Advertisement

ಯಾನದರ ಹೆಚ್ಚಳ ಸಾಧ್ಯತೆ

06:00 AM Sep 05, 2018 | Team Udayavani |

ಬೆಂಗಳೂರು: ಡೀಸೆಲ್‌, ಪೆಟ್ರೋಲ್‌ ದರ ಏರಿಕೆ ಬಿಸಿ ನಿಧಾನವಾಗಿ ತಟ್ಟುತ್ತಿರುವಂತೆಯೇ, ಸರ್ಕಾರಿ ಸಾರಿಗೆ ಬಸ್‌ ಪ್ರಯಾಣ ದರ ಶೀಘ್ರದಲ್ಲೇ ಏರುವ ಸಾಧ್ಯತೆ ಇದೆ. “”ಡೀಸೆಲ್‌ ದರ ಹೆಚ್ಚಳ ಹಿನ್ನೆಲೆಯಲ್ಲಿ ಬಸ್‌ ದರ ಏರಿಕೆ ಅನಿವಾರ್ಯ. ಶೇ.18 ರಷ್ಟು ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಎಷ್ಟು ಏರಿಕೆ ಮಾಡಬೇಕು ಎಂಬ ಬಗ್ಗೆ ಚರ್ಚಿಸಲಾಗುತ್ತದೆ” ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಡೀಸೆಲ್‌ ದರ ಏರಿಕೆಯಿಂದ ಸಾರಿಗೆ ಇಲಾಖೆ ನಷ್ಟದಲ್ಲಿದೆ. ಮೂರು ತಿಂಗಳಲ್ಲಿ 180 ಕೋಟಿ ರೂ. ಹೊರೆಯಾಗಿದೆ. ಕೇಂದ್ರ ಸರ್ಕಾರ ಪ್ರತಿದಿನ ಇಂಧನ ದರ ಏರಿಸುತ್ತಿದೆ. ಹೀಗಾಗಿ, ಸಾರಿಗೆ ಸಂಸ್ಥೆಯ 4 ವಿಭಾಗದಲ್ಲಿ ದರ ಏರಿಕೆ ಅನಿವಾರ್ಯ ಎಂದು ತಿಳಿಸಿದರು. 

Advertisement

ಶೇ.18 ರಷ್ಟು ದರ ಹೆಚ್ಚಳ ಕಷ್ಟಸಾಧ್ಯ. ಎಷ್ಟು ಮಾಡಬಹುದು ಎಂಬ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಲಾಗುತ್ತಿದೆ. ಸಂಸ್ಥೆಗೂ ನಷ್ಟವಾಗಬಾರದು, ಪ್ರಯಾಣಿಕರಿಗೂ ಹೊರೆಯಾಗದಂತೆ ಹೆಚ್ಚಿಸಲಾಗುವುದು ಎಂದರು. ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್‌ಗಳಿಂದ ಸುಲಿಗೆ ವಿಚಾರದಲ್ಲಿ ಸಾಕಷ್ಟು ಮೌಖಿಕ ದೂರು ಬರುತ್ತಿವೆ. ಆದರೆ, ದಾಖಲೆ ಇಲ್ಲದೆ ಕ್ರಮ ಅಸಾಧ್ಯ. ಖಾಸಗಿ ಬಸ್‌ಗಳ ಲಾಬಿ ಜೋರಾಗಿರುವುದು ಎಲ್ಲರಿಗೂ ಗೊತ್ತಿದೆ. ಪ್ರಯಾಣಿಕರೂ ಸುಲಿಗೆ ಮಾಡುವ ಬಸ್‌ಗಳ ವಿರುದ್ಧ ದೂರು ಕೊಡುವುದಿಲ್ಲ. ಹಬ್ಬದ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ ಬಸ್‌ ಸಂಚಾರಕ್ಕೆ ಕ್ರಮ ಕೈಗೊಂಡು ಜನರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಆದರೆ, ವಿಶೇಷ ಬಸ್‌ ಸಂಚಾರ ಎಂದು ದರ ಏರಿಕೆ ಮಾಡಲ್ಲ ಎಂದು ಹೇಳಿದರು.

ಶಾಮೀಲು ದೂರು: ಖಾಸಗಿ ಬಸ್‌ ಮಾಲೀಕರ ಜತೆ ಸಾರಿಗೆ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಮಾಹಿತಿಗಳು ಬಂದಿವೆ. ಇದನ್ನೂ ಹಂತ ಹಂತವಾಗಿ ಕಡಿವಾಣ ಹಾಕುತ್ತೇವೆ. ಅಧಿಕಾರಿಗಳು ಮತ್ತು ಖಾಸಗಿ ಬಸ್‌ ಮಾಲೀಕರ ನಡುವೆ ಇದು ತುಂಬಾ ವರ್ಷಗಳಿಂದ ನಡೆದುಕೊಂಡು ಬಂದಿದೆ. ಖಾಸಗಿ ಬಸ್‌ ಲಾಬಿ ತಡೆಯಲು 70 ವರ್ಷದಿಂದ ಸಾಧ್ಯವಾಗಿಲ್ಲ. ಮೂರು ತಿಂಗಳಲ್ಲಿ ನಿಯಂತ್ರಣ ಮಾಡಲು ಸಾಧ್ಯವೇ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.  ಎಲೆಕ್ಟ್ರಿಕ್‌ ಬಸ್‌ಗಳನ್ನು ಖಾಸಗೀಕರಣಗೊಳಿಸುವ ಯೋಜನೆ ಇತ್ತು. ಆದರೆ, ಸಂಸ್ಥೆಯಿಂದಲೇ ಓಡಿಸಿದರೆ ಲಾಭ ಎಂಬ ವಾದವೂ ಇದೆ. ನಾವೇ ಓಡಿಸಬೇಕೆ ಅಥವಾ ಖಾಸಗಿಯವರಿಗೆ ವಹಿಸಬೇಕೇ ಎಂಬ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಅಂತಿಮವಾಗಿ ತೀರ್ಮಾನಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಉಚಿತ ಬಸ್‌ ಪಾಸ್‌ ಗೊಂದಲ 
ಉಚಿತ ಬಸ್‌ ಪಾಸ್‌ ಕುರಿತು ಸಮಾಜ ಕಲ್ಯಾಣ ಸಚಿವರ ಜತೆ ಚರ್ಚಿಸಲಾಗಿದೆ. ಎಸ್‌ಸಿಪಿ, ಟಿಎಸ್‌ಪಿ ಹಣ ಬಳಸಿಕೊಂಡು ಶೇ.25 ರಷ್ಟು ನೆರವು ನೀಡಲು ಸಚಿವರು ಒಪ್ಪಿದ್ದಾರೆ ಎಂದು ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಈಗಾಗಲೇ ಬಹುತೇಕ ವಿದ್ಯಾರ್ಥಿಗಳು ಬಸ್‌ ಪಾಸ ತೆಗೆದುಕೊಂಡಿರುವುದರಿಂದ ಈ ವರ್ಷ ಜಾರಿ ಕಷ್ಟ ಸಾಧ್ಯ. ಈಗಾಗಲೇ ಪಾಸ್‌ ತೆಗೆದುಕೊಂಡವರನ್ನು ಬಿಟ್ಟು ಇನ್ನೂ ಪಾಸ್‌ ಪಡೆಯದವರಿಗೆ ಉಚಿತ ಬಸ್‌ ಪಾಸ್‌ ಸಿಗಬಹುದು. ಅದನ್ನು ಅತಿ ಶೀಘ್ರದಲ್ಲೇ ತೀರ್ಮಾನಿಸಲಾಗುವುದು ಎಂದರು.

ಪ್ರಸ್ತುತ ದರ ಎಲ್ಲೆಲ್ಲಿ ಎಷ್ಟೆಷ್ಟು?
ಪೆಟ್ರೋಲ್‌, ಡೀಸೆಲ್‌ ಬೆಲೆ ವಾರದಿಂದ ಏರಿಕೆಯಾಗುತ್ತಿದೆ. ಒಂದು ತಿಂಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ 3 ರಿಂದ 3.75 ರೂ.ವರೆಗೆ ಹೆಚ್ಚಳವಾಗಿದೆ. ಆಗಸ್ಟ್‌ ಮೊದಲ ವಾರದಲ್ಲಿ ಪೆಟ್ರೋಲ್‌ ದರ ಬೆಂಗಳೂರಿನಲ್ಲಿ 78.82 ರೂ. ಹಾಗೂ ಡೀಸೆಲ್‌ ದರ 70.01 ರೂ. ಇತ್ತು. ಪ್ರಸ್ತುತ ಪೆಟ್ರೋಲ್‌ 81.98 ರೂ., ಡೀಸೆಲ್‌ ದರ 73.72 ರೂ. ಆಗಿದೆ.


 

Advertisement
Advertisement

Udayavani is now on Telegram. Click here to join our channel and stay updated with the latest news.

Next