ಹುಣಸೂರು: ಮೈಸೂರಿನಲ್ಲಿ ನಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕಾರ್ಯಕ್ರಮಕ್ಕಾಗಿ ಹುಣಸೂರು ಡಿಪೋದಿಂದ 75 ಬಸ್‌ಗಳನ್ನು ಪಡೆದಿದ್ದರಿಂದ ಬಸ್‌ಗಳಿಲ್ಲದೆ ಪ್ರಯಾಣಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರಾಯಾಸ ಪಟ್ಟರಲ್ಲದೆ ಸರಕಾರಕ್ಕೆ ಹಿಡಿ ಶಾಪ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ರಾತ್ರಿಯಿಂದಲೇ ಹಳ್ಳಿಗಳಿಗೆ ತೆರಳದೆ ಎಲ್ಲಾ ಬಸ್‌ಗಳನ್ನು ಡಿಪೋಗೆ ವಾಪಸ್ ಕರೆಸಿಕೊಂಡಿದ್ದರಿಂದಾಗಿ ಗ್ರಾಮಾಂತರ ಪ್ರದೇಶಕ್ಕೆ ತೆರಳುವ ಮಂದಿ ಪರದಾಡಿದರು. ದುಬಾರಿ ಹಣ ತೆತ್ತು ಖಾಸಗಿ ವಾಹನಗಳಲ್ಲಿ ತೆರಳಿದರು. ಇನ್ನು ಮಂಗಳವಾರವಂತೂ ಬೆಳಗ್ಗೆಯಿಂದಲೇ ಮೈಸೂರು ಹಾಗೂ ಗ್ರಾಮಾಂತರ ಭಾಗಕ್ಕೆ ತೆರಳುವ ಪ್ರಯಾಣಿಕರು, ಶಾಲಾ-ಕಾಲೇಜಿಗೆ ಹಾಗೂ ಪರೀಕ್ಷೆಗಳಿಗೆ ತೆರಳುವ ವಿದ್ಯಾರ್ಥಿಗಳು ಪಡಿಪಾಟಿಲು ಪಟ್ಟು, ಖಾಸಗಿ ಬಸ್, ಟ್ಯಾಕ್ಸ್, ಮ್ಯಾಜಿಕ್ ಆಟೋಗಳಲ್ಲಿ ತೆರಳಿದರು. ನಿಲ್ದಾಣದಲ್ಲಿ ನೂರಾರು ಮಂದಿ ಬೆಳಗ್ಗೆಯಿಂದಲೇ ಬಸ್‌ಗಾಗಿ ಕಾಯ್ದು ಹೈರಾಣಾಗಿದ್ದರು.
ನಿತ್ಯ ಬೆಳಗ್ಗೆ-ಸಂಜೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಿ: ಪ್ರತಿನಿತ್ಯ ಸಂಜೆ ವೇಳೆ 5 ರಿಂದ 8 ಗಂಟೆವರೆಗೆ ಬಸ್‌ಗಳು ವಿರಳವಾಗಿರುವುದರಿಂದ ಹುಣಸೂರು ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳನ್ನು ಅನಿವಾರ್ಯವಾಗಿ ಬಳಸುವಂತಾಗಿದೆ. ಡಿಪೊ ಮ್ಯವಸ್ಥಾಪಕರು, ನಿಲ್ದಾಣದ ಮೇಲ್ವಿಚಾರಕರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸುವಂತೆ ಹರೀನಹಳ್ಳಿಯ ರಮೇಶ್, ರಾಘು ಮನವಿ ಮಾಡಿದ್ದಾರೆ.
ಸರಕಾರಿ ಆದೇಶದಂತೆ 77 ಬಸ್‌ಗಳನ್ನು ಮೈಸೂರು ಕಾರ್ಯಕ್ರಮಕ್ಕೆ ಕಳುಹಿಸಲಾಗಿದ್ದು, ಬಸ್‌ಗಳು ಮರಳಿದ ನಂತರ ಮಂಗಳವಾರ ಸಂಜೆ ಮತ್ತೆ ರೂಟ್‌ಗಳಿಗೆ ಕಳುಹಿಸಲಾಗಿದ್ದು, ಸಹಜ ಸ್ಥಿತಿಗೆ ಮರಳಿದೆ ಎಂದು ಡಿಪೋ ಮ್ಯಾನೇಜರ್ ಸುಬ್ರಮಣ್ಯ ತಿಳಿಸಿದರು.
ಇದನ್ನೂ ಓದಿ: ಗಿರಿಜನ ಆಶ್ರಮ ಶಾಲೆಯ ಗೌರವ ಶಿಕ್ಷಕರು ಗೈರು, ಮಕ್ಕಳ ಪರದಾಟ… ಪೋಷಕರಿಂದ ಪ್ರತಿಭಟನೆ