ಆಂಧ್ರಪ್ರದೇಶ : ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಆರು ವರ್ಷದ ಮಗು ಸೇರಿದಂತೆ ಏಳು ಮೃತಪಟ್ಟು 29 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ದರ್ಸಿ ಎಂಬಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.
ಮಂಗಳವಾರ ಮುಂಜಾನೆ ಬಸ್ ಪೊಡಿಲಿಯಿಂದ ಕಾಕಿನಾಡಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಎದುರಿಗೆ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸುತ್ತಿದ್ದಾಗ ನಿಯಂತ್ರಣ ತಪ್ಪಿದ ಬಸ್ ನಾಗಾರ್ಜುನ ಸಾಗರ ಬಲ ಕಾಲುವೆಗೆ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೃತರನ್ನು ಅಬ್ದುಲ್ ಫ್ಲಾಗಿಜ್ (65), ಅಬ್ದುಲ್ ಹನಿ (60), ಶೇಖ್ ರಮೀಜ್ (48), ಮುಲ್ಲಾ ನೂರ್ಜಹಾನ್ (58), ಮುಲ್ಲಾ ಜಾನಿ ಬೇಗಂ (65), ಶೇಖ್ ಸಬೀನಾ (35), ಮತ್ತು ಶೇಖ್ ಹಿನಾ (6) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಮದುವೆ ಸಮಾರಂಭಕ್ಕೆ ಪ್ರಯಾಣಿಕರನ್ನು ಹೊತ್ತು ಕಾಕಿನಾಡ ಕಡೆಗೆ ತೆರಳುತ್ತಿದ್ದ ಬಸ್ಸು ಪೊಡಿಲಿಯಿಂದ ಹೊರಟಿತು. ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಬಸ್ಸು ಡಿಕ್ಕಿ ಹೊಡೆಯುತ್ತದೆ ಎಂದು ತಪ್ಪಿಸಲು ಚಾಲಕ ಬಸ್ಸನ್ನು ಎಡಕ್ಕೆ ತಿರುಗಿಸಿದ್ದಾನೆ ದುರದೃಷ್ಟವಶಾತ್ ಬಸ್ ಕಾಂಕ್ರೀಟ್ ಗೋಡೆಗೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ನಾಗಾರ್ಜುನ ಸಾಗರ ಕಾಲುವೆಗೆ ಬಿದ್ದಿದೆ.
ಬಸ್ಸಿನಲ್ಲಿದ್ದ 47 ಪ್ರಯಾಣಿಕರಲ್ಲಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಕಾಶಂ ಎಸ್ಪಿ ಮಲ್ಲಿಕಾ ಗಾರ್ಗ್ ಹೇಳಿದ್ದಾರೆ.
ಬಸ್ ಅಪಘಾತದ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರಿಗೆ ಉತ್ತಮ ವೈದ್ಯಕೀಯ ಸೇವೆ ನೀಡಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ನನಗೆ ಭಯವಾಗುತ್ತಿದೆ… ನೇಣಿಗೆ ಶರಣಾದ ಉಪನ್ಯಾಸಕ : ಫ್ರಿಡ್ಜ್ ನಲ್ಲಿತ್ತು ಡೆತ್ ನೋಟ್