ಕಲಬುರಗಿ: ಲಾಕ್ ಡೌನ್ ದಿಂದ ಬಂದಾಗಿರುವ ಗ್ರಾಮೀಣ ಭಾಗದ ಸಂಚಾರ ಸೇವೆ ಜೂನ್ 9ರಿಂದ ಆರಂಭಿಸುವುದಾಗಿ ಉಪಮುಖ್ಯಮಂತ್ರಿಯಾಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜಧಾನಿಯಿಂದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಸ್ಥಳಗಳಿಗೆ ಬಸ್ ಸಂಚಾರ ಪ್ರಾರಂಭವಾಗಿದೆ. ಈಗ ತಾಲೂಕು ಮತ್ತು ಹೋಬಳಿಯಿಂದ ಎಲ್ಲ ಹಳ್ಳಿಗಳಿಗೆ ಅಗತ್ಯಗನುಗುಣವಾಗಿ ಸಂಚಾರ ಆರಂಭವಾಗಲಿದೆ ಎಂದು ವಿವರಣೆ ನೀಡಿದರು.
ಲಾಕ್ ಡೌನ್ ದಿಂದ ಸಾರಿಗೆ ಸಂಸ್ಥೆ ಗೆ 2200 ಕೋ ರೂ ನಷ್ಟವಾಗಿದೆ. ಇದು 3000 ಕೋ ರೂ.ಗೆ ತಲುಪುವ ಸಾಧ್ಯತೆಗಳಿವೆ. ಹೀಗಾಗಿ ಸಂಸ್ಥೆಯಲ್ಲಿ ಆಡಳಿತ ಸುಧಾರಣೆಗೆ ಹಾಗೂ ಸೋರಿಕೆ ತಡೆಗಟ್ಟಲು ಜತೆಗೆ ಕೆಲವೊಂದಿಷ್ಟು ಬದಲಾವಣೆ ತರಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಬಸ್ ದರ ಏರಿಕೆ ಇಲ್ಲ: ಬಸ್ ನಲ್ಲಿ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಕೇವಲ 30 ಜನ ಬಸ್ ಸಂಚರಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸಂಸ್ಥೆಯಿಂದ ಆರೋಗ್ಯ ತಪಾಸಣೆ ನಡೆಸಿ ಸ್ಯಾನಿಟೈಜರ್ ಉಪಯೋಗಿಸಲಾಗುವುದು. ಅಂತರಾಜ್ಯಗಳಿಗೆ ಬಸ್ ಸಂಚಾರ ಆರಂಭಿಸುವ ನಿಟ್ಟಿನಲ್ಲಿ ಪಕ್ಕದ ಮಹಾರಾಷ್ಟ್ರ ಬಿಟ್ಟು ಎಲ್ಲ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ನೌಕರರಿಗೆ 2 ತಿಂಗಳ ಸಂಬಳ ಸರ್ಕಾರ ನೀಡಿದೆ. ಅದಕ್ಕಾಗಿ 650 ಕೋಟಿ ನೀಡಲಾಗಿದೆ. ಯಾರನ್ನೂ ಕೆಲಸದಲ್ಲಿ ತೆಗೆಯುವುದಿಲ್ಲ, ಕಡ್ಡಾಯ ರಜೆ ಇಲ್ಲವೇ ಇಲ್ಲ, ಅದಾಗ್ಯೂ ಯಾರಾದ್ರೂ ಅಧಿಕಾರಿಗಳು ಕಡ್ಡಾಯ ರಜೆ ನೀಡಿದರೆ ಅವರ ವಿರುದ್ಧವೇ ಕ್ರಮ ಕೈಗೊಳ್ಳಲಾಗುತ್ತದೆ. ಸಿಬ್ಬಂದಿಗಳ ರಜೆ ಮಂಜೂರಾತಿಗಾಗಿ ಮತ್ತೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಲಾಕ್‌ಡೌನ್‌ನಿಂದ ಬೆಂಗಳೂರಲ್ಲಿ ಊಟ ಸಿಗದ ಕಾರಣ ಉಮೇಶ್ ಕತ್ತಿಯವರ ಮನೆಯಲ್ಲಿ ಉತ್ತರ ಕರ್ನಾಟಕದ ಬಿಜೆಪಿ ಶಾಸಕರೆಲ್ಲರೂ ಡಿನ್ನರ್ ಪಾರ್ಟಿ ಮಾಡಿದ್ದಾರೆ ಅಂತಾ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹಾಸ್ಯ ಚಟಾಕಿ ಹಾರಿಸಿದರು.
ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಬೆಂಗಳೂರು ಬಂದ್ರೆ ಹೋಟೆಲ್‌ಗಳು ಬಂದ್ ಇರುವ ಕಾರಣ ರೊಟ್ಟಿ ಊಟ ಸಿಗುತ್ತಿಲ್ಲ, ಈ ಭಾಗದ ಶಾಸಕರುಗಳಿಗೆ ರೊಟ್ಟಿ ಊಟದ ಮೇಲೆ ಸಾಕಷ್ಟು ಅಭಿರುಚಿ ಇದೆ, ಹೀಗಾಗಿ ಉಮೇಶ್ ಕತ್ತಿಯವರು ರೊಟ್ಟಿ ಊಟಕ್ಕೆ ಕರೆದಿದಾರೆ ಎಂದರು. ಸಭೆ ಸೇರುವುದು ಸಮಾಲೋಚನೆ ಮಾಡುವುದು ಇವೆಲ್ಲ ಸರ್ವೆ ಸಾಮಾನ್ಯ, ಏನೆ ಭಿನ್ನಾಭಿಪ್ರಾಯಗಳಿದ್ದರು ಸಿಎಂ ಬಿಎಸ್‌ವೈ ಹಾಗೂ ಹೈಕಮಾಂಡ್ ಬಗೆಹರಿಸುತ್ತಾರೆ ಮತ್ತು ಈ ಸರ್ಕಾರ ಐದು ವರ್ಷ ಪೂರ್ಣಗೊಳಿಸುತ್ತದೆ ಅಂತಾ ಸವದಿ ಹೇಳಿದರು.