Advertisement
“ನಗರದಲ್ಲಿ ಅತ್ಯಂತ ಕಿರಿದಾದ ರಸ್ತೆಗಳಿರುವುದರಿಂದ ಬಸ್‌ಗಳಿಗಾಗಿಯೇ ಪ್ರತ್ಯೇಕ ಪಥ ಮೀಸಲಿಡುವುದು ಸಂಚಾರದಟ್ಟಣೆ ಸಮಸ್ಯೆ ಪರಿಹಾರ ಆಗದು. ಅಷ್ಟಕ್ಕೂ ಈ ಪ್ರಯೋಗ ಯಶಸ್ಸು ಆಗುತ್ತದೆ ಎಂಬ ಗ್ಯಾರಂಟಿ ಕೂಡ ಇಲ್ಲ. ಹಾಗಾಗಿ, ಈ ಯೋಜನೆ ಸೂಕ್ತವಾದುದಲ್ಲ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ.
Related Articles
Advertisement
ಮೆಟ್ರೋ ಕೂಡ ಕಾರಣ?ಆಟೋಗಳಿಗಾಗಿ ಪ್ರತ್ಯೇಕ ಪಥವನ್ನು ನಗರದಲ್ಲಿ ಪರಿಚಯಿಸಲಾಗಿತ್ತು. ಆದರೆ, ಅದು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಈ ಮಧ್ಯೆ ಸಿಲ್ಕ್ಬೋರ್ಡ್ ಜಂಕ್ಷನ್, ಕೆ.ಆರ್. ಪುರ ಹಾಗೂ ವಿಮಾನ ನಿಲ್ದಾಣ ಮಾರ್ಗಗಳಲ್ಲಿ ಮೆಟ್ರೋ ಬರುತ್ತಿದೆ. ಪ್ರತ್ಯೇಕ ಪಥಕ್ಕೆ ಹಿಂದೇಟು ಹಾಕಲು ಇದು ಕೂಡ ಕಾರಣ ಎಂದೂ ಮೂಲಗಳು ತಿಳಿಸಿವೆ. ನಗರದಲ್ಲಿ ಕಿರಿದಾದ ರಸ್ತೆಗಳಿರುವುದು ನಿಜ. ಆದರೆ, ಇದೇ ಕಾರಣ ಮುಂದಿಟ್ಟುಕೊಂಡು ಬಸ್ ಪಥಗಳೇ ಸೂಕ್ತವಲ್ಲ ಎನ್ನುವುದು ಸರಿಯಲ್ಲ. ಎಲ್ಲ ಕಡೆಗಳಲ್ಲೂ ರಸ್ತೆಗಳು ಕಿರಿದಾಗಿಲ್ಲ. ಮೂರು ಪಥಗಳಿರುವ ರಸ್ತೆಗಳಿರುವಲ್ಲಿ ಈ ಪ್ರಯೋಗ ಮಾಡಬಹುದು. ಇದರಿಂದ ಇಡೀ ನಗರದ ಜನರಿಗೆ ಅನುಕೂಲ ಆಗುತ್ತದೆ ಎಂದು ಸಾರಿಗೆ ತಜ್ಞರು ಅಭಿಪ್ರಾಯಪಡುತ್ತಾರೆ. ಪ್ರತ್ಯೇಕ ಲೇನ್ ಎಲ್ಲೆಲ್ಲಿ ಸಾಧ್ಯ
ನೃಪತುಂಗ ರಸ್ತೆ, ವಿಧಾನಸೌಧ, ಆನಂದರಾವ್ ವೃತ್ತದಿಂದ ಕೆ.ಆರ್. ವೃತ್ತ, ಕೆ.ಜಿ. ರಸ್ತೆ ಸೇರಿದಂತೆ ಏಕಮುಖ ಮಾರ್ಗ ಹಾಗೂ ಹೆಚ್ಚು ಬಸ್‌ಗಳು ಸಂಚರಿಸುವ ಮೂರಕ್ಕಿಂತ ಹೆಚ್ಚು ಪಥಗಳಿರುವ ರಸ್ತೆಗಳನ್ನು ಗುರುತಿಸಿ, ಅಂತಹ ರಸ್ತೆಗಳಲ್ಲಿ ಬಸ್ ಪಥ ಮಾಡುವ ಅವಶ್ಯಕತೆ ಇದೆ. ಇದರಿಂದ ವಾಹನಗಳ ಸಂಚಾರದ ವೇಗಮಿತಿ ಏರಿಕೆ ಆಗುತ್ತದೆ. ಇತರ ವಾಹನ ಸವಾರರಿಗೂ ಅನುಕೂಲ ಆಗುತ್ತದೆ ಎಂದು ಸಾರಿಗೆ ತಜ್ಞ ಪ್ರೊ.ಎಂ.ಎನ್. ಶ್ರೀಹರಿ ತಿಳಿಸುತ್ತಾರೆ. ಬಸ್ ಪಥ ಬೇಕೇ ಬೇಕು
“ನಗರದಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಿದ್ದರಿಂದ ಬಸ್‌ಗಳಿಗೆ ಜಾಗ ಇಲ್ಲದಂತಾಗಿದೆ. ಹೀಗಾಗಿ ಪ್ರತ್ಯೇಕ ಬಸ್ ಪಥದ ಅವಶ್ಯಕತೆ ಇದೆ. ಕೇವಲ 6,500 ಬಸ್‌ಗಳು ನಿತ್ಯ 50 ಲಕ್ಷಕ್ಕೂ ಅಧಿಕ ಜನರನ್ನು ಕೊಂಡೊಯ್ಯುತ್ತವೆ. ಈ ಎಲ್ಲ ಜನ ಸಂಚಾರದಟ್ಟಣೆ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಬಸ್‌ಗಳಿಗೆ ಪ್ರತ್ಯೇಕ ಪಥ ಮೀಸಲಿಡುವುದರಿಂದ ಜನರಿಗೆ ಅನುಕೂಲವಾಗಲಿದೆ. ಒಂದು ವೇಳೆ ಸರ್ಕಾರ ಸಂಪೂರ್ಣವಾಗಿ ಈ ಯೋಜನೆ ಕೈಬಿಟ್ಟಿದ್ದಾದರೆ, ಮುಂದಿನ ದಿನಗಳಲ್ಲಿ ಬಸ್ ಪ್ರಯಾಣಿಕರ ವೇದಿಕೆಯಿಂದ ಹೋರಾಟ ನಡೆಸಲಾಗುವುದು,’ ಎಂದು ವೇದಿಕೆ ಸಂಚಾಲಕ ವಿನಯ್ ಶ್ರೀನಿವಾಸ್ ಎಚ್ಚರಿಸಿದ್ದಾರೆ. ಎಲ್ಲ ರಸ್ತೆಗಳಲ್ಲೂ ಪ್ರತ್ಯೇಕ ಪಥ ಮೀಸಲಿಡುವುದು ಬೇಕಾಗಿಲ್ಲ. ಹಳೇ ಮದ್ರಾಸ್ ರಸ್ತೆ, ಬಳ್ಳಾರಿ ರಸ್ತೆ, ಕನಕಪುರ ರಸ್ತೆ, ತುಮಕೂರು ರಸ್ತೆ ಸೇರಿ ಕೆಲವೆಡೆ ಮಾತ್ರ ಯೋಜನೆ ಪರಿಚಯಿಸಬಹುದು. ಈ ಬಗ್ಗೆ ಅಧ್ಯಯನ ನಡೆಸಲಿ ಎಂದೂ ಅವರು ಆಗ್ರಹಿಸುತ್ತಾರೆ. ಉಪಯೋಗ ಏನು?
ನಗರದಲ್ಲಿ ವಾಹನಗಳ ಸರಾಸರಿ ವೇಗಮಿತಿ ಗಂಟೆಗೆ 9ರಿಂದ 10 ಕಿ.ಮೀ. ಇದೆ. ಹಾಗೊಂದು ವೇಳೆ ಬಸ್ ಪಥ ನಿರ್ಮಿಸಿದರೆ, ಆ ಮಾರ್ಗಗಳಲ್ಲಿ ವಾಹನಗಳ ವೇಗಮಿತಿ ದುಪ್ಪಟ್ಟಾಗುವ ಸಾಧ್ಯತೆ ಇದೆ. ಉಳಿದೆಲ್ಲ ವಾಹನಗಳಿಗಿಂತ ಬಸ್‌ಗಳ ಗಾತ್ರ ದೊಡ್ಡದು. ಇವುಗಳ ಸಂಚಾರವನ್ನು ರಸ್ತೆಯ ಎಡಭಾಗಕ್ಕೆ ಸೀಮಿತಗೊಳಿಸಿದರೆ, ಉಳಿದ ಖಾಲಿ ಜಾಗದಲ್ಲಿ ಸಹಜವಾಗಿ ವಾಹನಗಳ ವೇಗ ಹೆಚ್ಚುತ್ತದೆ. ಸಂಚಾರದಟ್ಟಣೆ ತಕ್ಕಮಟ್ಟಿಗೆ ತಗ್ಗುತ್ತದೆ ಎನ್ನುವುದು ಸಾರಿಗೆ ತಜ್ಞರ ಲೆಕ್ಕಾಚಾರ. ಆಟೋ ಲೇನ್ ವೈಫಲ್ಯ ನಿರೀಕ್ಷಿತ. ಆಟೋಗಳು ಎಲ್ಲೆಂದರಲ್ಲಿ ನಿಲ್ಲುತ್ತವೆ ಮತ್ತು ಹೋಗುತ್ತವೆ. ಆಟೋ ಚಾಲಕರ ಮೇಲೆ ಯಾವುದೇ ನಿಯಂತ್ರಣ ಇಲ್ಲ. ಬಸ್‌ಗಳ ವಿಚಾರದಲ್ಲಿ ಹಾಗಾಗದು. ಅದಕ್ಕೊಂದು ನಿಗಮ ಮತ್ತು ಅಧಿಕಾರಿಗಳೂ ಇದ್ದಾರೆ. ಆದ್ದರಿಂದ ಉತ್ತರದಾಯಿತ್ವ ಇದೆ. ಹಾಗಾಗಿ, ಬಸ್ ಲೇನ್ ಯಶಸ್ವಿಯಾಗುತ್ತದೆ.
-ಪ್ರೊ.ಎಂ.ಎನ್. ಶ್ರೀಹರಿ, ಸಾರಿಗೆ ತಜ್ಞ
ಸಾಧ್ಯವಿರುವ ಕಡೆಗಳಲ್ಲಿ ಬಸ್ ಪಥ ಮಾಡಿದರೆ ಸ್ವಾಗತಾರ್ಹ. ಇದರಿಂದ ಬಸ್‌ಗಳು ಬೇಗ ನಿಗದಿತ ಸ್ಥಳ ತಲುಪುತ್ತವೆ. ಇದಕ್ಕಿಂತ ಮುಖ್ಯವಾಗಿ ಬಸ್ ಬೇಗಳನ್ನು ಮಾಡಬೇಕು ನಿರ್ಮಿಸುವುದು ಹೆಚ್ಚು ಸೂಕ್ತ. ಇದರಿಂದ ವಾಹನದಟ್ಟಣೆ ತಪ್ಪುತ್ತದೆ. ವರ್ತುಲ ರಸ್ತೆಗಳಲ್ಲಿ ಇವುಗಳನ್ನು ಆದ್ಯತೆ ಮೇರೆಗೆ ನಿರ್ಮಿಸಬೇಕು.
-ಎಂ.ನಾಗರಾಜ, ಅಧ್ಯಕ್ಷರು, ಬಿಎಂಟಿಸಿ ನಗರದಲ್ಲಿ ಬಿಎಂಟಿಸಿ ಬಸ್‌ಗಳಿಗೆ ಪ್ರತ್ಯೇಕ ಬಸ್ ಪಥ ಪರಿಚಯಿಸುವ ಯೋಜನೆ ಕುರಿತು ನನಗೆ ಗೊತ್ತೇ ಇಲ್ಲ. ಇದರ ಪ್ರಸ್ತಾವನೆ ಯಾರು ಮಾಡಿದ್ದಾರೆ ಎಂದೂ ನನಗೆ ಗೊತ್ತಿಲ್ಲ.
-ಆರ್. ಹಿತೇಂದ್ರ, ಹೆಚ್ಚುವರಿ ಪೊಲೀಸ್ ಆಯುಕ್ತರು (ಸಂಚಾರ) * ವಿಜಯಕುಮಾರ್ ಚಂದರಗಿ