Advertisement

ಬಂಟರ ಸಂಘ ಮುಂಬಯಿ:ವಿಶ್ವಸ್ತರಾಗಿ ಕರ್ನಿರೆ,ಶಶಿಕಿರಣ್‌,ಶಾಂತಾರಾಮ್‌

02:43 PM Aug 09, 2017 | Team Udayavani |

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ನೂತನ ವಿಶ್ವಸ್ತರಾಗಿ 2017ರಿಂದ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಬಂಟರ ಸಂಘದ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಆಲ್‌ಕಾರ್ಗೋ ಲಾಜಿಸ್ಟಿಕ್‌ ಲಿಮಿಟೆಡ್‌ ಇದರ ಸಿಎಂಡಿ ಶಶಿಕಿರಣ್‌ ಶೆಟ್ಟಿ ಹಾಗೂ ಹೊಟೇಲ್‌ ಸನ್‌ಸಿಟಿ ಅಂಧೇರಿ ಇದರ ಸಿಎಂಡಿ ಶಾಂತಾರಾಮ ಕೆ. ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಆ. 7ರಂದು ಕುರ್ಲಾ ಪೂರ್ವದ ಬಂಟರ ಸಂಘದ ಕಾನ್ಫರೆನ್ಸ್‌ ಹಾಲ್‌ನಲ್ಲಿ ಜರಗಿದ ವಿಶ್ವಸ್ತರ ಸಭೆಯಲ್ಲಿ ಸಂಘದ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರು ನೂತನ ವಿಶ್ವಸ್ತರನ್ನು ಅಭಿನಂದಿಸಿ ಸ್ವಾಗತಿಸಿದರು.

Advertisement

ಕರ್ನಿರೆ ವಿಶ್ವನಾಥ ಶೆಟ್ಟಿ 
ಸುಮಾರು 22 ವರ್ಷಗಳ ಹಿಂದೆ ಸಾಮಾನ್ಯ ಕಾರ್ಯಕರ್ತನಾಗಿ ಬಂಟರ ಸಂಘವನ್ನು ಸೇರಿದ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಆ ಬಳಿಕ ಸಂಘದ ಸದಸ್ಯತ್ವ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸುಮಾರು 12 ವರ್ಷಗಳಿಂದ ಅತೀ ಹೆಚ್ಚು ಸದಸ್ಯರನ್ನು ನೋಂದಾಯಿಸಿ ಸತತ ಚಿನ್ನದ ಪದಕವನ್ನು ಪಡೆಯುವುದರೊಂದಿಗೆ ಚಿನ್ನದ ಹುಡುಗ ಎಂದೇ ಖ್ಯಾತಿ ಪಡೆದವರು. ಸಂಘದ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸಂಘದ ಸಂಚಾಲಕತ್ವದಲ್ಲಿರುವ ಎರಡು ರಾತ್ರಿ ಶಾಲೆಗಳ ಫಲಿತಾಂಶ ಶೇ. 100 ತಲಪುವಲ್ಲಿ ಯಶಸ್ವಿಯಾದರು.

ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾಗಿ ಆರ್ಥಿಕವಾಗಿ ಹಿಂದುಳಿದ ಬಂಟ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸುಮಾರು 1.25 ಕೋ. ರೂ. ಗಳನ್ನು ಸಂಗ್ರಹಿಸಿ ಸತತ ಮೂರು ವರ್ಷ ವಿದ್ಯಾರ್ಥಿ ವೇತನ ಮತ್ತು ಆರ್ಥಿಕ ನೆರವು ವಿತರಣೆಯಲ್ಲಿ ಜವಾಬ್ದಾರಿಯುತ ಪಾತ್ರವನ್ನು ವಹಿಸಿದ್ದರು. ಸಂಘದ ಎನೆಕ್ಸ್‌ ಕಟ್ಟಡ ನಿರ್ಮಾಣದಲ್ಲಿ ಮಹತ್ತರ ಯೋಗದಾನ ನೀಡಿದ ಅವರು ಸಂಘದ ಉಪಾಧ್ಯಕ್ಷರಾಗಿ, ಸಂಘದ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಅನನ್ಯವಾಗಿದೆ. ಸಾರ್ವಜನಿಕ ವಲಯದಲ್ಲೂ ಅವರ ಸಮಾಜ ಸೇವೆ ಅಪಾರವಾಗಿದ್ದು, ಮಾತೃಭೂಮಿಯ ನಿರ್ದೇಶಕರಾಗಿ, ಬ್ಯಾಂಕಿಂಗ್‌ ಸಮಿತಿಯ ಕಾರ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಶಶಿಕಿರಣ್‌ ಶೆಟ್ಟಿ 
ಆಲ್‌ ಕಾರ್ಗೋ ಲಾಜಿಸ್ಟಿಕ್‌ ಕಂಪೆನಿ ಲಿಮಿಟೆಡ್‌ ಇದರ ಸಿಎಂಡಿಯಾಗಿ ಉದ್ಯಮ ಕ್ಷೇತ್ರದಲ್ಲಿ ಹೆಸರಾಗಿರುವ ಶಶಿಕಿರಣ್‌ ಶೆಟ್ಟಿ ಅವರು, ಬಂಟರ ಸಂಘ ಮುಂಬಯಿ ಇದರ ಮಹಾದಾನಿಯಾಗಿ ಸೇವೆ ಸಲ್ಲಿಸಿದವರು. ಸಂಘದ ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರಾಗಿ ಅವರ ಸೇವೆ ಗಮನೀಯವಾಗಿದೆ. ಸಂಘದ ಉನ್ನತ ಶಿಕ್ಷಣ ಕಾಲೇಜಿನಲ್ಲಿರುವ ಆರತಿ ಶಶಿಕಿರಣ್‌ ಶೆಟ್ಟಿ ಜೂನಿಯರ್‌ ಕಾಲೇಜು ಸಂಘಕ್ಕೆ ಅವರ ವಿಶಿಷ್ಟ ಕೊಡುಗೆಯಾಗಿದೆ. ಉದ್ಯಮದ ಜೊತೆಗೆ ತನ್ನದೇ ಆದ ಟ್ರಸ್ಟ್‌ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ. ಸಂಘದ ಬಗ್ಗೆ, ಸಮಾಜದ ಬಗ್ಗೆ ಕಳಕಳಿ ಉಳ್ಳವರಾಗಿದ್ದಾರೆ.

ಶಾಂತಾರಾಮ ಕೆ. ಶೆಟ್ಟಿ 
ಅಂಧೇರಿ ಪೂರ್ವದಲ್ಲಿರುವ ಹೊಟೇಲ್‌ ಸನ್‌ಸಿಟಿಯ ಸಿಎಂಡಿಯಾಗಿರುವ ಶಾಂತಾರಾಮ ಕೆ. ಶೆಟ್ಟಿ ಅವರು, ಕೊಡುಗೈದಾನಿಯಾಗಿ, ಬಂಟರ ಸಂಘದ ಮಹಾದಾನಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿರುವ ಇವರು ಬಂಟರ ಸಂಘವಲ್ಲದೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ. ಸಂಘದ ಉನ್ನತ ಶಿಕ್ಷಣ ಕಾಲೇಜಿಗೆ ಮಹತ್ವದ ದೇಣಿಗೆ ನೀಡಿ ಸಹಕರಿಸಿದ್ದಾರೆ. ಸಹೃದಯಿಯಾಗಿರುವ

Advertisement

ಇವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವ ಪಡೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next