Advertisement

ಮಂಗಳೂರು: ಬಸ್‌ ಬಂದರೂ ಪರವಾನಿಗೆ ಸಿಕ್ಕಿಲ್ಲ!

01:10 PM Sep 23, 2022 | Team Udayavani |

ಮಹಾನಗರ: ನಗರದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಲು ಕೆಎಸ್ಸಾರ್ಟಿಸಿ ಮುಂದಾಗಿದ್ದು, ಈಗಾಗಲೇ ನಾಲ್ಕು ಬಸ್‌ಗಳು ಸಿದ್ಧಗೊಂಡಿವೆ. ಆದರೆ ಬಸ್‌ ಓಡಿಸಲು ಸಾರಿಗೆ ಇಲಾಖೆಯಿಂದ ಇನ್ನೂ ಪರವಾನಿಗೆ ಸಿಕ್ಕಿಲ್ಲ!

Advertisement

ಮಂಗಳೂರಿನಿಂದ ಏರ್‌ಪೋರ್ಟ್‌ಗೆ ಕೆಎಸ್ಸಾರ್ಟಿಸಿ ಬಸ್‌ ಕಾರ್ಯಾಚರಿಸುವ ನಿಟ್ಟಿನಲ್ಲಿ ಕೆಎಸ್ಸಾರ್ಟಿಸಿ ಮೈಸೂರು ವಿಭಾಗದಿಂದ ಈಗಾಗಲೇ ನಾಲ್ಕು ವೋಲ್ವೊ ಬಸ್‌ಗಳು ಮಂಗಳೂರಿಗೆ ಬಂದಿದ್ದು, ಪರವಾನಿಗೆಗಾಗಿ ಕಾಯುತ್ತಿದೆ. ಈ ರೂಟ್‌ನಲ್ಲಿ ತಾತ್ಕಾಲಿಕ ಪರವಾನಿಗೆ ನೀಡುವಂತೆ ಕೆಎಸ್ಸಾರ್ಟಿಸಿಯಿಂದ ಸಾರಿಗೆ ಇಲಾಖೆಗೆ ಮನವಿ ಮಾಡಲಾಗಿದೆ.

ಈ ಹಿಂದೆ ಮಂಗಳೂರು ಆರ್‌ಟಿಒ ವ್ಯಾಪ್ತಿಯಲ್ಲಿ ಆದಂತಹ ಅಧಿಸೂಚನೆಯ ಅನ್ವಯ ನಿಯಮಗಳನ್ನು ಪರಿಶೀಲಿಸಿದ ಬಳಿಕವೇ ಸೂಕ್ತ ರೂಟ್‌ನಲ್ಲಿ ಪರವಾನಿಗೆ ನೀಡಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ನೂತನ ಬಸ್‌ ಆರಂಭಕ್ಕೆ ಮತ್ತಷ್ಟು ದಿನಗಳು ತಗುಲುವ ಸಾಧ್ಯತೆ ಇದೆ. ವಿಮಾನ ನಿಲ್ದಾಣದಿಂದ ಮಂಗಳೂರು ನಗರಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಲು ಸಾರಿಗೆ ಸಚಿವ ಶ್ರೀರಾಮುಲು ಅವರು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಬಜಪೆ ಏರ್‌ಪೋರ್ಟ್‌ನಿಂದ ಮಂಗಳೂರು ನಗರಕ್ಕೆ ಸದ್ಯ ಯಾವುದೇ ಬಸ್‌ ಸಂಪರ್ಕ ಇಲ್ಲ. ಹೆಚ್ಚಿನ ಮಂದಿ ದುಬಾರಿ ಹಣ ನೀಡಿ ಖಾಸಗಿ ವಾಹನ ಬಾಡಿಗೆಗೆ ಮಾಡಿಕೊಂಡು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಿಂದ ಕೆಂಪೇಗೌಡ ಏರ್‌ ಪೋರ್ಟ್‌ಗೆ ಇರುವಂತೆ ವೋಲ್ವೋ ಬಸ್‌ ಕಾರ್ಯಾಚರಣೆ ನಡೆಸಬೇಕು ಎಂಬ ಬೇಡಿಕೆ ಸಾರ್ವಜನಿಕರದ್ದು.

ಎಂಟು ವರ್ಷಗಳ ಹಿಂದೆ ಮಂಗಳೂರಿಂದ ವಿಮಾನ ನಿಲ್ದಾಣಕ್ಕೆ ಬಸ್‌ಗಳು ಸಂಚರಿಸುತ್ತಿತ್ತು. ಆದರೆ ಆದಾಯವಿಲ್ಲ ಎಂಬ ನೆಪವೊಡ್ಡಿ ಕೆಲವೇ ದಿನಗಳಲ್ಲಿ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಕುಂದಾಪುರ, ಮಣಿಪಾಲ, ಉಡುಪಿ ಸುತ್ತಮುತ್ತಲಿನ ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಭಟ್ಕಳದಿಂದ ಏರ್‌ಪೋರ್ಟ್‌ಗೆ ಬಸ್‌ ವ್ಯವಸ್ಥೆ ಕಲ್ಪಿಸಲು ಕೆಎಸ್ಸಾರ್ಟಿಸಿ ಅಧಿಕಾರಿಗಳು ಸರ್ವೇ ನಡೆಸಿದ್ದರು. ಆದರೂ ಬಸ್‌ ಓಡಲಿಲ್ಲ.

Advertisement

ರೂಟ್‌ನದ್ದೇ ಸಮಸ್ಯೆ

ಮಂಗಳೂರಿನ ಸೆಂಟ್ರಲ್‌ ರೈಲು ನಿಲ್ದಾಣದಿಂದ ಮಂಗಳೂರು ಏರ್‌ ಪೋರ್ಟ್‌ಗೆ ಬಸ್‌ ಕಾರ್ಯಾಚರಣೆ ನಡೆಸಲು ಕೆಎಸ್ಸಾರ್ಟಿಸಿ ಇಂಗಿತ ವ್ಯಕ್ತಪಡಿಸಿದೆ. ಈ ಹಿಂದೆ ಆದಂತಹ ಅಧಿಸೂಚನೆಯ ಪ್ರಕಾರ ನಗರದ ಕೆಲವೊಂದು ಭಾಗದಿಂದ ಹೊಸ ರೂಟ್‌ಗಳಿಗೆ ಸಾರಿಗೆ ಇಲಾಖೆ ಪರವಾನಿಗೆ ನೀಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಈ ರೂಟ್‌ ಬದಲಾವಣೆ ಮಾಡಬೇಕಾದ ಅನಿವಾರ್ಯದಲ್ಲಿ ಕೆಎಸ್ಸಾರ್ಟಿಸಿ ಇದೆ.

ಪರಿಶೀಲಿಸಿ ಕ್ರಮ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಲು ಪರವಾನಿಗೆ ನೀಡುವಂತೆ ಕೆಎಸ್ಸಾರ್ಟಿಸಿಯಿಂದ ಪತ್ರ ಬಂದಿದೆ. ಆದರೆ ಯಾವ ರೂಟ್‌ನಲ್ಲಿ ಪರವಾನಿಗೆ ನೀಡಲು ಅವಕಾಶವಿದೆ ಎಂದು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. –ರವಿಶಂಕರ್‌, ಮಂಗಳೂರು ಆರ್‌ಟಿಒ (ಪ್ರಭಾರ)

ಪರವಾನಿಗೆಯ ನಿರೀಕ್ಷೆಯಲ್ಲಿ: ನಗರದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಲು ಸಾರಿಗೆ ಸಚಿವರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮೈಸೂರು ವಿಭಾಗದಿಂದ ನಾಲ್ಕು ವೋಲ್ವೊ ಬಸ್‌ ನಗರಕ್ಕೆ ಬಂದಿವೆ. ತಾತ್ಕಾಲಿಕ ಪರವಾನಿಗೆ ನೀಡುವಂತೆ ಸಾರಿಗೆ ಇಲಾಖೆಗೆ ಪತ್ರ ಬರೆಯಲಾಗಿದೆ. ಪರವಾನಿಗೆಯ ನಿರೀಕ್ಷೆಯಲ್ಲಿದ್ದೇವೆ. –ರಾಜೇಶ್‌ ಶೆಟ್ಟಿ, ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next