Advertisement

ಮೃತ್ಯುವಾಗಿ ಕರೆದಿತ್ತು ವರಮಹಾಲಕ್ಷ್ಮಿ ಪೂಜೆ : ಒಂದೇ ಕುಟುಂಬದ ಐವರ ದುರಂತ ಅಂತ್ಯ

01:11 PM Aug 13, 2020 | sudhir |

ವಿಜಯಪುರ: ಚಿತ್ರದುರ್ಗ ಜಿಲ್ಲೆಯಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದ ಬಸ್‌ ಅಗ್ನಿ ದುರಂತದಲ್ಲಿ ವಿಜಯಪುರ ಮೂಲದ ಐವರು ಸಜೀವ ದಹನವಾಗಿರುವ ದುರ್ಘ‌ಟನೆ ಜಿಲ್ಲೆಯ ಜನರನ್ನು ದಂಗುಬಡಿಸಿದೆ. ಕೋವಿಡ್‌ ಕಾರಣಕ್ಕೆ ಎರಡು
ತಿಂಗಳಿಂದ ವಿಜಯಪುರದಲ್ಲೇ ಇದ್ದರು. ಮಂಗಳವಾರ ಮನೆ ಹೆಣ್ಣು ಮಕ್ಕಳು ತವರು ಬಿಡುವುದು ಬೇಡವೆಂದರೂ ಬೆಂಗಳೂರಿಗೆ ಹೊರಟವರನ್ನು ಕಾಲ ಹಬ್ಬದ ನೆಪದಲ್ಲಿ ಕರೆದೊಯ್ದಿದ್ದಾನೆ. ಕಾಲನ ಕರೆಗೆ ಮಾರ್ಗ ಮಧ್ಯದಲ್ಲೇ ಮೂವರ ಮಕ್ಕಳೊಂದಿಗೆ
ಇಬ್ಬರು ಸಹೋದರಿಯರು ಸಜೀವ ದಹನವಾಗಿದ್ದು ಕುಟುಂಬದಲ್ಲಿ ಆಕ್ರಂದನ ಮನೆ ಮಾಡಿದೆ.

Advertisement

ಚಿತ್ರದುರ್ಗ ಜಿಲ್ಲೆ ಹಿರಿಯೂರು ಗ್ರಾಮೀಣ ಠಾಣೆ ವ್ಯಾಪ್ತಿಯ ಕೆ.ಆರ್‌. ಹಳ್ಳಿ ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಗಿನ ಜಾವ 4 ಗಂಟೆಗೆ ಸಂಭವಿಸಿದ ಬಸ್‌ ಅಗ್ನಿ ದುರಂತದಲ್ಲಿ ಮೃತಪಟ್ಟ ಐವರೂ ವಿಜಯಪುರದ ಗಣೇಶನಗರ ನಿವಾಸಿಗಳು.
ಐವರೂ ಒಂದೇ ಕುಟುಂಬಕ್ಕೆ ಸೇರಿದ ತಾಯಿ-ಮಕ್ಕಳು. ಮೃತರನ್ನು 29 ವರ್ಷದ ಕವಿತಾ ವಿನಾಯಕ, ಆಕೆಯ ಮಗಳು 3 ನಿಶ್ಚಿತಾ, ಅಕ್ಕ 33 ವರ್ಷದ ಶೀಲಾ ರವಿ, ಆಕೆಯ ಮಕ್ಕಳಾದ 8 ವರ್ಷದ ಸ್ಪರ್ಶ ಹಾಗೂ 5 ವರ್ಷದ ಸಮೃದ್ಧ ಎಂದು ಗುರುತಿಸಲಾಗಿದೆ.

ವಿಜಯಪುರದ ಗಣೇಶನಗರದ ಕವಿತಾಳನ್ನು ಬೆಂಗಳೂರು ಮೂಲದ ವಿನಾಯಕ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಬೆಂಗಳೂರಿನಲ್ಲಿ ಕೋವಿಡ್‌ ಹೆಚ್ಚಿದ ಕಾರಣಕ್ಕೆ ಕವಿತಾ ತನ್ನ ಮಕ್ಕಳೊಂದಿಗೆ ತವರಿಗೆ ಮರಳಿದ್ದಳು. ಸುಮಾರು ಎರಡು ತಿಂಗಳಿಂದ ತವರಲ್ಲೇ ಇದ್ದ ಆಕೆ ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಕೊನೆಯ ಶುಕ್ರವಾರ ವರಮಹಾಲಕ್ಷ್ಮೀ ಪೂಜೆಯನ್ನು ಗಂಡನ ಮನೆಯಲ್ಲೇ ಮಾಡಲು ಮಗಳೊಂದಿಗೆ ಬೆಂಗಳೂರಿಗೆ ಹೊರಡಲು ಮುಂದಾಗಿದ್ದರು. ಕವಿತಾಳೊಂದಿಗೆ ಅಕ್ಕ ಶೀಲಾ
ಹಾಗೂ ಆಕೆಯ ಇಬ್ಬರು ಮಕ್ಕಳು ಕೂಡ ಬೆಂಗಳೂರಿಗೆ ಹೊರಟಿದ್ದರು.

ಶ್ರಾವಣ ಮಾಸದ ಮಂಗಳವಾರ ಹೆಣ್ಣುಮಗಳು ತವರು ಮನೆಯಿಂದ ಹೋಗುವುದು ಬೇಡ ಎಂದು ಮನೆಯವರು ತಡೆದರೂ ಕೇಳದೇ ಬಸ್‌ ಗೆ ಹೊರಟು ನಿಂತಿದ್ದರು. ಮಂಗಳವಾರ ರಾತ್ರಿ ಬೆಂಗಳೂರಿಗೆ ಪ್ರಯಾಣ ಬೆಳೆಸಲು ಕುಕ್ಕೇಶ್ರೀ ಟ್ರಾವೆಲ್ಸ್‌ ಹೆಸರಿನ ಖಾಸಗಿ ಬಸ್‌ನಲ್ಲಿ ಹೊರಟಿದ್ದರು. ಆದರೆ ಬೆಂಗಳೂರು ತಲುಪುವ ಮುನ್ನವೇ ಚಿತ್ರದುರ್ಗ ಜಿಲ್ಲೆಯಲ್ಲಿ 29 ಜನರಿದ್ದ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ದುರಂತ ಸಂಭವಿಸಿದೆ. ಗಾಢ ನಿದ್ರೆಯಲ್ಲಿದ್ದರೂ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ 24 ಜನರು ಕಿಟಕಿ ಗಾಜು ಒಡೆದು ಪರಾರಿಯಾಗಿದ್ದಾರೆ. ಆದರೆ ಈ ನತದೃಷ್ಟ ಕುಟುಂಬದ ಐವರು ಬಸ್‌ನಲ್ಲೇ ಸಜೀವ ದಹನವಾಗಿದ್ದಾರೆ.

ತಮ್ಮ ಕುಟುಂಬದ ಮಕ್ಕಳು, ಮೊಮ್ಮಕ್ಕಳನ್ನು ಕಳೆದುಕೊಂಡು ಕವಿತಾ ಹಾಗೂ ಶೀಲಾ ಕುಟುಂಬದಲ್ಲಿ ದುಃಖ ಮುಗಿಲು ಮುಟ್ಟಿದೆ. ಮಂಗಳವಾರ ತವರಿನಿಂದ ಹೊರಡಬೇಡಿ ಎಂದು ಬೇಡಿಕೊಂಡರೂ ಶುಕ್ರವಾರದ ವರಮಹಾಲಕ್ಷ್ಮೀ ಪೂಜೆ ಮಾಡಿ
ಭಕ್ತಿ ಸಮರ್ಪಿಸಲು ಹೊರಟು ನಿಂತವರು ಊರು ಮುಟ್ಟುವ ಮುನ್ನವೇ ದಾರಿಯಲ್ಲೇ ಹೆಣವಾಗಿದ್ದನ್ನು ನೆನೆದು ಮೃತಳ ಚಿಕ್ಕಮ್ಮ ರೇಣುಕಾ ಎದೆ ಬಡಿದುಕೊಂಡು ಅಳುವ ದೃಶ್ಯ ಮನ ಕಲುವಂತೆ ಮಾಡಿದೆ.

Advertisement

ಊರಿಗೆ ಮುಟ್ಟಿದ ಮೇಲೆ ಕರೆ ಮಾಡುತ್ತೇವೆಂದು ಹೇಳಿ ಹೋದವರು ಬೆಂಗಳೂರು ತಲುಪುವ ಮುನ್ನವೇ ಸಜೀವ ದಹನವಾಗಿರುವ ಸುದ್ದಿ ನಸುಕಿನಲ್ಲಿ ಬಂದೆರಗಿತ್ತು. ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಬೆಳಗ್ಗೆ ಬಾಲಕೃಷ್ಣ, ರಾಧೆಯರ ವೇಷದಲ್ಲಿ
ಮಿಂಚಿದ್ದ ಮಕ್ಕಳು, ಮತ್ತೂಂದು ಸೂರ್ಯೋದಯ ಕಾಣುವ ಮುನ್ನವೇ ಸುಟ್ಟು ಕರಕಲಾಗಿರುವ ದುರಂತ ಸುದ್ದಿ ಕೇಳಿ ಬಂದಿದೆ. ನಮ್ಮ ಮನೆಯ ಭವಿಷ್ಯದ ನಂದಾ ದೀಪಗಳಾಗಿದ್ದ ಮಕ್ಕಳೊಂದಿಗೆ ನಮ್ಮ ಸೊಸೆಯಂದಿರು ಮೃತಪಟ್ಟಿರುವ ಘಟನೆ ಮುಗಿಲು ಕತ್ತರಿಸಿ ಬಿದ್ದಿದೆ ಎಂದು ಕವಿತಾಳ ಭಾವ ಕೃಷ್ಣಾ ಕಣ್ಣೀರು ಹಾಕುತ್ತಿದ್ದಾರೆ.

ಇದೇ ಬಸ್‌ ದುರಂತದಲ್ಲಿ ವಿಜಯಪುರ ಮೂಲದ ಬಿಎಂಟಿಸಿ ನೌಕರರಾದ ಚಡಚಣ ತಾಲೂಕಿನ ಗೌಡಿಹಾಳದ ಪ್ರಶಾಂತ ದುಂಡಪ್ಪ, ಬಸವರಾಜ ಶ್ಯಾಮರಾವ್‌ ಹಾಗೂ ನಗರದ ವೈದ್ಯ ಡಾ| ಚವ್ಹಾಣ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next