ಬೆಂಗಳೂರು: 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಜೂನ್ 7ರಿಂದ ರಿಯಾಯಿತಿ ದರದ
ಬಸ್ ಪಾಸುಗಳ ವಿತರಣೆ ಮಾಡಲಾಗುವುದು.
ಎಲ್ಲ ಬಸ್ ನಿಲ್ದಾಣಗಳು ಮತ್ತು ನಿಗಮದ ವೆಬ್‌ಸೈಟ್
(www.ksrtc.in)ನಲ್ಲಿ ಪಾಸುಗಳ ಅರ್ಜಿಗಳು ಲಭ್ಯ. ಭರ್ತಿ ಮಾಡಿದ ಅರ್ಜಿಗಳನ್ನು ಶಾಲೆಗಳಲ್ಲಿ ದೃಢೀಕರಿಸಬೇಕು. ಹಾಗೂ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವ ಶಾಲೆಗಳ ಮುಖಾಂತರ ಪಾಸುಗಳನ್ನು ವಿತರಿಸಲಾಗುವುದು.
ನೇರವಾಗಿ ಪಾಸ್ ಕೌಂಟರ್‌ಗೆ ಬರುವ ಅವಶ್ಯಕತೆ ಇಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸ್ಪಷ್ಟಪಡಿಸಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಈಗಾಗಲೇ ಜಾರಿಗೆ ಬಂದಿರುವಂತೆ ಉಚಿತ ಪಾಸು ವಿತರಣೆ ಆಗಲಿದೆ. ಈ ವಿದ್ಯಾರ್ಥಿಗಳು ಸಂಸ್ಕರಣಾ ಶುಲ್ಕ ಮತ್ತು ಅಪಘಾತ ಪರಿಹಾರ ನಿಧಿ ಸೇರಿ ಒಟ್ಟಾರೆ 150 ರೂ.ಗಳೊಂದಿಗೆ ಅರ್ಜಿ ಹಾಗೂ ಜಾತಿ ಪ್ರಮಾಣಪತ್ರದ ಪ್ರತಿ ಸಲ್ಲಿಸಬೇಕು ಎಂದು ನಿಗಮದ ಪ್ರಕಟಣೆ ತಿಳಿಸಿದೆ.