ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಪೊವಾಯಿ ಶಿಕ್ಷಣ ಸಂಸ್ಥೆ ಸಂಚಾಲಕತ್ವದ ಎಸ್. ಎಂ. ಶೆಟ್ಟಿ ಶಿಕ್ಷಣ ಸಿಬಂದಿಗಳ ದ್ವಿತೀಯ ವಾರ್ಷಿಕ ಕ್ರೀಡಾಕೂಟವು ಎ. 26ರಂದು ವೈವಿಧ್ಯಮಯ ಕ್ರೀಡಾಸ್ಪರ್ಧೆಗಳೊಂದಿಗೆ ಅದ್ದೂರಿಯಾಗಿ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಿತು.
ಪೊವಾಯಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ, ಉಪಕಾರ್ಯಾಧ್ಯಕ್ಷ ಬಿ. ಆರ್. ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ರಾಜೇಂದ್ರ ಶೆಟ್ಟಿ, ಎಸ್. ಎಂ. ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ| ಶ್ರೀಧರ ಶೆಟ್ಟಿ ಅವರು ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ ಇವರು ತೆಂಗಿನಕಾಯಿ ಒಡೆದು ಕ್ರೀಡಾಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿ, ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ಪೊವಾಯಿ ಶಿಕ್ಷಣ ಸಂಸ್ಥೆಯ ಶಿಕ್ಷಕ ವರ್ಗದವರಿಗೆ, ಸಿಬಂದಿಗಳಿಗೆ ಕ್ರೀಡಾಕೂಟವನ್ನು ಆಯೋಜಿಸಿ ಅವರ ಪ್ರತಿಭೆಯ ಅನಾವರಣಕ್ಕೆ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ. ಶಿಕ್ಷಕರು, ಸಿಬಂದಿಗಳು ಇದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವಲ್ಲಿ ಹಗಲಿರುಳು ಶ್ರಮಿಸುತ್ತಾರೆ. ಈ ನಿಟ್ಟಿನಲ್ಲಿ ಶಿಕ್ಷಕವೃಂದದವರಿಗೆ ಇಂತಹ ವೇದಿಕೆಗಳನ್ನು ಕಲ್ಪಿಸಿಕೊಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಭವಿಷ್ಯದಲ್ಲೂ ಇಂತಹ ಸ್ಪರ್ಧೆಗಳಲ್ಲಿ ಶಿಕ್ಷಕರು ಆಸಕ್ತಿಯಿಂದ, ಉತ್ಸಾಹದಿಂದ ಪಾಲ್ಗೊಳ್ಳುವಂತಾಗಬೇಕು ಎಂದರು.
ಪೊವಾಯಿ ಶಿಕ್ಷಣ ಸಂಸ್ಥೆಯ ಉಪ ಕಾರ್ಯಾಧ್ಯಕ್ಷ ಬಿ. ಆರ್. ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ರಾಜೇಂದ್ರ ಶೆಟ್ಟಿ ಅವರು ಸಂದಭೋಚಿತವಾಗಿ ಮಾತನಾಡಿ ಎಲ್ಲಾ ಶಿಕ್ಷಕರಿಗೂ ಶುಭಹಾರೈಸಿದರು.
ಬೆಳಗ್ಗೆ ಪಥ ಸಂಚಲನದ ಬಳಿಕ ವಿವಿಧ ಆಟೋಟ ಸ್ಪರ್ಧೆಗಳು
ನಡೆಯಿತು. ಶಿಕ್ಷಣ ಸಂಸ್ಥೆಯ ಸಿಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆಯ ಎಚ್. ಆರ್. ವಿಭಾಗವು ಈ ಕ್ರೀಡಾಕೂಟವನ್ನು ಆಯೋಜಿಸಿತ್ತು. ಸಿಬ್ಬಂದಿಗಳು ಪೊವಾಯಿ ಶಿಕ್ಷಣ ಸಂಸ್ಥೆಯ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಆರಂಭದಲ್ಲಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಸೀಮಾ ಶುಕ್ಲ ಸ್ವಾಗತಿಸಿದರು. ಪೊವಾಯಿ ಶಿಕ್ಷಣ ಸಂಸ್ಥೆಯ ಶಿಕ್ಷಕವೃಂದದದವರು, ಶಿಕ್ಷಕೇತರ ಸಿಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬಂಟರ ಸಂಘ ಮುಂಬಯಿ ಪೊವಾಯಿ ಶಿಕ್ಷಣ ಸಂಸ್ಥೆಯ ಪದಾಧಿಕಾರಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸದಸ್ಯ ಬಾಂಧವರು ಪಾಲ್ಗೊಂಡಿದ್ದರು.
ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು