ಮಧುಗಿರಿ: ಶ್ರೀಕ್ಷೇತ್ರ ಮಠದಿಂದ ಆರಂಭವಾಗಿರುವ ಸಂಸ್ಕೃತ ಪಾಠಶಾಲೆಯ ಅಗತ್ಯಕ್ಕೆ ನೆರವಾಗಲು ಹಾಲಪ್ಪ ಪ್ರತಿಷ್ಠಾನವು ಮುಂದಾಗಿದ್ದು, ಮಠದ ಶಾಲೆಯ ಮಕ್ಕಳ ಸಂಚಾರಕ್ಕಾಗಿ ಮಿನಿಬಸ್ ದಾನವಾಗಿ ನೀಡಿ ಸಮಾಜದ ಋಣ ತೀರಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಶ್ರೀ ಹಾಲಪ್ಪ ಪ್ರತಿಷ್ಠಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಿನಿಬಸ್ ಸ್ವೀಕಾರ ಮಾಡಿ ಮಾತನಾಡಿದ ಶ್ರೀಗಳು, ದೇವರು ಮನುಷ್ಯನಿಗೆ ಎಲ್ಲವನ್ನೂ ಕೊಡುತ್ತಾನೆ. ಆದರೆ ದಾನ ನೀಡುವ ಮನಸ್ಸು ಮಾತ್ರ ಕೆಲವರಿಗೆ ಕೊಡುತ್ತಾನೆ. ಆ ನಿಟ್ಟಿನಲ್ಲಿ ಮುರಳೀಧರ ಹಾಲಪ್ಪನವರು ನಿಜಕ್ಕೂ ಯುವಶಕ್ತಿಗೆ ಮಾದರಿಯಾಗಿದ್ದಾರೆ. ಜಾತಿಭೇದವಿಲ್ಲ ದೆ ಮಠದಲ್ಲಿ ಮಕ್ಕಳಿಗೆ ಉಚಿತವಾಗಿ ಊಟ, ಬಟ್ಟೆ ಹಾಗೂ ಶಿಕ್ಷಣವನ್ನು ನೀಡುತ್ತಿದ್ದು, ಮೆಡಿಕಲ್ ವರೆಗೂ ಓದಲು ಇಷ್ಟಪಟ್ಟರೆ ಮಠದಿಂದ ವಿದ್ಯಾ ಭ್ಯಾಸ ಮಾಡಿಸಲಾಗುವುದು. ಬಡ ಕುಟುಂಬದ ಮಕ್ಕಳು ಎಷ್ಟಿದ್ದರೂ ಮಠಕ್ಕೆ ತಂದುಬಿಡಿ ಸಧೃಡ ದೇಶದ ಉತ್ತಮ ಪ್ರಜೆಗಳಾಗಿ ನಿಮ್ಮ ಮಡಿಲಿಗೆ ಕೊಡುತ್ತೇವೆ. ಮಕ್ಕಳಿಗೆ ಕೇವಲ ಪುಸ್ತಕದ ಶಿಕ್ಷಣ ನೀಡಿದರೆ ಸಾಲದು. ಸಂಸ್ಕೃತಿಯನ್ನು ನೀಡಬೇಕು ಇದಕ್ಕಾಗಿ ಸಂಸ್ಕೃತ ಪಾಠ ಬಹುಮುಖ್ಯ ಎಂದರು.
ಇಂತಹ ಕಾರ್ಯದಲ್ಲಿ ಡಾ.ಹಾಲಪ್ಪ ಕುಟುಂಬವು ಸಮಾಜದ ಆಸ್ತಿಯಾಗಿದ್ದು, ಶ್ರೀಮಠವು ಸದಾ ಅವರ ಅಭಿವೃದ್ದಿ ಬಯಸುತ್ತದೆ. ಸರ್ಕಾರಕ್ಕೆ ಮಧುಗಿರಿಯನ್ನು ಜಿಲ್ಲಾಕೇಂದ್ರ ಮಾಡುವಂತೆ ಸಿಎಂ ರವರಿಗೆ ಮನವಿ ಸಲ್ಲಿಸಿದ್ದು, ಈ ಹೋರಾಟದಲ್ಲಿ ಭಕ್ತರೊಂದಿಗೆ ಮುಖ್ಯ ಭೂಮಿಕೆ ನಿರ್ಮಿಸಲು ಶ್ರೀಮಠ ಸಿದ್ದವಾಗಿದೆ ಎಂದರು.
ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕೌಶಲ್ಯಾಭಿದ್ದಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಹೆಚ್ಚಿನ ವಿದ್ಯಾಭ್ಯಾಸ ಮಾಡಿದರೂ ಆಚಾರ ಹಾಗೂ ಸಂಸ್ಕೃತವಿಲ್ಲದ ವಿದ್ಯೆ ಕನಿಷ್ಠದ್ದು. ಇಂತಹ ಸಂಸ್ಕೃತ ಶಾಲೆಗಳು ಉತ್ತರ ಕರ್ನಾಟಕ, ಮೈಸೂರು ಭಾಗದಲ್ಲಿದ್ದು, ತುಮಕೂರು ಜಿಲ್ಲೆಯಲ್ಲಿ ಶ್ರೀಮಠದಿಂದ ಆರಂಭಿಸಿರುವುದು ಸಂತಸ ಸಂಗತಿ ಎಂದರು.
ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಡಿವೈಎಸ್ಪಿ ರಾಮಕೃಷ್ಣ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಶಂಕರನಾರಾಯಣ, ಸದಸ್ಯರಾದ ಗಂಗರಾಜು, ನಾರಾಯಣ್, ಕುಂಚಿಟಿಗ ಒಕ್ಕಲಿಗ ಸಂಘದ ಅಧ್ಯಕ್ಷ ರಾಜಶೇಖರ್, ಕಾರ್ಯದರ್ಶಿ ಉಮೇಶ್, ಆರ್ಯ ವೈಶ್ಯ ಸಂಘದ ಅಧ್ಯಕ್ಷ ಶ್ರೀನಿವಾಸ್, ರೋಟರಿ ಅಧ್ಯಕ್ಷ ಶಿವಲಿಂಗಪ್ಪ, ಉಪಾಧ್ಯಕ್ಷ ಕರಿಯಣ್ಣ, ಧಾರ್ಮಿಕ ಮುಖಂಡರಾದ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಎಂ.ಎನ್ .ನರಸಿಂಹಮೂರ್ತಿ, ಬಿಜವರ ಶ್ರೀನಿವಾಸ್, ಜಗದೀಶ್, ಧನಪಾಲ್, ಸಿಸ್ಟೆಲ್ ಮಂಜುನಾಥ್, ನಾಗಭೂಷಣ್, ಶಿವರಾಮಯ್ಯ ಇತರರಿದ್ದರು.