Advertisement

ಹಾವೇರಿಯಲ್ಲಿ ಬಸ್‌ ಸಂಚಾರ ಪುನಾರಂಭ

08:40 PM Apr 22, 2021 | Team Udayavani |

 ಹಾವೇರಿ: ಸಾರಿಗೆ ನೌಕರರ ಮುಷ್ಕರದಿಂದ ಕಳೆದ 15 ದಿನಗಳ ಕಾಲ ಬಸ್‌ ಇಲ್ಲದೇ ಪ್ರಯಾಣಿಕರು ತೊಂದರೆ ಎದುರಿಸಿದ್ದರು. ಆದರೆ, ಬುಧವಾರ ಜಿಲ್ಲೆಯಲ್ಲಿ ಶೇ.80ರಷ್ಟು ಬಸ್‌ಗಳ ಕಾರ್ಯಾಚರಣೆ ನಡೆಸಿದ್ದರೂ, ಪ್ರಯಾಣಿಕರ ಕೊರತೆಯಿಂದ ನೀರಿಕ್ಷಿತ ಮಟ್ಟದಲ್ಲಿ ಬಸ್‌ ಸಂಚಾರ ಸಾಧ್ಯವಾಗಲಿಲ್ಲ.

Advertisement

6ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 15 ದಿನ ಪೂರೈಸಿದ್ದು, ಇಷ್ಟು ದಿನಗಳ ತರುವಾಯ ಬಸ್‌ ಕಾರ್ಯಾಚರಣೆ ಸಹಜ ಸ್ಥಿತಿಗೆ ಬಂದಂತಾಗಿದೆ. ಜಿಲ್ಲೆಯ 6 ಡಿಪೋಗಳಿಂದ ಬುಧವಾರ 264 ಬಸ್‌ಗಳು ಕಾರ್ಯಾಚರಣೆ ನಡೆಸಿದವು. ಆದರೆ, ಪ್ರಯಾಣಿಕರ ಕೊರತೆಯಿಂದ ಹಲವು ಬಸ್‌ಗಳು ಡಿಪೋದಿಂದ ನಿಲ್ದಾಣಕ್ಕೆ ಬಂದು ನಿಲ್ಲುವಂತಾಯಿತು. ಬಸ್‌ ಓಡಾಟ ಯಥಾ ಸ್ಥಿತಿಗೆ ಬರುವ ಸಂದರ್ಭದಲ್ಲಿಯೇ ಕೊರೊನಾ ಭಯದಿಂದ ಜನರ ಓಡಾಟ ಕಡಿಮೆಯಾಗಿದ್ದು, ಬಸ್‌ ಇದ್ದರೂ ಪ್ರಯಾಣಿಕರಿಲ್ಲದ ಪರಿಸ್ಥಿತಿ ಎದುರಿಸುವಂತಾಗಿದೆ.

ಶೇ.80 ಬಸ್‌ ಸಂಚಾರ: ಜಿಲ್ಲೆಯಲ್ಲಿ ಹಾವೇರಿಯಿಂದ 55, ಹಿರೇಕೆರೂರಿನಿಂದ 59, ಬ್ಯಾಡಗಿಯಿಂದ 33, ರಾಣಿಬೆನ್ನೂರಿನಿಂದ 66, ಹಾನಗಲ್ಲನಿಂದ 26 ಹಾಗೂ ಸವಣೂರು ಡಿಪೋದಿಂದ 25 ಬಸ್‌ಗಳು ಕಾರ್ಯಾಚರಣೆ ನಡೆಸಿದವು. ಜಿಲ್ಲೆಯಿಂದ ಒಟ್ಟು 332 ಮಾರ್ಗಗಳಲ್ಲಿ ಬಸ್‌ ಓಡಿಸಬೇಕಿತ್ತು. ಆದರೆ, ಪ್ರಯಾಣಿಕರ ಕೊರತೆಯಿಂದ ಇನ್ನೂ 70 ಬಸ್‌ಗಳನ್ನು ಓಡಿಸಲು ಸಾಧ್ಯವಾಗಲಿಲ್ಲ. ಮುಷ್ಕರದ ನಡುವೆಯೂ ಕೆಲಸಕ್ಕೆ ಹಾಜರಾಗುವ ಸಿಬ್ಬಂದಿ ಸಂಖ್ಯೆ ಏರುತ್ತಿದೆ. ಹಾನಗಲ್ಲ ಮತ್ತು ಸವಣೂರು ಡಿಪೋದಲ್ಲಿ ಮಾತ್ರ ಕೆಲವು ಸಿಬ್ಬಂದಿ ಇನ್ನೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಉಳಿದೆಲ್ಲ ಕಡೆ ಶೆಡ್ನೂಲ್‌ ಪ್ರಕಾರ ಬಸ್‌ ಓಡಿಸುವಷ್ಟು ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ನೌಕರರ ಮೇಲೆ ಶಿಸ್ತು ಕ್ರಮ: ಕರ್ತವ್ಯಕ್ಕೆ ಹಾಜರಾಗದ ನೂರಾರು ಸಾರಿಗೆ ಸಿಬ್ಬಂದಿ ಮೇಲೆ ಸಂಸ್ಥೆ ಶಿಸ್ತು ಕ್ರಮ ಕೈಗೊಂಡಿದೆ. ಮಂಗಳವಾರ 28 ಸಿಬ್ಬಂದಿಯನ್ನು ವರ್ಗಾಯಿಸಲಾಗಿದೆ. ಈವರೆಗೆ ಹಾವೇರಿ ವಿಭಾಗದಿಂದ 101 ನೌಕರರನ್ನು ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಬರೋಬ್ಬರಿ 100 ನೌಕರರನ್ನು ಕೆಲಸದಿಂದಲೇ ವಜಾಗೊಳಿಸಲಾಗಿದೆ. ಜತೆಗೆ 8 ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. ಪ್ರಯಾಣಿಕರ ಕೊರತೆ: ಕಳೆದ 15 ದಿನಗಳಿಂದ ಬಸ್‌ ಇಲ್ಲದೇ ಪ್ರಯಾಣಿಕರು ಪರದಾಡುವಂತಾಗಿತ್ತು. ಆದರೆ, ಬುಧವಾರ ಬಸ್‌ಗಳ ಸಂಖ್ಯೆ ಸಾಕಷ್ಟಿದ್ದರೂ ಪ್ರಯಾಣಿಕರ ಕೊರತೆ ಕಂಡುಬಂತು. ಇದರಿಂದ ನಿಲ್ದಾಣದಲ್ಲಿ ಬಸ್‌ಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಕೋವಿಡ್‌ ಮಾರ್ಗಸೂಚಿ ಬೇರೆ ಪ್ರಕಟವಾಗಿದ್ದು, ಬಸ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಕರನ್ನು ಕರೆದೊಯ್ಯಬೇಕಿದೆ. ಆದರೆ, ಅಷ್ಟು ಸಂಖ್ಯೆಯ ಪ್ರಯಾಣಿಕರೂ ಬಸ್‌ ಏರಲಿಲ್ಲ.

Advertisement

ಅಲ್ಲದೇ, ಕೊರೊನಾ ಸೋಂಕು ಹೆಚ್ಚಿರುವ ಮುಂಬೈ, ಪುಣೆ, ಶಿರಡಿ, ಇಚಲಕರಂಜಿ ಸೇರಿದಂತೆ ಮಹಾರಾಷ್ಟ್ರಕ್ಕೆ ಯಾವ ಬಸ್‌ಗಳನ್ನೂ ಬಿಡಲಿಲ್ಲ. ಕೊರೊನಾ ಎರಡನೇ ಅಲೆ ತೀವ್ರಗೊಳ್ಳುವ ಆತಂಕದಲ್ಲಿ ಸಾರ್ವಜನಿಕರು ಬಸ್‌ನಲ್ಲಿ ಓಡಾಡುವುದನ್ನು ಕಡಿಮೆ ಮಾಡಿರುವ ಸಾಧ್ಯತೆಯೂ ಇದೆ. ಅಲ್ಲದೇ, ನಿಲ್ದಾಣದಲ್ಲಿ ಬಸ್‌ ಇರುವುದಿಲ್ಲ ಎಂಬ ಕಾರಣಕ್ಕೆ ಅನೇಕರು ಖಾಸಗಿ ವಾಹನದಲ್ಲೇ ಸಂಚರಿಸಿದ್ದರಿಂದ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next