ರಾಯ್‌ಪುರ:ಬರೋಬ್ಬರಿ ನಲವತ್ತು ವರ್ಷಗಳು. ನಕ್ಸಲ್ ಪೀಡಿತ ಛತ್ತೀಸ್‌ಗಡದ ದಂತೇವಾಡ ಜಿಲ್ಲೆಯ ಜಗಾರ್‌ಗುಂಡ ಗ್ರಾಮಕ್ಕೆ ಬಸ್ ಸೇವೆ ಸ್ಥಗಿತಗೊಂಡು ಆಗಿರುವ ವರ್ಷಗಳಿವು. ಈಗ ಸಮಸ್ಯೆ ನಿವಾರಣೆಯಾಗಿದೆ. ಜಿಲ್ಲಾ ಕೇಂದ್ರ ದಂತೇವಾಡದಿಂದ 81 ಕಿಮೀ ದೂರ ಇರುವ ಈ ಗ್ರಾಮಕ್ಕೆ ಮೂರೂವರೆ ಗಂಟೆಯ ಪ್ರಯಾಣ ಇದೆ.
ಸ್ಥಳೀಯರು ಹೇಳಿಕೊಳ್ಳುವ ಪ್ರಕಾರ 1982ರಲ್ಲಿ ಈ ಪ್ರದೇಶದಲ್ಲಿ ನಕ್ಸಲೀಯರು ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆ ತಂದೊಡ್ಡುತ್ತಿದ್ದರು. ರಸ್ತೆಯಲ್ಲಿ ಗುಂಡಿ ತೋಡಿ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿದ್ದರು. ಹೀಗಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗ್ರಾಮಕ್ಕೆ ಸಂಚಾರವನ್ನೇ ರದ್ದು ಮಾಡಿತ್ತು. ಈಗ ಅಂದರೆ ಜ.15ರಂದು ಮತ್ತೆ ಬಸ್ ಸಂಚಾರ ಶುರು ಮಾಡಿದ್ದರಿಂದ 25 ಗ್ರಾಮಗಳ 17 ಸಾವಿರ ಮಂದಿಗೆ ಜರಗುಂಡದಿಂದ ದಂತೇವಾಡಕ್ಕೆ ತೆರಳಲು ಸುಲಭವಾಗಿದೆ.
ಸ್ಥಳೀಯರು ಅದರಿಂದ ಸಂತೋಷಗೊಂಡಿದ್ದಾರೆ.
“ಈ ಬಸ್ಸು ಸ್ಥಳೀಯರ ಜೀವನಾಡಿ. ಇದುವರೆಗೆ ದಂತೇವಾಡ ತಲುಪಲು ಸುಕಾ¾ ಮೂಲಕ 180 ಕಿಮೀ ಬಳಸು ದಾರಿಯ ಮೂಲಕ ಕ್ರಮಿಸಬೇಕಿತ್ತು. ಈಗ 3-4 ಗಂಟೆಗಳ ಅವಧಿಯಲ್ಲಿ ದಂತೇವಾಡ ತಲುಪಲು ಸಾಧ್ಯವಾಗುತ್ತಿದೆ’ ಎಂದು ನಿರ್ವಾಹಕ ಹೇಳಿದ್ದಾರೆ. ಇದರ ಜತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ತಿವಾರಿ ಮಾತನಾಡಿ ಈ ರಸ್ತೆಯನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ 140 ಮಂದಿ ಅಸುನೀಗಿದ್ದರು ಎಂದು ಹೇಳಿದ್ದಾರೆ.