ನಾನೀಗ ಹೇಳುತ್ತಿರುವುದು ಎರಡು ದಶಕಗಳ ಹಿಂದಿನ ಮಾತು. ನಾವು ಕಾಲೇಜಿನ ವಿದ್ಯಾಭ್ಯಾಸಕ್ಕೆ ಹಳ್ಳಿಯಿಂದ ಪಟ್ಟಣಕ್ಕೆ ಹೋಗಬೇಕಾಗಿತ್ತು. ಅನುದಿನವೂ ಸಾಕಷ್ಟು ವಿದ್ಯಾರ್ಥಿಗಳು ಸರ್ಕಾರ ನೀಡಿದ ಬಸ್ ಪಾಸ್‌ನ ಸಹಾಯದಿಂದಾಗಿ ನಿರ್ಭಯವಾಗಿ ಓಡಾಡುತ್ತಿದ್ದೆವು. ಆದರೆ, ಅಂದಿನ ದಿನಗಳಲ್ಲಿ ಬಸ್‌ಗಳ ಸಂಖ್ಯೆ ವಿರಳವಾಗಿತ್ತು. ಗಂಟೆಗೊಂದು, ಮೂರು ಗಂಟೆಗೊಂದರಂತೆ ಬಸ್‌ಗಳು ಇದ್ದವು. ನಮ್ಮ ಕಾಲೇಜು ಶುರುವಾಗುವ ಸಮಯಕ್ಕೆ ಸರಿಯಾಗಿ ಆ ಊರು ತಲುಪುತ್ತಿದ್ದ ಬಸ್‌ವೊಂದಕ್ಕೆ ನಾವು ಫಿಕ್ಸ್ ಆಗಿದ್ದೆವು. ನಮ್ಮ ಹಳ್ಳಿಯ ಸಮೀಪಕ್ಕೆ ಬಸ್ ಬಂತೆಂದರೆ ಅದರೊಳಗೆ ಇರುವ ಪ್ರಯಾಣಿಕರಿಗೆ ದಿಗಿಲು, ದಿಗ್ಭ್ರಮೆ ಮೂಡುತ್ತಿತ್ತು.ನಮ್ಮ ಬಹುದೊಡ್ಡ ಗುಂಪನ್ನು ಕಂಡ ಡ್ರೈವರ್ ಮಾಮ ಬೆಕ್ಕಸ ಬೆರಗಾಗುತ್ತಿದ್ದ. ಎಷ್ಟೋ ಬಾರಿ ನಾವೆಲ್ಲರೂ ಸೇರಿ ಕೈ ತೋರಿಸುತ್ತಿರುವಾಗ ನಿಲ್ಲಿಸುವವನಂತೆ ಮಾಡಿ ತುಂಬಾ ಮುಂದಕ್ಕೆ ಹೋಗಿ ನಿಲ್ಲಿಸುತ್ತಿದ್ದ. ಹತ್ತೋಣ ಅಂತ ಓಡಿಹೋದರೆ, ಕುಸ್ತಿ ಆಡುವವರಂತೆ ನಿರ್ವಾಹಕ ಬಾಗಿಲಿನಲ್ಲೇ ನಿಂತಿರುತ್ತಿದ್ದ. ಹಿರಿಯ ವಿದ್ಯಾರ್ಥಿಗಳು ಡ್ರೈವರ್ ಹತ್ತಿರವಿರುವ ಬಾಗಿಲನ್ನು ತೆಗೆದು ಒನಕೆ ಓಬವ್ವನ ಕಿಂಡಿಯೊಳಗಿನಿಂದ ಹೈದರಾಲಿ ಸೈನಿಕರು ಬರುವಂತೆ ಬರುತ್ತಿದ್ದರು.
ಕಂಡಕ್ಟರ್ “ಮುಂದೆ ಹೋಗಿ…’ ಎನ್ನುತ್ತಿದ್ದರೆ, ಡ್ರೈವರ್ “ಹಿಂದೆ ಹೋಗಿ’ ಎನ್ನುತ್ತಿದ್ದರು. ಒಳಗಡೆ, ನಿಂತುಕೊಳ್ಳುವುದಿರಲಿ ನುಗ್ಗಲೂ ಜಾಗವಿರುತ್ತಿರಲಿಲ್ಲ. ಆಗೆಲ್ಲಾ ವಿದ್ಯಾರ್ಥಿಗಳಿಗೆ ಟಾಪ್ ಮೇಲೆ ಕುಳಿತುಕೊಳ್ಳೋದು ಅನಿವಾರ್ಯವಾಗಿತ್ತು. ಅವತ್ತಿನ ಸಂದರ್ಭದಲ್ಲಿ ಟಾಪ್‌ನಲ್ಲಿ ಕುಳಿತು ಪ್ರಯಾಣ ಮಾಡುವುದೂ ಒಂದು ಟ್ರೆಂಡ್ ಆಗಿತ್ತು. ಕೆಲವರಂತೂ ಬಸ್ ಹೊರಟ ತಕ್ಷಣ ಎದ್ದುನಿಂತು ಡ್ಯಾನ್ಸ್ ಮಾಡಲು ಆರಂಭಿಸಿ ಬಿಡುತ್ತಿದ್ದರು. ಮತ್ತೆ ಕೆಲವರು ಹಾಡು ಹೇಳುತ್ತಿದ್ದರು. ಕೆಲವು ಸಾಹಸಿಗಳಂತೂ ಬಸ್‌ಗೆ ಲಗೆಜ್jನ ಹಾಕಲು ಇರುತ್ತಿದ್ದ ಏಣಿಯ ಮೇಲೆ ನಿಂತೇ ಒಂದೆರಡು ಕಿ.ಮೀ. ಪ್ರಯಾಣಿಸುತ್ತಿದ್ದೆವು. ಅವತ್ತಿನ ಸಂದರ್ಭದಲ್ಲಿ ಕಾಲೇಜು ಹುಡುಗರ ಉಡಾಫೆ ಹೇಗಿರುತ್ತಿತ್ತು ಅಂದರೆ, ಸ್ವಲ್ಪ ಆಯ ತಪ್ಪಿದರೂ ಅನಾಹುತ ಆಗುವ ಸಾಧ್ಯತೆಗಳಿದ್ದವು. ಆದರೆ ಹಾಗೇನೂ ಆಗುತ್ತಿರಲಿಲ್ಲ.
ಟಾಪ್‌ನಲ್ಲಿ ಕೂರಲು ಹೋಗುತ್ತಿದ್ದವರೆಲ್ಲ ಪಾಸ್ ಗಿರಾಕಿಗಳೇ ಆಗಿದ್ದರಿಂದ ಕಂಡಕ್ಟರ್‌ನ ಅಸಮಾಧಾನ ಎದ್ದು ಕಾಣುತ್ತಿತ್ತು. ನಮ್ಮ ಹಳ್ಳಿಯಿಂದ ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಕಾಲಕ್ಕೆ ಒಂದೇ ಬಸ್ ಹತ್ತುತ್ತಿ¨ªೆವು ಎಂದರೆ ನೀವೇ ಕಲ್ಪಿಸಿಕೊಳ್ಳಿ ಬಸ್‌ನ ಸ್ಥಿತಿ ಹೇಗಿರಬಹುದು ಅಂತ. ಬಸ್‌ನೊಳಗಿದ್ದ “ನಿಮ್ಮ ಪ್ರಯಾಣ ಸುಖಕರವಾಗಿರಲಿ’ ಎಂಬ ನುಡಿಮುತ್ತು ನಮ್ಮನ್ನು ನೋಡಿ ನಕ್ಕಂತೆ ಭಾಸವಾಗುತ್ತಿತ್ತು.
ಟಾಪ್ ಮೇಲೆ ವಿದ್ಯಾರ್ಥಿಗಳು ಕುಳಿತುಕೊಂಡ ದಿನ ಬಸ್ ಡ್ರೈವರ್ ನಿಧಾನವಾಗಿ ಗಾಡಿ ಓಡಿಸುತ್ತಿದ್ದ. ನಾವಾಗ “ಡ್ರೈವರ್ ಮಾಮಾ, ನಮಗೆ ಕ್ಲಾಸ್ ಇರೋದು ನಾಳೆಯಲ್ಲ. ನಾವು ಇವತ್ತೇ ಕಾಲೇಜ್‌ಗೆ ಹೋಗಬೇಕು’ ಎಂದು ರೇಗಿಸುತ್ತಿದ್ದೆವು. ನಮ್ಮ ಬಸ್‌ಗೆ ಯಾರೋ ಹಿರಿಯರು “ಗುರುವಜ್ಜನ ಬಂಡಿ’ ಎಂಬ ಹೆಸರನ್ನು ದಯಪಾಲಿಸಿದ್ದರಲ್ಲಿ ಯಾವುದೇ ತಪ್ಪಿರಲಿಲ್ಲ. ಬಸ್ ತುಂಬಾ ಸ್ಲೋ ಆಗಿ ಹೋಗ್ತಿದೆ ಎಂದು ಜನರೂ ಡ್ರೈವರ್‌ಗೆ ಜೋರು ಮಾಡಿದಾಗಲೇ ಅವನು ಜೋರಾಗಿ ಆ್ಯಕ್ಸಿಲರೇಟರ್ ತುಳಿಯುತ್ತಿದ್ದ. ನಮ್ಮ ಬಸ್‌ನ ಚೆಂದಕ್ಕೆ ದಟ್ಟನೆ ಕಪ್ಪು ಹೊಗೆ ಬಸ್ ಸುತ್ತ ಕವಿಯುತ್ತಿತ್ತು. ಆಗ ಜನರೇ, ಅಪ್ಪಾ ಡ್ರೈವರ್ ನೀನು ನಾಳೆ ತಲುಪಿದರೂ ಪರವಾಗಿಲ್ಲ. ನಿಧಾನಕ್ಕೇ ಹೋಗು ಅನ್ನುತ್ತಿದ್ದರು. ಅಂಥಾ ಬುದ್ಧಿವಂತ ನಮ್ಮ ಬಸ್ ಡ್ರೈವರಣ್ಣ! ಆರು ಕಿ. ಮೀ. ದೂರ ಹೋಗುವಷ್ಟರಲ್ಲಿ 60 ಕಿ. ಮೀ. ಕ್ರಮಿಸಿದಂಥ ಅನುಭವವಾಗುತ್ತಿತ್ತು. ಈಗಿನ ಎಷ್ಟೋ ಬಸ್ಸುಗಳಲ್ಲಿ ಏಣಿಯೇ ಇರೋದಿಲ್ಲ. ಈಗಿನವರಿಗೆ ಟಾಪ್‌ನಲ್ಲಿ ಕೂರೋ ಸುಖವೇ ಗೊತ್ತಿಲ್ಲ. “ಇರುವ ಭಾಗ್ಯವ ನೆನೆದು ಬಾರೆನೆಂಬುದನ್ನು ಬಿಡು ಹರುಷಕ್ಕಿದೆ ದಾರಿ’ ಎಂಬ ಪದ್ಯದ ಸಾಲುಗಳು ನೆನಪಾಗುತ್ತಿವೆ.
ಪ್ರದೀಪ ಎಂ. ಬಿ., ಕೊಟ್ಟೂರು, ಬಳ್ಳಾರಿ