Advertisement
ರಿಕ್ಷಾ ಚಾಲಕ ಸಂದೀಪ್ ಓಂತಿಬೆಟ್ಟು ವಿನವರಾಗಿದ್ದಾರೆ. ಪ್ರಯಾಣಿಕ ಮಹಿಳೆ ಮತ್ತು ಬಾಲಕಿಯನ್ನು ಕರೆದುಕೊಂಡು ಅವರು ಉಡುಪಿಯಿಂದ ಓಂತಿಬೆಟ್ಟುವಿಗೆ ಹೋಗುತ್ತಿದ್ದಾಗ ಹಿಂದುಗಡೆಯಿಂದ ಉಡುಪಿಯಿಂದ ಕುಂದಾ ಪುರಕ್ಕೆ ತೆರಳುತ್ತಿದ್ದ ಬಸ್ಸು ಢಿಕ್ಕಿ ಹೊಡೆದಿದೆ. ಬಸ್ಸಿನ ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆಯಾದರೂ ಅತೀ ವೇಗದ ಕಾರಣವೆಂದು ಸ್ಥಳೀಯರು ಹೇಳುತ್ತಾರೆ. ಅಪಘಾತವನ್ನು ಕಂಡು ಗಾಬರಿಗೊಂಡಿದ್ದ ತಾಯಿ, ಮಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ರಿಕ್ಷಾ ಚಾಲಕ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿ ಅಪಘಾತವಾದ ಸ್ಥಳದಲ್ಲೇ ಇದ್ದರು.
ಘಟನಾ ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರು, ಪೊಲೀಸರು ಸೇರಿ ರಿಕ್ಷಾವನ್ನು ಮೇಲಕ್ಕೆತ್ತಿ ಬದಿಗೆ ಸರಿಸಿ ಇಟ್ಟರು. ಬಸ್ಸನ್ನು ಬದಿಗೆ ಸರಿಸುವುದಾಗಿ ಬಸ್ಸಿನ ಸೀಟಿನಲ್ಲಿ ಅನ್ಯ ಚಾಲಕರೊಬ್ಬರು ಕುಳಿತು ಬಸ್ಸನ್ನು ಮುಂದಕ್ಕೆ ಚಲಾಯಿಸಿದರು. ಈ ಸಂದರ್ಭ ಮೊದಲೇ ಬ್ರೇಕ್ ಸರಿಯಿಲ್ಲ ಎನ್ನುತ್ತಿದ್ದರೂ ಬಸ್ ಚಲಾಯಿಸಿದ ಕಾರಣ ಅದು ನಿಯಂತ್ರಣಕ್ಕೆ ಬಾರದೆ ಮುಂದೆ ನಿಂತಿದ್ದ ಇನ್ನೊಂದು ಆಟೋರಿಕ್ಷಾ ಟೆಂಪೋಗೆ ಸವರಿಕೊಂಡು ಮುಂದಕ್ಕೆ ಸಾಗಿತು. ಉಡುಪಿ-ಬನ್ನಂಜೆ ರಸ್ತೆಯ ಶಿರಿಬೀಡು ಜಂಕ್ಷನ್‌ನಲ್ಲಿ ಚಾಲಕ ಬಸ್ಸನ್ನು ಬನ್ನಂಜೆ ಕಡೆಗೆ ತಿರುಗಿಸಿದ. ಇದೇ ವೇಳೆಯಲ್ಲಿ ರಸ್ತೆಯಲ್ಲಿ ವಾಹನಗಳು ಹೋಗುತ್ತಿದ್ದರೆ ಬಸ್ಸು ಆ ವಾಹನಗಳಿಗೂ ಢಿಕ್ಕಿ ಹೊಡೆಯುತ್ತಿತ್ತು. ಈ ಸಂದರ್ಭ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಎಸ್‌ಪಿ ಡಾ| ಸಂಜೀವ ಎಂ. ಪಾಟೀಲ್ ಅವರು ಕಾರಿನಲ್ಲಿ ಹೋಗುತ್ತಿದ್ದರು. ಶಿರಿಬೀಡು ಜಂಕ್ಷನ್‌ನಲ್ಲಿ ಸ್ವಲ್ಪದರಲ್ಲೇ ಅವರ ಕಾರು ಕೂಡ ಪಾರಾಗಿತ್ತು. ಅನತಿ ದೂರಕ್ಕೆ ಏಕಮುಖ ರಸ್ತೆಯಲ್ಲಿಯೇ ಕೊಂಡೊಯ್ದ ಚಾಲಕ ಬಸ್ಸನ್ನು ನಿಲ್ಲಿಸಿ ಬಿಟ್ಟಿದ್ದ. ಜನರು ಸೇರಿದ್ದ ಕಾರಣ ಎಸ್‌ಪಿಯವರು ಏನಾದರೂ ಗಲಾಟೆ ನಡೆಯಿತೆಂದು ಜನರನ್ನು ಚದುರಿಸಲು ಪೊಲೀಸರಿಗೆ ಹೇಳಿದರು. ಬಳಿಕ ವಿಷಯ ತಿಳಿದುಕೊಂಡು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಿ ಹೋದರು. ಬಸ್ ಚಾಲಕ ಪರಾರಿ
ಮೊದಲಿನ ಅಪಘಾತ ನಡೆಸಿದ್ದ ಬಸ್ಸಿನ ಚಾಲಕ ಸ್ಥಳದಿಂದ ಪರಾರಿಯಾಗಿದ್ದರು. ಅನಂತರ ಬ್ರೇಕ್ ಇಲ್ಲ ಎಂದು ಹೇಳಿದರೂ ಇನ್ನೋರ್ವ ಚಾಲಕ ಬಸ್ಸನ್ನು ಬದಿಗೆ ಸರಿಸುತ್ತೇನೆಂದು ಹೇಳಿ ಇನ್ನೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆಯುತ್ತಾ ಮುಂದಕ್ಕೆ ಸಾಗಿದ್ದ. ಬಸ್ ನಿಂತ ತತ್‌ಕ್ಷಣ ಆತನೂ ಬಸ್ಸು ಬಿಟ್ಟು ಪರಾರಿಯಾಗಿದ್ದ. ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.