Advertisement

ಎತ್ತಿನಗಾಡಿಗೆ ಬಸ್‌ ಡಿಕ್ಕಿ: ಪರಿಹಾರಕ್ಕಾಗಿ ಪ್ರತಿಭಟನೆ

03:41 PM Oct 14, 2019 | Suhan S |

ಭಾರತೀನಗರ: ಸಾರಿಗೆ ಬಸ್‌ ಎತ್ತಿನ ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಗಾಡಿ ಜಖಂಗೊಂಡು ಎತ್ತು ತೀವ್ರವಾಗಿ ಗಾಯಗೊಂಡಿರುವ ಘಟನೆ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ. ಯಡಗನಹಳ್ಳಿ ಗ್ರಾಮದ ರೈತ ಆನಂದ್‌ ಎಂಬುವವರ ಎತ್ತಿನಗಾಡಿ ಜಖಂಗೊಂಡಿರುವುದು.

Advertisement

ಇಲ್ಲಿನ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ರೈತ ಆನಂದ್‌ ಎತ್ತಿನ ಗಾಡಿಯಲ್ಲಿ ಕಬ್ಬು ತುಂಬಿಕೊಂಡು ಬರುತ್ತಿದ್ದಾಗ ಸಾರಿಗೆ ಬಸ್‌ ಕೆಎ 57 ಎಫ್ 2849 ಡಿಕ್ಕಿಹೊಡೆದಿದ್ದರಿಂದ ಗಾಡಿ ಜಖಂಗೊಂಡು ಎತ್ತು ತೀವ್ರವಾಗಿ ಪೆಟ್ಟುಬಿದ್ದಿದೆ. ಇದರಿಂದ ಕುಪಿತಗೊಂಡ ರೈತ ಆನಂದ್‌ ಸ್ಥಳದಲ್ಲೇ ಕಬ್ಬು ತುಂಬಿದ ಗಾಡಿಯನ್ನು ನಿಲ್ಲಿಸಿ, ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಇದಕ್ಕೆ ಕಾರ್ಖಾನೆಗೆ ಸರಬರಾಜು ಮಾಡುತ್ತಿದ್ದ ಎತ್ತಿನ ಗಾಡಿಯ ಎಲ್ಲಾ ರೈತರು ಮದ್ದೂರು-ಮಳವಳ್ಳಿ ಮುಖ್ಯರಸ್ತೆಯನ್ನು ಕಬ್ಬು ತುಂಬಿದ ಎತ್ತಿನ ಗಾಡಿಯನ್ನು ರಸ್ತೆ ಮಧ್ಯೆದಲ್ಲಿ ನಿಲ್ಲಿಸುವ ಮೂಲಕ ಸಂಚಾರಕ್ಕೆ ಬಂದ್‌ಗೊಳಿಸಿ ಪ್ರತಿಭಟನೆ ನಡೆಸಿದರು. ಗಾಯಗೊಂಡ ಎತ್ತನ್ನು ಡಿಕ್ಕಿಹೊಡೆದ ಸಾರಿಗೆ ಬಸ್‌ಗೆ ಕಟ್ಟಿನಿಲ್ಲಿಸಿ ಪರಿಹಾರ ಕೊಡುವವರೆವಿಗೂ ಇಲ್ಲಿಂದ ಜರುಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ಸಾಲು-ಸಾಲು ವಾಹನಗಳ ಸಂಚಾರ ಸ್ಥಗಿತಗೊಂಡಿತು. ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಸ್ಥಳಕ್ಕೆ ಸಿಪಿಐ ಮಂಜುನಾಥ್‌ ಧಾವಿಸಿ, ಗಾಡಿ ಮಾಲಿಕರೊಂದಿಗೆ ಮಾತುಕತೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಒಂದು ಗಂಟೆಗೂ ಹೆಚ್ಚು ತಾಸು ಸಂಚಾರ ಸ್ಥಗಿತಗೊಂಡಿದ್ದರಿಂದ ವಾಹನಗಳ ದಟ್ಟಣೆ ಹೆಚ್ಚಾಯಿತು. ನಂತರ ವಾಹನಗಳನ್ನು ಪರ್ಯಾಯ ಮಾರ್ಗವಾಗಿ ಕಳುಹಿಸಲು ಪೊಲೀಸರು ಮುಂದಾದರು. ಕೆ.ಎಂ.ದೊಡ್ಡಿ ಪೊಲೀಸರು ಸಾರಿಗೆ ಬಸ್‌ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next