿ ಚಲಿಸುವ ಬಸ್‌ ಗಳಿಗೆ ಟೈಮ್‌ ಕೀಪರ್‌ ವ್ಯವಸ್ಥೆ ಎರಡು ವರ್ಷಗಳಿಂದ ಇಲ್ಲ. ಅದನ್ನು ಪುನರಾರಂಭಿಸುವ ಬಗ್ಗೆ ಪರಿಶೀಲಿಸಲಾಗುವುದು. ಅಲ್ಲದೆ ಈ ಹಿಂದಿನ ಯೋಜನೆಯಂತೆ ಬಿಕರ್ನಕಟ್ಟೆ ಕಡೆಗೆ ಹೋಗುವ ಬಸ್‌ಗಳ ನಿಲುಗಡೆ ತಾಣವನ್ನು ಜಂಕ್ಷನ್‌ನ ಆಚೆ ಕಡೆಗೆ (ಬಿಕರ್ನಕಟ್ಟೆ ಮಾರ್ಗದ ಬದಿಗೆ) ಸ್ಥಳಾಂತರಸುವ ಕೆಲಸ ಆಗಬೇಕು. ಆಗ ಜಂಕ್ಷನ್‌ನಲ್ಲಿ ಬಸ್‌ಗಳು ನಿಲುಗಡೆಯಾಗುವ ಪ್ರಮೇಯವೇ ಇರುವುದಿಲ್ಲ.
ದಿಲ್‌ರಾಜ್‌ ಆಳ್ವ,
  ದ.ಕ. ಬಸ್‌ ಮಾಲಕರ ಸಂಘದ ಅಧ್ಯಕ್ಷ 

ಹಿಲರಿ ಕ್ರಾಸ್ತಾ 

Advertisement

Udayavani is now on Telegram. Click here to join our channel and stay updated with the latest news.

Next