ಮಂಡ್ಯ: ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಎತ್ತಿನಗಾಡಿಯ ನೊಗ ಹೊಡೆದಿದೆ. ಇದರಿಂದ ಕೆಳಕ್ಕೆ ಬಿದ್ದ ರೈತನ ಮೇಲೆ ಗಾಡಿ ಹರಿದು ಸ್ಥಳದಲ್ಲಿಯೇ ಮೃತಪಟ್ಟು, ಒಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಚಿಕ್ಕಮಂಡ್ಯ ಗ್ರಾಮದಲ್ಲಿ ನಡೆದಿದೆ.
ಕೀಲಾರ ಗ್ರಾಮದ ರೈತ ಮುಖಂಡ ನಾಗರಾಜು(55) ಸ್ಥಳದಲ್ಲಿಯೇ ಮೃತಪಟ್ಟಿರುವ ವ್ಯಕ್ತಿ. ಹುಲಿವಾನ ಗ್ರಾಮದ 12 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ನಾಗರಾಜು ರೈತ ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಶ್ರೀ ಹಳ್ಳಿಕೇಶ್ವರ ಬೋರೇಶ್ವರ ಹಾಗೂ ರೈತಮಿತ್ರ ಬಳಗದ ವತಿಯಿಂದ ಚಿಕ್ಕಮಂಡ್ಯ ಗ್ರಾಮದಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ೮ನೇ ವರ್ಷದ ಅಂತರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಎರಡನೇ ದಿನವಾದ ಭಾನುವಾರ ಈ ದುರ್ಘಟನೆ ನಡೆದಿದೆ. ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ರಾಜ್ಯ, ಜಿಲ್ಲೆ, ಹೊರ ಜಿಲ್ಲೆಗಳಿಂದ ಎತ್ತಿನಗಾಡಿಗಳು ಆಗಮಿಸಿದ್ದವು. ಆದರೆ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ತಿಳಿದು ಬಂದಿದೆ.
ಎತ್ತಿನಗಾಡಿ ಓಟದ ಸ್ಪರ್ಧೆಯ ದುರ್ಘಟನೆಯ ವಿಡಿಯೋ ವೈರಲ್ ಆಗಿದೆ. ಆಯೋಜನೆಗೊಂಡಿದ್ದ ಜಾಗದ ಪಕ್ಕದ ಮನೆಯ ಮೇಲಿಂದ ವ್ಯಕ್ತಿಯೊಬ್ಬರು ಓಟದ ಸ್ಪರ್ಧೆಯ ವಿಡಿಯೋ ಮಾಡುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಅದರ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಎತ್ತಿನಗಾಡಿ ಸಾರ್ವಜನಿಕರ ಮೇಲೆಯೇ ಎರಗಿ ಬಂದಿದೆ. ಆಗ ಪ್ರೇಕ್ಷಕರು ದಿಕ್ಕಾಪಾಲಾಗಿ ಓಡಿರುವುದು ದೃಶ್ಯದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ತಾರಾ ಸಂಸದ ವರುಣ್ ಗಾಂಧಿ?