ಮಂಗಳೂರು: ಕೋವಿಡ್-19 ಲಾಕ್ ಡೌನ್ ಕಾರಣದಿಂದ ಬಾಕಿಯಾಗಿದ್ದ ದ್ವಿತೀಯ ಪಿಯುಸಿಯ ಇಂಗ್ಲೀಷ್ ಪರೀಕ್ಷೆ ಇಂದು ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 51 ಪರೀಕ್ಷಾ ಕೇಂದ್ರ ಗಳಿದ್ದು, 26,942 ವಿದ್ಯಾರ್ಥಿಗಳು ಇಂದು ಪರೀಕ್ಷೆ ಬರೆಯುತ್ತಿದ್ದಾರೆ.
ಮಂಗಳೂರಿಗೆ ಹೊಂದಿಕೊಂಡಿರುವ ಕೇರಳದಿಂದ 1,137 ಮಂದಿ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಈ ಕಾರಣಕ್ಕೆ ತಲಪಾಡಿಯಿಂದ 22 ಕೆಎಸ್ಆರ್ ಟಿಸಿ ಮತ್ಯು 12 ಖಾಸಗಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಿದ್ದು, ಎಲ್ಲಾ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಬರಬೇಕೆಂದು ಸೂಚಿಸಲಾಗಿದೆ. ಪ್ರತಿ ಕೋಣೆಯಲ್ಲಿ 24 ವಿದ್ಯಾರ್ಥಿಗಳು ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದ್ದು, ಅನಾರೋಗ್ಯವಿರುವ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ವಿದ್ಯಾರ್ಥಿಗಳಿಗೆ ಥರ್ಮಲ್ ಟೆಸ್ಟ್ ನಡೆಸಿ ಪರೀಕ್ಷಾ ಕೊಠಡಿಗಳಿಗೆ ಕಳುಹಿಸಲಾಗುತ್ತಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಆರೋಗ್ಯ ಇಲಾಖೆಯಿಂದ ಒರ್ವ ವೈದ್ಯೆ ,ನರ್ಸ್ ನಿಯೋಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳಿಗೆ 200ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.