ಮುಂಬಯಿ: ನಗರದ ಹಿರಿಯ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆ ಬಂಟರ ಸಂಘ ಮುಂಬಯಿ ಇದರ ವಾರ್ಷಿಕ ಸ್ನೇಹ ಸಮ್ಮಿಲನ ಮತ್ತು ವಿಶಿಷ್ಟ ಬಂಟ ಸಾಧಕರಿಗೆ ಸಮ್ಮಾನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಎ. 14 ರಂದು ದಿನವಿಡೀ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಇದೇ ಸಂದರ್ಭದಲ್ಲಿ ನಡೆದ ಸಂಘದ ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಒಂಬತ್ತು ಪ್ರಾದೇಶಿಕ ಸಮಿತಿಗಳ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಡೊಂಬಿವಲಿ ಪ್ರಾದೇಶಿಕ ಸಮಿತಿ ಪ್ರಥಮ, ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿ ದ್ವಿತೀಯ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ ಮತ್ತು ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಗಳು ತೃತೀಯ ಹಾಗೂ ಇತರ ಸಮಿತಿಗಳು ಸಮಾಧಾನಕರ ಬಹುಮಾನಗಳನ್ನು ಪಡೆದವು.
ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಇವರ ಅಧ್ಯಕ್ಷತೆಯಲ್ಲಿ ಸಂಜೆ ನಡೆದ ವಾರ್ಷಿಕ ಸ್ನೇಹ ಸಮ್ಮಿಲನದಲ್ಲಿ ಗಣ್ಯರ ಸಮ್ಮುಖದಲ್ಲಿ ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಅತಿಥಿಯಾಗಿ ಉದ್ಯಮಿ, ವಿಸ್ವಾತ್ ಕೆಮಿಕಲ್ಸ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಹಾಗೂ ಬಂಟರ ಸಂಘ ಮಾಜಿ ಅಧ್ಯಕ್ಷ ಬಿ. ವಿವೇಕ್ ಶೆಟ್ಟಿ, ಗೌರವ ಅತಿಥಿಯಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರ ಸಿಇಒ ಹಾಗೂ ಆಡಳಿತ ನಿರ್ದೇಶಕ ರಾಜ್‌ಕಿರಣ್ ರೈ ಅವರು ಭಾಗವಹಿಸಿದ್ದರು.
ಸಂಘದ ಉಪಾಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಬಿ. ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಆರ್. ಶೆಟ್ಟಿ, ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿ. ಶೆಟ್ಟಿ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಿದ್ದರು.
ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ, ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿದರು. ಸಂಘದ ಗೌರವ ಕೋಶಾಧಿಕಾರಿ ಪ್ರವೀಣ್ ಬಿ. ಶೆಟ್ಟಿ ವಂದಿಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರಿಂದ ಶ್ರೀ ಮಹಾವಿಷ್ಣು ಕೃಪಾ ಬಂಟ ಯಕ್ಷ ಕಲಾವೇದಿಕೆಯ ಸೌಜನ್ಯದೊಂದಿಗೆ ಬೀರೆ ದೇವು ಪೂಂಜೆ ತುಳು ಯಕ್ಷಗಾನ ಪ್ರದರ್ಶನಗೊಂಡಿತು.