ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಉನ್ನತ ಶಿಕ್ಷಣ ಕಾಲೇಜು ಹಾಗೂ ಪದವಿ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟವು ಡಿ. 15 ರಂದು ಕಾಂಜೂರ್‌ಮಾರ್ಗ್ ನೇವಲ್‌ಡಾಕ್ ಮೈದಾನದಲ್ಲಿ ವೈವಿಧ್ಯಮಯ ಕ್ರೀಡಾಸ್ಪರ್ಧೆಗಳೊಂದಿಗೆ ಅದ್ದೂರಿಯಾಗಿ ಜರಗಿತು.
ಮುಖ್ಯ ಅತಿಥಿಯಾಗಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು ಆಗಮಿಸಿ, ದೀಪಪ್ರಜ್ವಲಿಸಿ, ತೆಂಗಿನಕಾಯಿ ಒಡೆದು ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರತಿಭಾವಂತರಾಗಿ ಬೆಳೆಯಬೇಕು. ಬಂಟರ ಸಂಘವು ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹಗಲಿರುಳು ಶ್ರಮಿಸುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಕ್ರೀಡಾಸಕ್ತಿಯನ್ನು ಬೆಳೆಸಿಕೊಂಡು ಜೀವನದಲ್ಲಿ ಆದರ್ಶಪ್ರಜೆಗಳಾಗಿ ಬಾಳಬೇಕು ಎಂದು ಕರೆ ನೀಡಿದರು.
ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಕೋಶಾಧಿಕಾರಿ ಪ್ರವೀಣ್ ಬಿ. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಸಂಘದ ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಎನ್. ವಿವೇಕ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಕಿಶೋರ್ ಕುಮಾರ್ ಕುತ್ಯಾರ್, ಕಾರ್ಯದರ್ಶಿ ಭಾಸ್ಕರ ಶೆಟ್ಟಿ ಕಾರ್ನಾಡ್, ಕೋಶಾಧಿಕಾರಿ ಸಿಎ ರಮೇಶ್ ಬಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ಶೆಟ್ಟಿ, ಉನ್ನತ ಶಿಕ್ಷಣ ಸಮಿತಿಯ ಸದಸ್ಯ ಪ್ರಸನ್ನ ಶೆಟ್ಟಿ, ಮಾಜಿ ಕಾರ್ಯದರ್ಶಿ ಸಿಎ ಹರೀಶ್ ಹೆಗ್ಡೆ ಅವರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರು, ನಿರ್ದೇಶಕರು, ಕಾಲೇಜಿ ಸಿಬಂದಿಗಳು, ಹಾಗೂ ಸುಮಾರು 1000 ಕ್ಕೂ ಅಧಿಕ ವಿದ್ಯಾರ್ಥಿಗಳು ಕ್ರೀಡೋತ್ಸವದಲ್ಲಿ ಭಾಗವಹಿಸಿದ್ದರು. ಅಣ್ಣ ಲೀಲಾ ಕಾಮರ್ಸ್ ಮತ್ತು ಎಕೋನಾಮಿಕ್ಸ್ ಹಾಗೂ ಶೋಭಾ ಜಯರಾಮ ಶೆಟ್ಟಿ ಬಿಎಂಸ್ ಕಾಲೇಜು ಚಾಂಪಿಯನ್‌ಶಿಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಕ್ರಿಕೆಟ್ ಪಂದ್ಯಾಟದಲ್ಲಿ ಅಣ್ಣಲೀಲಾ ಕಾಮರ್ಸ್ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಜಯಿಸಿದರು.
ಚಿತ್ರ-ವರದಿ : ಪ್ರೇಮನಾಥ ಶೆಟ್ಟಿ ಮುಂಡ್ಕೂರು