ಬೆಂಗಳೂರು: ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಹೋದರ, ಉದ್ಯಮಿ ಭ್ರಮರೇಶ್ ಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಿದ್ದ ಮೂವರು ಮಹಿಳೆಯರು ಸೇರಿ 7 ಮಂದಿ ನೇಪಾಳಿ ಗ್ಯಾಂಗ್ ಸದಸ್ಯರನ್ನು ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೇಪಾಳ ಮೂಲದ ಉಪೇಂದ್ರ, ನರಬಹದ್ದೂರ್, ಕಾಕೇಂದ್ರ ಶಾಹಿ, ಕೋಮಲ್, ಸ್ವಸ್ತಿಕಾ, ಪಾರ್ವತಿ ಹಾಗೂ ಶಾದಲಾ ಬಂಧಿತರು.
ಆರೋಪಿಗಳಿಂದ 1.53 ಕೋಟಿ ರೂ. ಮೌಲ್ಯದ 3 ಕೆ.ಜಿ. ಚಿನ್ನಾಭರಣ, 562 ಗ್ರಾಂ ಬೆಳ್ಳಿ ವಸ್ತುಗಳು, 16 ವಿವಿಧ ಕಂಪನಿಗಳ ವಾಚ್‌ಗಳು, 40 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ದೂರುದಾರ ಭ್ರಮರೇಶ್ ತಮ್ಮ ಕುಟುಂಬದ ಜತೆ ಅ.21ರಂದು ಗ್ರೀಕ್ ದೇಶಕ್ಕೆ ತೆರಳಿದ್ದರು. ಅ.29ರಂದು ವಾಪಸ್ ಬಂದು ನೋಡಿದಾಗ ಮನೆಯ ಬಾಗಿಲ ಬೀಗ ಒಡೆದು ಕನ್ನ ಹಾಕಿರುವುದು ಪತ್ತೆಯಾಗಿತ್ತು. ಈ ಸಂಬಂಧ ಭ್ರಮರೇಶ್ ನೀಡಿದ ದೂರಿನ ಮೇರೆಗೆ ಕಳವು ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಬಂಧಿತರ ಪೈಕಿ ಉಪೇಂದ್ರ, ದೂರುದಾರ ಭ್ರಮರೇಶ್ ಮನೆಯ ಪಕ್ಕದಲ್ಲೇ ನಿರ್ಮಾಣ ಹಂತದ ಕಟ್ಟಡದ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ. ಆತನೊಂದಿಗೆ ಉಳಿದ ಐವರು ಆರೋಪಿಗಳು ವಾಸವಿದ್ದರು. ಮೂರು ತಿಂಗಳಿಂದಲೂ ಆರೋಪಿಗಳು ಭ್ರಮರೇಶ್ ಮನೆಯ ಮೇಲೆ ನಿಗಾವಹಿಸಿದ್ದರು. ಭ್ರಮರೇಶ್ ಮನೆಯವರು ವಿದೇಶ ಪ್ರವಾಸಕ್ಕೆ ತೆರಳಿದ್ದ ಬಗ್ಗೆ ಮಾಹಿತಿ ಪಡೆದು ಅ.21ರಂದು ರಾತ್ರಿ ತಾವಿದ್ದ ನಿರ್ಮಾಣ ಹಂತದ ಕಟ್ಟಡದಿಂದ ಭ್ರಮರೇಶ್ ಮನೆಯ ಕಟ್ಟಡಕ್ಕೆ ಜಿಗಿದು ಕಿಟಕಿಯ ಸರಳುಗಳನ್ನು ಯಂತ್ರದ ಸಹಾಯದಿಂದ ಕತ್ತರಿಸಿ ಒಳ ನುಗ್ಗಿ, ಚಿನ್ನಾಭರಣ, ನಗದುದೋಚಿದ್ದರು. ನಗರದ ಪುಟ್ಟೇನಹಳ್ಳಿ, ಮಾಗಡಿ ರಸ್ತೆ, ಆಂಧ್ರಪ್ರದೇಶದ ಕುಕ್ಕುಟಪಲ್ಲಿ, ಮಹಾರಾಷ್ಟ್ರದ ಕಂಡಿವಾಲಿ ವೆಸ್ಟ್ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.