Advertisement

ಬಂಟರ ಸಂಘ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಯಕ್ಷಸಪ್ತಾಹ ಉತ್ಸವ 

12:09 PM Jul 25, 2017 | Team Udayavani |

ಮುಂಬಯಿ: ಕರಾವಳಿ ಕರ್ನಾಟಕದ ಗಂಡು ಕಲೆಯಾಗಿದ್ದ ಯಕ್ಷಗಾನದಲ್ಲಿಂದು ಮಹಿಳೆಯರು ಮೇಳೈಸುತ್ತಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಯಕ್ಷಗಾನವಿರಲಿ ಅಥವಾ ಇತರ ಯಾವುದೇ ಕಲೆಯಾಗಿರಲಿ ಕಲೆಗೆ ಜಾತಿ, ಧರ್ಮ ಎಂಬುವುದಿಲ್ಲ. ಹೆಣ್ಣು-ಗಂಡೆಂಬ ಭೇದವಿಲ್ಲ. ಕಲೆಯ ಆಕರ್ಷಣೆಗೆ ಮರುಳಾದವರು ಅದರಿಂದ ಹೊರಬರಲು ಸಾಧ್ಯವಿಲ್ಲ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರು ನುಡಿದರು.

Advertisement

ಜು. 22 ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ ಅವರ ನೇತೃತ್ವದಲ್ಲಿ ಜರಗಿದ ಶ್ರೀ ಮಹಾಗಣಪತಿ ಮಕ್ಕಳ ಮತ್ತು ಮಹಿಳಾ ಯಕ್ಷತಂಡ ಕಾಟಿಪಳ್ಳ ಸುರತ್ಕಲ್‌ ಇದರ ಯಕ್ಷಸಪ್ತಾಹ ಉತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ಕಲೆಗೆ, ಸಂಸ್ಕೃತಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದ ಆನಂದ ಪಿ. ಶೆಟ್ಟಿ ಅವರು ಇದಕ್ಕೆ ಹೆಚ್ಚಿನ ಆಸಕ್ತಿಯಿಂದ ಶ್ರಮಿಸಿದ್ದಾರೆ. ಅವರಂತೆ ಪ್ರಸ್ತುತ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ ಅವರು ಅತೀ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನೀಯ. ಸಂಘವು ಯಕ್ಷಗಾನ ಕಲೆಯನ್ನು ಉಳಿಸಿ-ಬೆಳೆಸಲು ತನ್ನದೇ ಆದ ಯಕ್ಷಕಲಾ ವೇದಿಕೆಯನ್ನು ಹೊಂದಿದೆ. ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಗೆಜ್ಜೆಕಟ್ಟಿ ವೇದಿಕೆ ಏರಲು ಅವಕಾಶ ಕಲ್ಪಿಸಿದ್ದಾರೆ. ಯಕ್ಷಕಲಾವಿದರ ಬದುಕನ್ನು ಹಸನಾಗಿಸಲು ಪಟ್ಲ ಸತೀಶ್‌ ಶೆಟ್ಟಿ ಅವರು ಕೈಗೊಂಡ ಯೋಜನೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಇಂದು ಆರಂಭಗೊಂಡ ಯಕ್ಷಸಪ್ತಾಹ ಉತ್ಸವಕ್ಕೆ ಕಾರಣಕರ್ತರಾದ ತಂಡದ ನಿರ್ದೇಶಕಿ ಪೂರ್ಣಿಮಾ ಯತೀಶ್‌ ರೈ ಹಾಗೂ ಅವರ ತಂಡಕ್ಕೆ ಶುಭ ಹಾರೈಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಸಂಘದ ಮಾಜಿ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಮಾತನಾಡಿ, ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ ಅವರ ದಕ್ಷ ನೇತೃತ್ವದಲ್ಲಿ ಸಾಂಸ್ಕೃತಿಕ ರಂಗವನ್ನು ಶ್ರೀಮಂತ
ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಘದಲ್ಲಿ ಆರಂಭಗೊಂಡ ಯಾವುದೇ ಕಾರ್ಯಕ್ರಮಕ್ಕೆ ದೇವರ ಆಶೀರ್ವಾದವಿದೆ. ದೂರದ ಕಾಟಿಪಳ್ಳದಿಂದ ಬಂದಿರುವ ಮಕ್ಕಳ ಮತ್ತು ಮಹಿಳಾ ತಂಡದ ಯಕ್ಷಗಾನ ಕಲಾವಿದರಿಗೆ ಶುಭ ಹಾರೈಸಿದ ಅವರು, ಆ. 13ರಂದು ಬಂಟರ ಭವನದಲ್ಲಿ ನಡೆಯಲಿರುವ ಪಟ್ಲಸಂಭ್ರಮದಲ್ಲಿ ಯಕ್ಷಪ್ರೇಮಿ ಗಳೆಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಇನ್ನೋರ್ವ ಮುಖ್ಯ ಅತಿಥಿ ಸಿಎ ಸದಾಶಿವ ಶೆಟ್ಟಿ ಅವರು ಮಾತನಾಡಿ, ಶ್ರೇಷ್ಟ ಕಲೆಯಾದ ಯಕ್ಷಗಾನಕ್ಕೆ ಪುರುಷರಂತೆ ಮಹಿಳೆಯರೂ ಪ್ರಯೋಗಕ್ಕಿಳಿದಿರುವುದು ಸಂತಸ ಮತ್ತು ಅಭಿಮಾನದ ಸಂಗತಿಯಾಗಿದೆ. ರಾಮಾಯಣ, ಮಹಾಭಾರತದಂತಹ ಮಹಾನ್‌ ಗ್ರಂಥಗಳ ಅವರಿವನ್ನು ಸುಲಭವಾಗಿ ಚಿಂತನ-ಮಂಥನ ಮಾಡಿಕೊಳ್ಳಲು ಯಕ್ಷಗಾನಕ್ಕಿಂತ ಮಹತ್ವದ ಸಾಧನ ಬೇರೊಂದಿಲ್ಲ. ಕರಾವಳಿಯ ಯಕ್ಷಗಾನ ದೇಶ-ವಿದೇಶಗಳಲ್ಲಿ ಇನ್ನಷ್ಟು ಹೆಚ್ಚಿನ ಸದ್ದು ಮಾಡತ್ತಿರಲೆಂದು ನುಡಿದು, ಕಾರ್ಯಾಧ್ಯಕ್ಷ ರವೀಂದ್ರನಾಥ್‌ ಎಂ. ಭಂಡಾರಿ ಅವರನ್ನು ಅಭಿನಂದಿಸಿದರು.

ಆರಂಭದಲ್ಲಿ ಮೇಳದ ಭಾಗವತ ಸತೀಶ್‌ ಶೆಟ್ಟಿ ಅವರು ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥನೆಗೈದರು. ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ ಸ್ವಾಗತಿಸಿ, ಸಮಿತಿಯು ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೆಚ್ಚಿನ ಕಾರ್ಯಚಟುವಟಿಕೆಗಳನ್ನು ನೀಡುತ್ತಾ ಬಂದಿದೆ ಎಂದು ಹೇಳಿದರು.

Advertisement

ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಅಧ್ಯಕ್ಷರು ಗೌರವಿಸಿದರು. ಭೋಜನದ ವ್ಯವಸ್ಥೆಗೆ ಸಹಕರಿಸಿದ ರತ್ನಾಕರ ಶೆಟ್ಟಿ ಮುಂಡ್ಕೂರು, ದಿವಾಕರ ಶೆಟ್ಟಿ ಮುದ್ರಾಡಿ, ಡಾ| ಸುನೀತಾ ಎಂ. ಶೆಟ್ಟಿ, ಆಶಾ ವಿ. ಹೆಗ್ಡೆ, ಮನೋರಮಾ ಎಂ. ಬಿ. ಶೆಟ್ಟಿ, ಭಾಸ್ಕರ ಶೆಟ್ಟಿ ಕಾಶಿಮೀರಾ, ಹರೀಶ ಶೆಟ್ಟಿ ರಮಾಡಾ, ರಾಘು ಪಿ. ಶೆಟ್ಟಿ ಅವರನ್ನು ಗೌರವಿಸಲಾಯಿತು. ಅಜೆಕಾರು ಕಲಾಭಿಮಾನಿ ಬಳಗದ ಪರವಾಗಿ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ ಅವರನ್ನು ಗೌರವಿಸಿದರು.

ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ ಅವರನ್ನು ರವೀಂದ್ರನಾಥ ಎಂ. ಭಂಡಾರಿ ಅವರು ಗೌರವಿಸಿದರು. ಅಶೋಕ್‌ ಪಕ್ಕಳ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಕಾರ್ಯಕಾರಿ ಸಮಿತಿಯ ಕರ್ನೂರು ಮೋಹನ್‌ ರೈ ಅವರು ವಂದಿಸಿದರು. ಬಳಿಕ ಮಹಿಳಾ ತಂಡದಿಂದ ಶ್ರೀ ಕೃಷ್ಣ ಲೀಲಾಮೃತ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.  

                                                                         
  ಚಿತ್ರ-ವರದಿ: ಪ್ರೇಮನಾಥ ಶೆಟ್ಟಿ ಮುಂಡ್ಕೂರು.

Advertisement

Udayavani is now on Telegram. Click here to join our channel and stay updated with the latest news.

Next