Advertisement

ಬಾರ್ಕೂರು-ಪಾಂಡೇಶ್ವರ ರಸ್ತೆಗೆ ಬೇಕಿದೆ ಬಸ್‌ ಸಂಪರ್ಕ

06:05 AM Apr 14, 2018 | Team Udayavani |

ಕೋಟ:  ಪ್ರಮುಖ ಗ್ರಾಮೀಣ ಮುಖ್ಯ ರಸ್ತೆಯಾಗಿರುವ ಸಾಸ್ತಾನದ ಪಾಂಡೇಶ್ವರ -ಬಾರ್ಕೂರು ನಡುವಿನ  ಸಂಪರ್ಕಕ್ಕೆ ಬಸ್ಸು  ವ್ಯವಸ್ಥೆ ಬೇಕು ಎನ್ನುವುದು ಈ ಭಾಗದ ನಿವಾಸಿಗಳ ಹಲವು ವರ್ಷಗಳ ಕನಸು. ರಸ್ತೆ ಇಕ್ಕಟ್ಟಾಗಿರುವುದು ಈವರೆಗೆ ಇವರ ಕನಸಿಗೆ ಅಡ್ಡಿಯಾಗಿತ್ತು.ಈಗ ಕೋಟ್ಯಂತರ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ ಯಾಗಿದ್ದು, ಬೇಡಿಕೆಗೆ ಮತ್ತೆ ಜೀವ ಬಂದಿದೆ. 
 
ಸುತ್ತಿ ಬಳಸಿ ಸಂಚರಿಸಬೇಕು
ಸಾಸ್ತಾನ  ಆಸುಪಾಸಿನ  ನಿವಾಸಿಗಳು ಬಸ್ಸಿನಲ್ಲಿ ಬಾರ್ಕೂರಿಗೆ ತೆರಳ ಬೇಕಾದರೆ ಬ್ರಹ್ಮಾವರ ಮೂಲಕ 12.5 ಕಿ.ಮೀ. ಸುತ್ತಿಬಳಸಿ ಪ್ರಯಾಣಿಸಬೇಕು ಅಥವಾ ಕೋಟ ಹೈಸ್ಕೂಲ್‌ದಿಂದ ಸಾೖಬ್ರಕಟ್ಟೆಗೆ ತೆರಳಿ ಅಲ್ಲಿಂದ ಮತ್ತೂಂದು ಬಸ್ಸಿನಲ್ಲಿ  20 ಕಿ.ಮೀ. ಸುತ್ತಿ ಬಾರ್ಕೂರಿಗೆ ಹೋಗಬೇಕು. ಆದರೆ ಪಾಂಡೇಶ್ವರ ಮೂಲಕ ಬಾಕೂìರಿಗೆ ಸಂಚರಿಸುವುದಾದರೆ ಕೇವಲ 6 ಕಿ.ಮೀ. ದೂರವಿದೆ.

Advertisement

ಈ ಹಿಂದಿನ ಸಮಸ್ಯೆ ಈಗಿಲ್ಲ
ಸುಮಾರು ಹತ್ತು ವರ್ಷದ ಹಿಂದೆ ಈ ರಸ್ತೆಯಲ್ಲಿ ಆರೇಳು ತಿಂಗಳು ಬಸ್ಸು ಸಂಚಾರ ನಡೆದಿತ್ತು. ಆದರೆ ಆಗ ರಸ್ತೆ ಕಿರಿದಾಗಿದ್ದರಿಂದ ಘನವಾಹನ ಎದುರಾದರೆ ಬದಿಗೆ ಸರಿಯಲು ಸಮಸ್ಯೆಯಾಗುತಿತ್ತು. ಹೀಗಾಗಿ ಸಂಚಾರ ಸ್ಥಗಿತಗೊಂಡಿತ್ತು. ಈಗ ಸಾಸ್ತಾನ ತಿರುವಿನಿಂದ ಮೂಡಹಡು ಕುದ್ರು ತನಕ 15 ಅಡಿ ಅಗಲದ ರಸ್ತೆ ನಿರ್ಮಾಣಗೊಂಡಿದೆ.  ಹೀಗಾಗಿ ಹಿಂದಿನ ಸಮಸ್ಯೆ ಇಲ್ಲ. ಆದರೆ ಬೆಣ್ಣೆಕುದ್ರು ದೇವಸ್ಥಾನದ ಬಳಿ ಇರುವ ದೊಡ್ಡ  ಸೇತುವೆಯಿಂದ – ರಥಬೀದಿಯ ವರೆಗೆ  ರಸ್ತೆ ಇಕ್ಕಟ್ಟಾಗಿದೆ ಹಾಗೂ  ಒಂದು ಸೇತುವೆ ಶಿಥಿಲಗೊಂಡಿದೆ. ಹೀಗಾಗಿ ಸ್ವಲ್ಪ ಸಮಸ್ಯೆಯಾಗಬಹುದು. ಆದರೆ ಇದರ ಅಭಿವೃದ್ಧಿಯ ಮಾತುಗಳೂ ಕೇಳಿಬರುತ್ತಿವೆ. ಹೀಗಾಗಿ ರಸ್ತೆ ಅಭಿವೃದ್ಧಿಯಾಗುವ ತನಕ ಮಿನಿ ಬಸ್‌ ಓಡಾಟ ನಡೆಸಿದರೆ ಯಾವುದೇ ಸಮಸ್ಯೆ ಇರಲಾರದು.

ಪ್ರಮುಖ ರಸ್ತೆ 
ಬಾರ್ಕೂರಿನಲ್ಲಿ  ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರವಿದ್ದು ಇಲ್ಲಿಗೆ ಸಾಸ್ತಾನ, ಪಾಂಡೇಶ್ವರ, ಸಾಲಿಗ್ರಾಮ, ಮಾಬುಕಳ ಭಾಗದಿಂದ ನೂರಾರು ವಿದ್ಯಾರ್ಥಿಗಳು ಪ್ರತಿದಿನ ತೆರಳುತ್ತಾರೆ. ಇವರೆಲ್ಲರು ಇದೀಗ  ಸುತ್ತಿ ಬಳಸಿಯೇ ಬಾರ್ಕೂರು ತಲುಪುತ್ತಿದ್ದಾರೆ. ಬಾಕೂìರಿನಲ್ಲಿ ಹಲವಾರು ಧಾರ್ಮಿಕ ಕೇಂದ್ರಗಳಿದ್ದು ಅಲ್ಲಿಗೆ ಭೇಟಿ ನೀಡುವವರಿಗೂ ಬಸ್‌ ಸೌಕರ್ಯ ಇದ್ದರೆ ಅನುಕೂಲವಾಗಲಿದೆ ಮತ್ತು ಮಂದಾರ್ತಿ-ಕೊಕ್ಕರ್ಣೆಗೆ ಸಂಚರಿಸುವವರಿಗೂ ಈ  ಮಾರ್ಗ ಅನುಕೂಲಕರವಾಗಿದೆ.

ಬಸ್‌ ಅಗತ್ಯ 
ಪಾಂಡೇಶ್ವರ-ಬಾರ್ಕೂರು ರಸ್ತೆಯಲ್ಲಿ ಪ್ರತಿದಿನ ನೂರಾರು ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಸಾರ್ವಜನಿಕರು ಓಡಾಟ ನಡೆಸುತ್ತಾರೆ. ಬಸ್ಸು ಸಂಚಾರ ಆರಂಭಗೊಂಡರೆ ಇವರಿಗೆಲ್ಲ ಅನುಕೂಲವಾಗಲಿದೆ.  ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕಿದೆ.
– ಅಲ್ವಿನ್‌ ಅಂಡ್ರಾಡೆ, ಸ್ಥಳೀಯರು

– ರಾಜೇಶ ಗಾಣಿಗ ಅಚ್ಲಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next