ಗದಗ: ರಸ್ತೆ ದಾಟುತ್ತಿದ್ದ ಬಾಲಕ ಮೇಲೆ ಹರಿದ ಸಾರಿಗೆ ಬಸ್, ಬಳಿಕ ನಿಯಂತ್ರಣ ಕಳೆದುಕೊಂಡು ಕಾರು ಮತ್ತು ವಿದ್ಯುತ್ ಪರಿವರ್ತಕಕ್ಕೆ ಡಿಕ್ಕಿ ಹೊಡೆದಿದೆ. ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, 30 ಕ್ಕೂ ಹೆಚ್ಚು ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿರುವ ಘಟನೆ ನಗರದಲ್ಲಿ ಗುರುವಾರ ನಡೆದಿದೆ.
ಮೃತ ಬಾಲಕನನ್ನು ಸ್ಥಳೀಯ ನಿವಾಸಿ ಕಿಶನ್ ಶಿರಹಟ್ಟಿ (8) ಎಂದು ಗುರುತಿಸಲಾಗಿದೆ.
ರಾಣೆಬೆನ್ನೂರಿನಿಂದ ಗದಗ ಮಾರ್ಗವಾಗಿ ರಾಯಚೂರಿಗೆ ಹೊರಟಿದ್ದ ಬಸ್ ನಗರದ ಭೀಷ್ಮ ಕೆರೆ ಸಮೀಪದ ಬನ್ನಿಕಟ್ಟಿ ಬಳಿ ಮುಖ್ಯ ರಸ್ತೆಯಲ್ಲಿ ಏಕಾಏಕಿ ಅಡ್ಡಬಂದ ಬಾಲಕನ ಮೇಲೆ ಹರಿದಿದೆ. ಬಳಿಕ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದು, ಟ್ರಾನ್ಸ್ ಫಾರ್ಮರ್ ಗೆ ಗುದ್ದಿದೆ. ಈ ವೇಳೆ ವಿದ್ಯುತ್ ಪರಿವರ್ತಕದಿಂದ ಭಾರೀ ಶಬ್ಧ ಬಂದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಬಸ್ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಈ ಕುರಿತು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮೃತ ಬಾಲಕನ ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಬಳಿಕ ಸ್ಥಳಕ್ಕೆ ಧಾವಿಸಿದ ಡಿವೈಎಸ್ಪಿ ವಿಜಯ ಕುಮಾರ ತಳವಾರ ನೇತೃತ್ವದ ಪೊಲೀಸ್ ಸಿಬ್ಬಂದಿ ಸಾರ್ವಜನಿಕರನ್ನು ಚದುರಿಸಿ, ಪರಿಸ್ಥಿತಿ ತಿಳಿಗೊಳಿಸಿದರು.
ಈ ಕುರಿತು ಗದಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.