ಮುಂಬಯಿ: ಬಂಟರ ಸಂಘ ಮುಂಬಯಿ ಇದರ ವಾರ್ಷಿಕ ಸ್ನೇಹ ಸಮ್ಮಿಲನದ ಅಂಗವಾಗಿ ರವಿವಾರ ಅಪರಾಹ್ನ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಬಂಟ್ಸ್ ಗಾಟ್ ಟ್ಯಾಲೆಂಟ್ ಸಾಂಸ್ಕೃತಿಕ ಸಂಭ್ರಮಕ್ಕೆ ಉತ್ತರ ಮುಂಬಯಿ ಕ್ಷೇತ್ರದ ಸಂಸದ ಗೋಪಾಲ್ ಸಿ. ಶೆಟ್ಟಿ ಅವರು ಹಿಂಗಾರ ಅರಳಿಸಿ ಚಾಲನೆ ನೀಡಿದರು.
ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಗೋಪಾಲ್ ಶೆಟ್ಟಿ ಅವರು, ಬಂಟರ ಸಂಘದ ಈ ಸಂಭ್ರಮದಲ್ಲಿ ಪಾಲು ಪಡೆಯುವುದು ನನಗೆ ದೊಡ್ಡ ಭಾಗ್ಯವಾಗಿದೆ. ಬಂಟ ಸಮುದಾಯದಲ್ಲಿನ ಹುಟ್ಟು ನನ್ನ ಸಾಧನೆಗೆ ವರದಾನವಾಗಿದೆ. ಸಾಧಕರ ಸಮ್ಮಾನದಿಂದ ಮತ್ತಷ್ಟು ಉತ್ತೇಜನ ಸಾಧ್ಯವಾಗುವುದು. ಇದಕ್ಕೆ ಈ ಸಡಗರ ಪೂರಕವಾಗಿದೆ. ಬಂಟರ ಏಕತೆಯ ಈ ಸಂಕಲ್ಪ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಲಿ. ನಮ್ಮ ಇಂತಹ ಸಾಂಘಿಕತೆ ಭವಿಷ್ಯತ್ತಿನ್ನುದ್ದಕ್ಕೂ ಪಸರಿಸಲಿ ಎಂದು ನುಡಿದು ಶುಭಹಾರೈಸಿದರು.
ಈ ವೇಳೆ ಬಂಟರ ಸಂಘದ ಉಪಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್. ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಹರೀಶ್ ಡಿ. ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ್ ಟಿ. ಶೆಟ್ಟಿ ಇಂದ್ರಾಳಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್. ಪಯ್ಯಡೆ, ಮಹಿಳಾ ವಿಭಾಗಧ್ಯಕ್ಷೆ ಉಮಾ ಕೆ. ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ಸಾಗರ್ ಡಿ. ಶೆಟ್ಟಿ, ಬಿ. ಆರ್. ಶೆಟ್ಟಿ, ಶಾಂತರಾಮ್ ಶೆಟ್ಟಿ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸದ ಗೋಪಾಲ್ ಸಿ. ಶೆಟ್ಟಿ ಅವರನ್ನು ಸಂಘದ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಗೌರವಿಸಿದರು. ಇದೇ ಸಂದರ್ಭದಲ್ಲಿ ನಡೆದ ಬಂಟ್ಸ್ ಗಾಟ್ ಟ್ಯಾಲೆಂಟ್-ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಎಲ್ಲ ಪ್ರಾದೇಶಿಕ ಸಮಿತಿಗಳ ತಂಡಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿದವು. ಸಾಂಸ್ಕೃತಿಕ ಸ್ಪರ್ಧೆಗಳನ್ನು ಬಂಟರ ಸಂಘ ಮುಂಬಯಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ, ಬಂಟರವಾಣಿಯ ಗೌರವ ಸಂಪಾದಕ ಗೌರವಾಧ್ಯಕ್ಷ ಅಶೋಕ್ ಪಕ್ಕಳ, ಅನುಪ್ರಿಯಾ ಶೆಟ್ಟಿ ನಿರ್ವಹಿಸಿದರು.
ಸಂಘದ ವಿಶ್ವಸ್ಥರು, ಮಾಜಿ ಅಧ್ಯಕ್ಷರುಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಉಪ ಸಮಿತಿಗಳ ಕಾರ್ಯಾಧ್ಯಕ್ಷರು, ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರು, ಪ್ರಾದೇಶಿಕ ಸಮಿತಿಗಳ ಸಮನ್ವಯಕರು, ಒಂಬತ್ತು ಪ್ರಾದೇಶಿಕ ಸಮಿತಿಗಳ ಮುಖ್ಯಸ್ಥರು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
-ಚಿತ್ರ-ವರದಿ: ರೋನ್ಸ್ ಬಂಟ್ವಾಳ್