Advertisement

ICC: ಬುಮ್ರಾ “ಐಸಿಸಿ ತಿಂಗಳ ಕ್ರಿಕೆಟಿಗ’; ಅನ್ನಾಬೆಲ್‌ಗೆ ವನಿತಾ ವಿಭಾಗದ ಪ್ರಶಸ್ತಿ

10:47 PM Jan 14, 2025 | Team Udayavani |

ದುಬಾೖ: ಆಸ್ಟ್ರೇಲಿಯ ಸರಣಿಯಲ್ಲಿ ಮಿಂಚಿದ ಜಸ್‌ಪ್ರೀತ್‌ ಬುಮ್ರಾ ಐಸಿಸಿ ತಿಂಗಳ ಪ್ರಶಸ್ತಿಗೆ ಭಾಜನ ರಾಗಿದ್ದಾರೆ. ಅವರು ಡಿಸೆಂಬರ್‌ ತಿಂಗಳ ಆಟಗಾರನ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಆಸ್ಟ್ರೇಲಿಯದ ಅನ್ನಾಬೆಲ್‌ ಸದರ್ಲೆಂಡ್‌ ವನಿತಾ ವಿಭಾಗದ ಪ್ರಶಸ್ತಿಗೆ ಪಾತ್ರರಾದರು.

Advertisement

ಬೋರ್ಡರ್‌-ಗಾವಸ್ಕರ್‌ ಟ್ರೋಫಿ ಸರಣಿಯಲ್ಲಿ ಬುಮ್ರಾ ಏಕಾಂಗಿಯಾಗಿ ಹೋರಾಡಿ ಆಸ್ಟ್ರೇಲಿಯದ ಬ್ಯಾಟರ್‌ಗಳಿಗೆ ಭೀತಿ ಹುಟ್ಟಿಸಿದ್ದರು. ಸರಣಿಯಲ್ಲೇ ಸರ್ವಾಧಿಕ 32 ವಿಕೆಟ್‌ ಉರುಳಿಸಿದ ಸಾಧನೆ ಇವರದಾಗಿತ್ತು. ಇದಕ್ಕಾಗಿ ಸರಣಿಶ್ರೇಷ್ಠ ಗೌರವವೂ ಒಲಿದಿತ್ತು. 20ಕ್ಕೂ ಕಡಿಮೆ ಸರಾಸರಿಯಲ್ಲಿ 200 ಟೆಸ್ಟ್‌ ವಿಕೆಟ್‌ ಉಡಾಯಿಸಿದ ಮೊದಲ ಬೌಲರ್‌ ಆಗಿಯೂ ಬುಮ್ರಾ ದಾಖಲೆ ಪುಟ ಸೇರಿದ್ದರು.

ಡಿಸೆಂಬರ್‌ ತಿಂಗಳಲ್ಲಿ ಆಡಲಾದ 3 ಟೆಸ್ಟ್‌ಗಳಲ್ಲಿ 22 ವಿಕೆಟ್‌ ಉಡಾಯಿಸಿದ ಸಾಧನೆ ಬುಮ್ರಾ ಅವರದಾಗಿದೆ. ಸರಾಸರಿ 14.22. ಪ್ರಶಸ್ತಿ ರೇಸ್‌ನಲ್ಲಿದ್ದ ಉಳಿದಿಬ್ಬರೆಂದರೆ ಆಸ್ಟ್ರೇಲಿಯದ ಪ್ಯಾಟ್‌ ಕಮಿನ್ಸ್‌ ಮತ್ತು ದಕ್ಷಿಣ ಆಫ್ರಿಕಾದ ಡೇನ್‌ ಪ್ಯಾಟರ್ಸನ್‌.

“ವೈಯಕ್ತಿಕ ಪುರಸ್ಕಾರದ ಮೂಲಕ ಗುರುತಿಸಿಕೊಳ್ಳುವುದು ಯಾವತ್ತೂ ಹೆಚ್ಚಿನ ಸಂತೋಷ ಕೊಡುತ್ತದೆ. ಕಳೆದ ಬೋರ್ಡರ್‌-ಗಾವಸ್ಕರ್‌ ಟ್ರೋಫಿ ಸರಣಿ ನಿಕಟ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಅಲ್ಲಿಗೆ ಹೋಗಿ ದೇಶಕ್ಕಾಗಿ ಉತ್ತಮ ಪ್ರದರ್ಶನ ನೀಡಿದ್ದು ಗೌರವದ ಸಂಗತಿ’ ಎಂದು ಬುಮ್ರಾ ಪ್ರತಿಕ್ರಿಯಿಸಿದ್ದಾರೆ.

ಅನ್ನಾಬೆಲ್‌ ಸಾಧನೆ

Advertisement

ಅನ್ನಾಬೆಲ್‌ ಸದರ್ಲೆಂಡ್‌ ಪ್ರವಾಸಿ ಭಾರತದೆದುರಿನ ಸರಣಿಯಲ್ಲಿ ಆಲ್‌ರೌಂಡ್‌ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು. 3ನೇ ಏಕದಿನದಲ್ಲಿ ಸೆಂಚುರಿ ಹೊಡೆದು ಮಿಂಚಿದ್ದರು (110). ಬಳಿಕ ನ್ಯೂಜಿಲ್ಯಾಂಡ್‌ ವಿರುದ್ಧದ ಮೊದಲ ಪಂದ್ಯದಲ್ಲೂ ಅಜೇಯ 105 ರನ್‌ ಹೊಡೆಯುವ ಮೂಲಕ ಸತತ 2 ಏಕದಿನ ಪಂದ್ಯಗಳಲ್ಲಿ ಶತಕ ಬಾರಿಸಿದ ಸಾಧಕಿಯಾಗಿ ಮೂಡಿಬಂದರು. ಈ 2 ಸರಣಿಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗಳ ಹ್ಯಾಟ್ರಿಕ್‌ ಸಾಧಿಸಿದ್ದು ಅನ್ನಾಬೆಲ್‌ ಹೆಗ್ಗಳಿಕೆ.

Advertisement

Udayavani is now on Telegram. Click here to join our channel and stay updated with the latest news.