ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಶಶಿಮನ್‌ಮೋಹನ್ ಶೆಟ್ಟಿ ಉನ್ನತ ಶಿಕ್ಷಣ ಸಂಕೀರ್ಣದಲ್ಲಿರುವ ವಿವಿಧ ಕಾಲೇಜುಗಳ ಕಾರ್ಯಯೋಜನೆಗಳು ಹೊಸತನದ ನಕ್ಷೆ ರಚನಾ ಕ್ರಮದೊಂದಿಗೆ ಹಾಗೂ ಉತ್ತಮ ಗುಣಮಟ್ಟದೊಂದಿಗೆ ಅಂತಿಮ ಹಂತವನ್ನು ತಲುಪಿದ್ದು, ಆ ಪ್ರಯುಕ್ತ ಡಿ. 8ರಂದು ಬೆಳಗ್ಗೆ ಗಣಹೋಮ ಪೂಜೆ ನೆರವೇರಿದ ಬಳಿಕ ಉನ್ನತ ಶಿಕ್ಷಣ ಕಾಲೇಜುಗಳ ನೂತನ ಪ್ರಧಾನ ಆಡಳಿತ ಕಚೇರಿಯನ್ನು ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಸಂಘದ ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಅವರು ಜ್ಯೋತಿ ಪ್ರಜ್ವಲಿಸಿ, ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ, ಮುಖದ್ವಾರದಲ್ಲಿರುವ ನೂತನ ನಾಮಫಲಕವನ್ನು ಅನಾವರಣಗೊಳಿಸಿದರು.
ಉನ್ನತ ಶಿಕ್ಷಣ ಸಂಕೀರ್ಣದ ತುಂಗಾ ಟ್ರೈನಿಂಗ್ ರೆಸ್ಟೋರೆಂಟ್‌ನಲ್ಲಿ ಜರಗಿದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು. ಸಂಘದ ಉನ್ನತ ಶಿಕ್ಷಣ ಯೋಜನೆಗಾಗಿ ಆರಂಭದಿಂದ ಇಂದಿನವರೆಗೂ ಅಪಾರ ಸೇವೆಗೈದಿರುವ, ಸೇವೆಗೈಯುತ್ತಿರುವ ಉನ್ನತ ಶಿಕ್ಷಣ ಪದಾಧಿಕಾರಿಗಳು, ಸಮಿತಿಯ ಸದಸ್ಯರು, ಸಂಘದ ಪದಾಧಿಕಾರಿಗಳು ಹಾಗೂ ಮಹಾದಾನಿಗಳ ಕೊಡುಗೆಯನ್ನು ಎಂದಿಗೂ ಮರೆಯುವಂತಿಲ್ಲ. ಯಾವುದೇ ಯೋಜನೆಯು ಯಶಸ್ವಿಯಾಗಬೇಕಾದರೆ ಸೇವಾನಿರತ ಸದಸ್ಯರ ಒಗ್ಗಟ್ಟು, ಸಂಕಲ್ಪ ಶಕ್ತಿ ಹಾಗೂ ಪರಿಶ್ರಮ ಅಗತ್ಯ. ಈ ಎಲ್ಲಾ ಗುಣಗಳು ಇಲ್ಲಿ ಮೈಗೂಡಿಕೊಂಡಿರುವುದರಿಂದಲೇ ಉನ್ನತ ಶಿಕ್ಷಣ ಯೋಜನೆ ಸಫಲಗೊಂಡಿದೆ. ಸಂಘದ ಉನ್ನತ ಶಿಕ್ಷಣ ಸಂಸ್ಥೆಯು ರಾಜ್ಯದಲ್ಲೇ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆ ಎಂಬ ಹೆಸರನ್ನು ಗಳಿಸಿದೆ. ಪರಿಶ್ರಮ ಪಟ್ಟವರ ಶ್ರಮ ಸಾರ್ಥಕವಾಗಿದೆ. ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿ ಅಭಿನಂದಿಸಿದರು.
ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಅವರು ಮಾತನಾಡಿ, ಸಂಘದ ಈ ಯೋಜನೆಗೆ ಸದಾ ಸಹಕಾರ ನೀಡುತ್ತಿರುವ ಸಂಸದ ಗೋಪಾಲ್ ಶೆಟ್ಟಿ, ಡಾ| ಪಿ. ವಿ. ಶೆಟ್ಟಿ, ರವಿ ಶೆಟ್ಟಿ, ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ಅಧ್ಯಕ್ಷರ ಸಹಕಾರದಿಂದಾಗಿ ಅಂತಿಮ ಹಂತದ ಕಾಮಗಾರಿಗೆ ಹೆಚ್ಚುವರಿ ಎಫ್‌ಎಸ್‌ಐ ಅನುಮತಿ ದೊರೆಯಿದೆ. ಕಳೆದ ಮೂರು ವರ್ಷಗಳಲ್ಲಿ ಹೆಚ್ಚುವರಿ ಮಹಡಿಗಳಲ್ಲಾದ ಕಾಮಗಾರಿ, ನವೀಕೃತ ಸೌಲಭ್ಯಗಳು, ಕಾಲೇಜು ವಿಭಾಗಗಳ ಹೆಚ್ಚಳ, ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ, ಅಕಾಡೆಮಿಯ ಜೊತೆಗಿನ ಸಂಬಂಧ, ಕಾನೂನು ಬಳಸುವಿಕೆ, ವೆಂಡರ್‌ಗಳ ಆಯ್ಕೆ, ಜಮೀನು ಸಂಬಂಧಿ ವ್ಯಾಜ್ಯಗಳ ಮುಕ್ತಾರ, ವಿಭಾಗಗಳ ಕೇಂದ್ರೀಕರಣ ಮೊದಲಾದ ವಿಷಯಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಇದೇ ಸಂದರ್ಭದಲ್ಲಿ ಬಂಟರ ಸಂಘದನೂತನ ಅಧ್ಯಕ್ಷರಾಗಿ ನೇಮಕಗೊಂಡ ಪದ್ಮನಾಭ ಎಸ್. ಪಯ್ಯಡೆ ಹಾಗೂ ಪದಾಧಿಕಾರಿಗಳನ್ನು ಜತೆಗೆ ಉನ್ನತ ಶಿಕ್ಷಣ ಕಾಲೇಜುಗಳ ಟೈಟಲ್ ಡೋನರ್ಗಳಾದ ಅಣ್ಣಯ ಶೆಟ್ಟಿ, ಮುಂಡಪ್ಪ ಎಸ್. ಪಯ್ಯಡೆ, ಉಮಾ ಕೃಷ್ಣ ಶೆಟ್ಟಿ, ಡಾ| ಪಿ. ವಿ. ಶೆಟ್ಟಿ, ಗೌರವ್ ಆರ್. ಪಯ್ಯಡೆ ಅವರನ್ನು ಗೌರವಿಸಲಾಯಿತು.
ಆರಂಭದಲ್ಲಿ ಜರಗಿದ ಗಣ ಹೋಮ ಪೂಜೆಯಲ್ಲಿ ಉನ್ನತ ಶಿಕ್ಷಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಬಿ. ಆರ್. ಶೆಟ್ಟಿ ಮತ್ತು ಭಾರತಿ ಆರ್. ಶೆಟ್ಟಿ ದಂಪತಿ ಪಾಲ್ಗೊಂಡಿದ್ದರು. ಬಳಿಕ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಪ್ರಸಾದ ಸ್ವೀಕರಿಸಿದರು.
ವೇದಿಕೆಯಲ್ಲಿ ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಬಿ. ಶೆಟ್ಟಿ, ಜತೆಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಆರ್. ಶೆಟ್ಟಿ ಐಕಳ,ಉನ್ನತ ಶಿಕ್ಷಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಬಿ. ಆರ್. ಶೆಟ್ಟಿ. ಸಿಎ ಸತೀಶ್ ಎನ್.ಶೆಟ್ಟಿ. ಕಾರ್ಯದರ್ಶಿ ಸಿಎ ಹರೀಶ್ ಹೆಗ್ಡೆ, ಕೋಶಾಧಿಕಾರಿ ಸಿಎ ಹರೀಶ್ ಡಿ. ಶೆಟ್ಟಿ ಉಪಸ್ಥಿತರಿದ್ದರು. ಸಿಎ ಹರೀಶ್ ಹೆಗ್ಡೆ ವಂದಿಸಿದರು. ಸಂಘದ ಮಾಜಿ ಅಧ್ಯಕ್ಷರು, ವಿಶ್ವಸ್ತರು, ಉನ್ನತ ಶಿಕ್ಷಣ ಸಮಿತಿಯ ಸದಸ್ಯರು, ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.