ಹಾವೇರಿ: ಖಾಸಗಿ ಬಸ್ಸೊಂದು ಪಲ್ಟಿಯಾಗಿ ಸೇತುವೆ ಮೇಲಿಂದ ಸರ್ವೀಸ್ ರಸ್ತೆಗೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ದೇವಗಿರಿ ಬಳಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಡೆದಿದೆ.
ಬೆಂಗಳೂರಿನಿಂದ ಗೋಕಾಕ್ ಗೆ ಸಂಚರಿಸುತ್ತಿದ್ದ ವಿಆರ್ಎಲ್ ಬಸ್ ಪಲ್ಟಿಯಾಗಿದ್ದು, ಚಾಲಕ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ಹದಿನೈದು ಜನರಿಗೆ ಗಾಯಗಳಾಗಿದ್ದು, ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಬಳಿಯ ಪೂನಾ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೇತುವೆ ಮೇಲೆ ವಿಆರ್ಎಲ್ ಬಸ್ ಸಂಚರಿಸುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಪಲ್ಟಿಯಾಗಿ ಸರ್ವೀಸ್ ರಸ್ತೆಗೆ ಬಿದ್ದಿದೆ. ಭಯಂಕರ ಶಬ್ದ ಕೇಳಿದ ಸ್ಥಳೀಯರು ಕೂಡಲೇ ಸಹಾಯಕ್ಕೆ ದೌಡಾಯಿಸಿ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಕ್ಕೆ ಕೈ ಹಾಕಿದರು.
ಇದನ್ನೂ ಓದಿ:ವಾಹನ ಚಲಾಯಿಸುವಾಗಲೂ ಮೊಬೈಲ್ ಬಳಸುವುದು ಶೀಘ್ರವೇ ಕಾನೂನು ಬದ್ಧ…ಆದರೆ
ಸುದ್ದಿ ತಿಳಿದಾಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರೊಂದಿಗೆ ಕೈ ಜೋಡಿಸಿ ರಕ್ಷಣಾ ಕಾರ್ಯ ಮುಂದುವರಿಸಿದರು.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಅಗ್ನಿಶಾಮಕ ದಳ ಕ್ರೇನ್ನ ಸಹಾಯದಿಂದ ಬಸ್ ಮೇಲೆತ್ತಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.
ಸ್ಥಳಕ್ಕೆ ಡಿವೈಎಸ್ಪಿ ಶಂಕರ ಮಾರಿಹಾಳ, ಸಿಪಿಐ ನಾಗಮ್ಮ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.