ಸ್ಯಾಂಡಲ್‌ವುಡ್‌ನಲ್ಲಿ ಧ್ರುವ ಸರ್ಜಾ ಅಭಿನಯದ “ಬಹದ್ಧೂರ್’, “ಭರ್ಜರಿ’, ಶ್ರೀಮುರಳಿ ಅಭಿನಯದ “ಭರಾಟೆ’ ಮತ್ತು ಪುನೀತ್ ರಾಜಕುಮಾರ್ ಅಭಿನಯದ “ಜೇಮ್ಸ್’ನಂತಹ ಔಟ್ ಆ್ಯಂಡ್ ಔಟ್ ಮಾಸ್ ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಬಹದ್ಧೂರ್ ಚೇತನ್ ಉರೂಫ್ ಚೇತನ್ ಕುಮಾರ್ ಈ ಬಾರಿ “ಬರ್ಮ’ ಎಂಬ ಅಂಥದ್ದೇ ಮತ್ತೂಂದು ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಈಗಾಗಲೇ ಸದ್ದಿಲ್ಲದೇ “ಬರ್ಮ’ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚೇತನ್ ಕುಮಾರ್ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ “ಬರ್ಮ’ ಸಿನಿಮಾದ ಮೊದಲ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಇನ್ನು ಕಿರುತೆರೆಯ “ಪುಟ್ಟಗೌರಿಯ ಮದುವೆ’, “ಗಟ್ಟಿಮೇಳ’ ಮೊದಲಾದ ಧಾರಾವಾಹಿಗಳಲ್ಲಿ ಅಭಿನಯಿಸಿರುವ, ಕೆಲವೊಂದು ಸಿನಿಮಾಗಳಲ್ಲೂ ಅಲ್ಲಲ್ಲಿ ಕಾಣಿಸಿಕೊಂಡಿರುವ ನಟ ರಕ್ಷ್ ರಾಮ್ “ಬರ್ಮ’ ಸಿನಿಮಾದಲ್ಲಿ ನಾಯಕನಾಗಿ ಬರ್ಮ ಹಿಂದೆ ಚೇತನ್ ಹೊಸ ಹೀರೋ ಜೊತೆ ಪ್ಯಾನ್ ಇಂಡಿಯಾ ಚಿತ್ರ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರತಂಡದ ಮಾಹಿತಿಯಂತೆ, “ಬರ್ಮ’ ಎಂಬ ಪದಕ್ಕೆ ಸಂಸ್ಕೃತದಲ್ಲಿ ಬ್ರಹ್ಮ ವಾಸಿಸುವ ಜಾಗ ಎಂಬ ಅರ್ಥವಿದ್ದು, ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಎಂಟರ್‌ಟೈನರ್ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರಲಿದೆ. “ಬರ್ಮ’ ಸಿನಿಮಾದ ಹಾಡುಗಳಿಗೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, “ಬಹದ್ಧೂರ್’, “ಭರ್ಜರಿ’ ಮೂಲಕ ಮೋಡಿ ಮಾಡಿದ್ದ ವಿ. ಹರಿಕೃಷ್ಣ ಹಾಗೂ ಚೇತನ್ ಜೋಡಿ ಮೂರನೇ ಬಾರಿಗೆ “ಬರ್ಮ’ ಸಿನಿಮಾದಲ್ಲಿ ಮತ್ತೆ ಒಂದಾಗುತ್ತಿದೆ. “ಬರ್ಮ’ ಸಿನಿಮಾದ ಅನೌನ್ಸ್ ಬೆನ್ನಲ್ಲೇ ಆಡಿಯೋ ರೈಟ್ಸ್ ಕೂಡ ಭಾರೀ ಮೊತ್ತಕ್ಕೆ ಮಾರಾಟವಾಗಿದೆ ಎಂಬುದು ಚಿತ್ರತಂಡದ ಮಾತು. ಸದ್ಯ “ಬರ್ಮ’ ಸಿನಿಮಾದ ಇತರ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಅಂತಿಮ ಹಂತದಲ್ಲಿದ್ದು, ಇದೇ ಸೆಪ್ಟೆಂಬರ್ ತಿಂಗಳಿನಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.
ಇಲ್ಲಿಯವರೆಗೆ ತಮ್ಮ ಎಲ್ಲ ಸಿನಿಮಾಗಳಲ್ಲಿ ಬಹುತೇಕ ಸ್ಟಾರ್ ನಟರಿಗೆ ಆ್ಯಕ್ಷನ್-ಕಟ್ ಹೇಳಿದ್ದ ಚೇತನ್ ಕುಮಾರ್, ಮೊದಲ ಬಾರಿಗೆ ಕಿರುತೆರೆ ನಾಯಕ ನಟನೊಬ್ಬನನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪರಿಚಯಿಸಲು ರೆಡಿಯಾಗಿದ್ದು, “ಬರ್ಮ’ ಹೇಗೆ ಮೂಡಿಬರಲಿದೆ ಎಂಬುದು ಸಿನಿಮಾ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.