Advertisement
ಕಳೆದ ಸಾಲಿನ ಭೀಕರ ಬರ ಹಾಗೂ ಅಧಿಕ ಬಿಸಿಲಿನಿಂದ ಕೂಡಿದ ವಾತಾವರಣದಿಂದಾಗಿ ತೆಂಗಿನ ಬೆಳೆ ಮೇಲೆ ಸಾಕಷ್ಟು ಹಾನಿಯಾಗಿತ್ತು. ನೀರಿನ ಕೊರತೆಯಾಗಿ ಎಳನೀರು ಬೆಳೆ ಸಿಗದಂತಾಗಿದೆ. ಎಳನೀರಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದರವೂ ಹೆಚ್ಚಾಗಿದೆ. ಮಂಡ್ಯದಲ್ಲಿ ದಲ್ಲಾಳಿಗಳು ರೈತರಿಂದ 36 ರೂ.ಗೆ ಎಳನೀರು ಖರೀದಿಸುತ್ತಿದ್ದಾರೆ. ಈ ಹಿಂದೆ ಬೆಳೆಗಾರರಿಂದ ದಲ್ಲಾಳಿಗಳು ಖರೀದಿಸುತ್ತಿದ್ದ ದರ 20 ರೂ. ಆಸುಪಾಸಿನಲ್ಲೇ ಇತ್ತು. ಇದೇ ಮೊದಲ ಬಾರಿ 33, 35 ಮತ್ತು 36 ರೂ. ಕೊಟ್ಟು ರೈತರಿಂದ ಖರೀದಿಸಲಾಗುತ್ತಿದೆ. ಇದು ಸದ್ಯದ ಮಟ್ಟಿಗೆ ದಾಖಲೆಯಾಗಿದೆ.
Related Articles
ಜಿಲ್ಲೆಯ ಮದ್ದೂರು ಹಾಗೂ ಕೆ.ಆರ್. ಪೇಟೆ ಎಳನೀರು ಮಾರುಕಟ್ಟೆಯಿಂದ ದೇಶದ ದಿಲ್ಲಿ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ. ಆದರೆ ಬೇಡಿಕೆಗೆ
ತಕ್ಕಂತೆ ಎಳನೀರು ಸಿಗುತ್ತಿಲ್ಲ. ಮಳೆಗಾಲವಿದ್ದರೂ ಎಳನೀರಿಗೆ ಬೇಡಿಕೆ ಕಡಿಮೆಯಾಗಿಲ್ಲ.
Advertisement
ದಲ್ಲಾಳಿಗಳು ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಎಳನೀರು ತಂದು ಹೊರ ರಾಜ್ಯಗಳಿಗೆ ಪೂರೈಸುತ್ತಿದ್ದಾರೆ ಎಂದು ವರ್ತಕರೊಬ್ಬರು ತಿಳಿಸಿದರು.
ಡಿಸೆಂಬರ್‌ಗೆ ದರ ಇಳಿಕೆ?ಕಳೆದ ಸಾಲಿನಲ್ಲಿ ಮಳೆ ಬಾರದೆ ಜಿಲ್ಲೆಯು ಭೀಕರ ಬರಗಾಲಕ್ಕೆ ತುತ್ತಾಗಿತ್ತು. ನೀರಿನ ಕೊರತೆ ಉಂಟಾಗಿ ಸಾಕಷ್ಟು ಬೆಳೆ ಒಣಗಿ ನಷ್ಟ ಎದುರಾಗಿತ್ತು. ಆಗ ಮಳೆ ಬಿದ್ದಿದ್ದರೆ ತೆಂಗಿನ ಮರಗಳೆಲ್ಲವೂ ಉತ್ತಮ ಫಲ ನೀಡುತ್ತಿದ್ದವು. ಆದರೆ ಈಗ ಮಳೆ ಬೀಳುತ್ತಿದ್ದರೂ ತೆಂಗಿನ ಫಸಲು ಉತ್ತಮವಾಗಿಲ್ಲ. ಮುಂದಿನ ಡಿಸೆಂಬರ್ ವೇಳೆ ಯಥೇತ್ಛವಾಗಿ ಎಳನೀರು ಸಿಗಲಿದ್ದು ಆಗ ದರ ಕಡಿಮೆಯಾಗಲಿದೆ ಎಂದು ರೈತರೊಬ್ಬರು ತಿಳಿಸಿದರು. -ಎಚ್. ಶಿವರಾಜು