ದುಬಾೖ: ಟೆಸ್ಟ್ ಕ್ರಿಕೆಟಿನ ನಂ.1 ಬೌಲರ್ ಆಗಿರುವ ಜಸ್‌ಪ್ರೀತ್ ಬುಮ್ರಾ ನೂತನ ಎತ್ತರ ತಲುಪಿದ್ದಾರೆ. ಅವರ ರೇಟಿಂಗ್ ಅಂಕವೀಗ 904ಕ್ಕೆ ಏರಿದ್ದು, ಇದು ಅವರ ಜೀವನ ಶ್ರೇಷ್ಠ ಸಾಧನೆಯಾಗಿದೆ. ಇದರೊಂದಿಗೆ ಆರ್. ಅಶ್ವಿನ್ ಅವರ ಭಾರತೀಯ ದಾಖಲೆಯನ್ನು ಸರಿದೂಗಿಸಿದರು.
ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ 94ಕ್ಕೆ 9 ವಿಕೆಟ್ ಉರುಳಿಸಿದ ಬುಮ್ರಾ 14 ಅಂಕವನ್ನು ತಮ್ಮ ಖಾತೆಗೆ ಸೇರಿಸಿಕೊಂಡರು. ಇದರೊಂದಿಗೆ ಅಂಕ 904ಕ್ಕೆ ಏರಿತು. ಈ ಸರಣಿಯಲ್ಲಿ ಬುಮ್ರಾ ಈಗಾಗಲೇ 21 ವಿಕೆಟ್ ಉರುಳಿಸಿದ್ದು, 48 ರೇಟಿಂಗ್ ಅಂಕ ಗಳಿಸಿದ್ದಾರೆ.
ಆರ್. ಅಶ್ವಿನ್ 2016ರ ಡಿಸೆಂಬರ್‌ನಲ್ಲಿ ಇಷ್ಟೇ ಅಂಕ ಹೊಂದಿದ್ದರು. ಅಂದು ಪ್ರವಾಸಿ ಇಂಗ್ಲೆಂಡ್ ಎದುರಿನ ಮುಂಬಯಿ ಟೆಸ್ಟ್ ಬಳಿಕ ಅವರು ಈ ಎತ್ತರ ತಲುಪಿದ್ದರು.
ಕಾಗಿಸೊ ರಬಾಡ (856), ಜೋಶ್ ಹೇಝಲ್‌ವುಡ್ (852) ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನದಲ್ಲಿದ್ದಾರೆ. ಪ್ಯಾಟ್ ಕಮಿನ್ಸ್ 4ನೇ ಸ್ಥಾನಿಯಾಗಿದ್ದಾರೆ (822). ಸರಣಿಯ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಘೋಷಿಸಿದ ಆರ್. ಅಶ್ವಿನ್ 5ನೇ ಸ್ಥಾನದಲ್ಲಿದ್ದು (789), ಸದ್ಯದಲ್ಲೇ ಇವರ ಹೆಸರು ಈ ಯಾದಿಯಿಂದ ಬೇರ್ಪಡಲಿದೆ.
ಮ್ಯಾಟ್ ಹೆನ್ರಿ, ನಥನ್ ಲಿಯಾನ್, ಪ್ರಭಾತ್ ಜಯಸೂರ್ಯ, ನೊಮಾನ್ ಅಲಿ ಒಂದೊಂದು ಸ್ಥಾನ ಪ್ರಗತಿ ಸಾಧಿಸಿದ್ದು, 6ರಿಂದ 9ನೇ ಸ್ಥಾನ ಅಲಂಕರಿಸಿದ್ದಾರೆ. ರವೀಂದ್ರ ಜಡೇಜ 4 ಸ್ಥಾನ ಕುಸಿತ ಕಂಡು 10ನೇ ಸ್ಥಾನಕ್ಕೆ ಬಂದು ನಿಂತಿದ್ದಾರೆ.