ಶ್ರೀನಗರ:ಜಮ್ಮು-ಕಾಶ್ಮೀರದಲ್ಲಿ ಈ ಬಾರಿ ಸ್ಟ್ರಾಬೆರಿ ಬಂಪರ್ ಬೆಳೆ ಬಂದಿದೆ. ಸ್ಟ್ರಾಬೆರಿ ಬೆಳೆ ಕಳೆದ ಬಾರಿಗಿಂತ ಶೇ.20ರಷ್ಟು ಹೆಚ್ಚಳವಾಗಿದೆ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಸಿಗಲಿಲ್ಲ ಎಂಬ ಸ್ಥಿತಿ ಇಲ್ಲಿನ ರೈತರದ್ದಾಗಿದೆ. ಹೌದು ಕೋವಿಡ್ 19 ಲಾಕ್ ಡೌನ್ ನಿಂದ ಸ್ಟ್ರಾಬೆರಿ ಮಾರಾಟ ಮಾಡಲು ಸಾಧ್ಯವಾಗದೆ ನಷ್ಟ ಅನುಭವಿಸುವಂತಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ ಪಾಸಿಟಿವ್ ಆಗಿ ಗುಣಮುಖನಾಗಿದ್ದ ಖೈದಿ ಆಸ್ಪತ್ರೆಯಲ್ಲಿ ಸಾವು
ಕೋವಿಡ್ 19 ಲಾಕ್ ಡೌನ್ ನಿಂದಾಗಿ ಅತೀ ಹೆಚ್ಚು ಸ್ಟ್ರಾಬೆರಿ ಬೆಳೆದಿದ್ದರೂ ಕೂಡಾ ಮಾರುಕಟ್ಟೆ ಇಲ್ಲದೇ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರೂ ಕೂಡಾ ಹೆಚ್ಚಿನ ಬೆಳೆ ಮಾರಾಟವಾಗದೆ ನಷ್ಟವಾಗಿದೆ ಎಂದು ವರದಿ ವಿವರಿಸಿದೆ.
ಸ್ಟ್ರಾಬೆರಿ ಬೆಳೆ ನಷ್ಟದ ಬಗ್ಗೆ ಜಮ್ಮು-ಕಾಶ್ಮೀರ ಸರ್ಕಾರ ಅದರ ಬಗ್ಗೆ ಆಲೋಚಿಸಿಯೂ ಇಲ್ಲ, ತನ್ನ ಬೆಳೆ ರಕ್ಷಿಸಲು ರೈತ ಏಕಾಂಗಿಯಾಗಿ ಪ್ರಯತ್ನಿಸುವಂತಾಗಿದೆ ಎಂದು ರೈತರು ದೂರಿದ್ದಾರೆ. ಈ ಬಾರಿ ಶೇ.50ರಿಂದ 60ರಷ್ಟು ನಷ್ಟ ಅನುಭವಿಸಿರುವುದಾಗಿ ಕಣಿವೆ ಪ್ರದೇಶದಲ್ಲಿನ ಪ್ರಮುಖ ಸ್ಟ್ರಾಬೆರಿ ಉತ್ಪಾದಕ ಮನ್ಜೂರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.20ರಷ್ಟು ಹೆಚ್ಚು ಸ್ಟ್ರಾಬೆರಿ ಬೆಳೆ ಬೆಳೆದಿತ್ತು. ಸ್ಟ್ರಾಬೆರಿ ಗುಣಮಟ್ಟವೂ ಒಳ್ಳೆದಿತ್ತು. ಆದರೆ ಲಾಕ್ ಡೌನ್ ನಿಂದಾಗಿ ಮಾರುಕಟ್ಟೆ ಇಲ್ಲ, ಗ್ರಾಹಕರೂ ಇಲ್ಲದೇ ನಷ್ಟ ಅನುಭವಿಸುವಂತಾಗಿದೆ ಎಂದು ಅಹ್ಮದ್ ತಿಳಿಸಿದ್ದಾರೆ.
ಕನಿಷ್ಠ ಪಕ್ಷ ಸ್ಟ್ರಾಬೆರಿ ಬೆಳೆಯನ್ನು ರಕ್ಷಿಸಿಡಲು ಕೋಲ್ಡ್ ಸ್ಟೋರೇಜ್ ಅನ್ನು ರಾಜ್ಯ ಸರ್ಕಾರ ಸ್ಥಾಪಿಸಲಿ. ಇದರಿಂದ ಹೂ, ಹಣ್ಣು, ತರಕಾರಿ ಮಾರಾಟಗಾರರಿಗೆ ಅನುಕೂಲವಾಗಲಿದೆ ಎಂದು ಅಹ್ಮದ್ ಈ ಸಂದರ್ಭದಲ್ಲಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.