ಕಾಠ್ಮಂಡು : ಸುಮಾರು 50 ಪ್ರಯಾಣಿಕರಿದ್ದ ಬಸ್ಸು ಇಂದು ನೇಪಾಲದ ಧಾಧಿಂಗ್ ಜಿಲ್ಲೆಯಲ್ಲಿ ಹೆದ್ದಾರಿಯಿಂದ ಜಾರಿ ನದಿಗೆ ಉರುಳಿ ಬಿದ್ದು ಕನಿಷ್ಠ 19 ಮಂದಿ ಮೃತಪಟ್ಟರೆಂದು ಮಾಧ್ಯಮ ವರದಿಗಳು ತಿಳಿಸಿವೆ.
ಈ ಭೀಕರ ಅಪಘಾತದಲ್ಲಿ 15 ಮಂದಿ ಪ್ರಯಾಣಿಕರು ಗಾಯಗೊಂಡು ಇವರಲ್ಲಿ ಕೆಲವರ ಸ್ಥಿತಿ ಗಂಭೀರವಿದೆ.
ರಾಜ್‌ಬಿರಾಜ್‌ನಿಂದ ಕಾಠ್ಮಂಡು ಕಡೆಗೆ ಸಾಗುತ್ತಿದ್ದ ನತದೃಷ್ಟ ಬಸ್ಸು ಇಲ್ಲಿಂದ ಸುಮಾರು 80 ಕಿ.ಮೀ. ದೂರದ ಘಾಟ್‌ಬೇಸಿ ಬಾಂಗೆ ತಿರುವಿನಲ್ಲಿ ಹೆದ್ದಾರಿಯಿಂದ ಜಾರಿ ನದಿಗೆ ಉರುಳಿ ಬಿತ್ತು ಎಂದು ಕಾಠ್ಮಂಡು ಪೋಸ್ಟ್ ವರದಿ ಮಾಡಿದ.
ತ್ರಿಶೂಲಿ ನದಿಯಿಂದ ಈ ತನಕ ಐವರು ಮಹಿಳೆಯರು ಮತ್ತು ಎರಡು ಶಿಶುಗಳು ಸೇರಿದಂತೆ ಒಟ್ಟು ಹದಿನಾಲ್ಕು ಮೃತ ದೇಹಗಳನ್ನು ಮೇಲಕ್ಕೆತ್ತಲಾಗಿದೆ. ಮೃತರ ಗುರುತನ್ನು ಇನ್ನಷ್ಟೇ ತಿಳಿಯಬೇಕಾಗಿದೆ ಎಂದು ಧಧಿಂಗ್‌ನಲ್ಲಿನ ಪೊಲೀಸ್ ಸೂಪರಿಂಟೆಂಡೆಂಟ್ ಧ್ರುವರಾಜ್ ರಾವುತ್ ತಿಳಿಸಿದ್ದಾರೆ.
ಬಸ್ಸಿನಲ್ಲಿದ್ದ ಪ್ರಯಾಣಿಕರಲ್ಲಿ 15 ಮಂದಿ ನದಿಯಲ್ಲಿ ಈಜಿಕೊಂಡು ದಡ ತಲುಪಿ ಜೀವ ಉಳಿಸಿಕೊಂಡಿದ್ದಾರೆ. ಬಸ್ಸಿನಲ್ಲಿ ನಿಖರವಾಗಿ ಎಷ್ಟು ಪ್ರಯಾಣಿಕರು ಇದ್ದರು ಎಂಬುದು ಗೊತ್ತಾಗಿಲ್ಲ.
ಕೆಲವು ಪ್ರಯಾಣಿಕರು ಇನ್ನೂ ಬಸ್ಸಿನೊಳಗೆ ಸಿಲುಕಿರಬಹುದು. ರಕ್ಷಣಾ ಕಾರ್ಯ ಚುರುಕಿನಿಂದ ಸಾಗುತ್ತಿದೆ ಎಂದು ರಾವುತ್ ತಿಳಿಸಿದ್ದಾರೆ.