Advertisement
ಹಾಗಂತ, ಸಿನಿಮಾದ ಉದ್ದೇಶ ಕೇವಲ ಮನರಂಜನೆಯಾಗಿರಬೇಕೇ? ಅದರಾಚೆಗಿನ ಅಂಶಗಳ ಬಗ್ಗೆ ಯೋಚಿಸುವುದಾದರೆ, ಸಂದೇಶವೂ ಇರಬೇಕು, ವಾಸ್ತವತೆಯನ್ನು ಬಿಂಬಿಸುವಂತೆಯೂ ಇರಬೇಕು. ಆ ಅಂಶಗಳಿಲ್ಲಿ ಅಡಕವಾಗಿವೆ. ಇಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಅಪಾಯಕಾರಿ ವ್ಯಕ್ತಿಗಳಿದ್ದಾರೆ. ಅಂತಹವರ ವಿರುದ್ಧ ಸಿಡಿದೇಳುವ ಅಪರೂಪದ ವ್ಯಕ್ತಿತ್ವಗಳೂ ಕಾಣಸಿಗುತ್ತವೆ. ಇಂತಹ ಸೂಕ್ಷ್ಮವಿಷಯಗಳೇ “8 ಎಂಎಂ’ ಚಿತ್ರದ ಗಟ್ಟಿ ಅಡಿಪಾಯ ಅಂದರೆ ತಪ್ಪಿಲ್ಲ. ಇಲ್ಲಿ ಕಥೆ ಇದೆ.
Related Articles
Advertisement
ಎಲ್ಲೋ ಒಂದು ಕಡೆ, ಗಂಭೀರವಾಗಿ ಸಾಗುವ ಚಿತ್ರದ ಮಧ್ಯೆ, ಲವ್‌ಟ್ರ್ಯಾಕ್ ಇಣುಕಿ, ಕೊಂಚ ತಾಳ್ಮೆ ಕೆಡಿಸುತ್ತದೆ ಎಂಬುದನ್ನು ಬಿಟ್ಟರೆ, ಕೆಲ ಅಂಶಗಳು ಆಪ್ತವಾಗಿಸಿ ನೋಡಿಸಿಕೊಂಡು ಹೋಗುತ್ತದೆ. ಈ ಚಿತ್ರ ನೋಡಿದರೆ, ಜಗ್ಗೇಶ್ ಸಂಪೂರ್ಣ ಬದಲಾಗಿರುವುದು ಗೊತ್ತಾಗುತ್ತೆ. ಅಂದರೆ, ಅವರನ್ನು ಇಲ್ಲಿಯ ತನಕ ಹಾಸ್ಯದ ಝಲಕ್‌ನಲ್ಲಿ ನೋಡಿದವರಿಗೆ ಇಲ್ಲೊಂದು ದೊಡ್ಡ ಬದಲಾವಣೆ ಕಂಡರೆ ಅಚ್ಚರಿಯಿಲ್ಲ. ಅವರ ಈ ಬದಲಾವಣೆಗೆ ಕಾರಣ ಕಥೆ ಮತ್ತು ಪಾತ್ರ.
ಎಲ್ಲದ್ದಕ್ಕೂ ಹೆಚ್ಚಾಗಿ, ಕೊನೆಯ ಇಪ್ಪತ್ತು ನಿಮಿಷದ ಕ್ಲೈಮ್ಯಾಕ್ಸ್‌ನಲ್ಲಿ ಎಲ್ಲರಲ್ಲೂ ಭಾವುಕತೆ ಹೆಚ್ಚಿಸುವ ನಟನೆ. ಇಲ್ಲಿ ಜಗ್ಗೇಶ್ ಅವರಿಗೆ ವಯಸ್ಸಾಯ್ತಾ ಅಂತ ಅಂದುಕೊಂಡರೂ, ವಯಸ್ಸು ಮುಖ್ಯವಲ್ಲ, ಚಿಂತನೆಯಷ್ಟೇ ಮುಖ್ಯ ಎಂಬುದನ್ನು ಆ ಪಾತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. ಇಷ್ಟು ದಿನ ನೋಡಿದ ಜಗ್ಗೇಶ್, ಇಲ್ಲಿ ಅವರ ವಯಸ್ಸಿಗೆ ತಕ್ಕಂತಹ ಪಾತ್ರ ನಿರ್ವಹಿಸುವ ಮೂಲಕ ಒಬ್ಬ ಅಸಹಾಯಕ ವ್ಯಕ್ತಿಯಾಗಿ, ಭಾವನೆಗಳನ್ನು ಕೆದಕಿ ಎಲ್ಲರ ಎದೆಭಾರವಾಗಿಸಿ, ಹತ್ತಿರವಾಗುತ್ತಾರೆ.
ಕಥೆ ಬಗ್ಗೆ ಹೇಳುವುದಾದರೆ, ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬನ “8ಎಂಎಂ’ ಬುಲೆಟ್ ಇರುವ ಗನ್ ಕಳುವಾಗುತ್ತೆ. ಆ ಕಳುವಾದ ಗನ್ ಬಳಸಿ, ದರೋಡೆಯಾಗುತ್ತೆ, ಶೂಟೌಟ್ ಮಾಡಲಾಗುತ್ತೆ. ಆ ಗನ್ ಕದ್ದವರ್ಯಾರು, ಕೊಲೆ ಮಾಡಿದವರ್ಯಾರು, ಆ ಗನ್ ಕದ್ದವನು ಸಿಗುತ್ತಾನಾ, ಅವನು ಯಾತಕ್ಕಾಗಿ ದರೋಡೆ ಮಾಡ್ತಾನೆ, ಕೊಲೆಗೈಯುತ್ತಾನೆ ಎಂಬುದೇ ಕಥೆ. ಕುತೂಹಲವಿದ್ದರೆ, “8ಎಂಎಂ’ ನೋಡಲು ಯಾವ ತಕರಾರಿಲ್ಲ.
ಇಷ್ಟು ದಿನ ವಿಲನ್ ಆಗಿ ನೋಡುತ್ತಿದ್ದ ವಸಿಷ್ಠ ಸಿಂಹ ಅವರನ್ನಿಲ್ಲಿ ಒಬ್ಬ ಮುಗ್ಧ ಪೊಲೀಸ್ ಅಧಿಕಾರಿಯನ್ನಾಗಿ ಕಾಣಬಹುದು. ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ದಕ್ಷ ಅಧಿಕಾರಿಯಾಗಿ ರಾಕ್‌ಲೈನ್ ವೆಂಕಟೇಶ್ ಇರುವಷ್ಟು ಕಾಲ ಇಷ್ಟವಾದರೆ, ಶೋಭರಾಜ್ ಭ್ರಷ್ಟ ಅಧಿಕಾರಿಯಾಗಿ ಗೇಮ್‌ಗೊಂದು ಮಜ ಕೊಡುತ್ತಾರೆ. ಮಯೂರಿ ಗ್ಲಾಮರ್‌ಗಷ್ಟೇ ಸೀಮಿತ. ಆದಿಲೋಕೇಶ್ ಸೇರಿದಂತೆ ಇತರೆ ಪಾತ್ರಗಳು ಕಥೆಯ ವೇಗಕ್ಕೆ ಹೆಗಲು ಕೊಟ್ಟಿವೆ. ಜೂಡಾ ಸ್ಯಾಂಡಿ ಸಂಗೀತ ಪರವಾಗಿಲ್ಲ. ಎ.ಆರ್.ವಿನ್ಸೆಂಟ್ ಛಾಯಾಗ್ರಹಣ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ.
ಚಿತ್ರ: 8 ಎಂಎಂನಿರ್ಮಾಣ: ನಾರಾಯಣ ಬಾಬು, ಪ್ರದೀಪ್, ಸಲೀಂ ಶಾ
ನಿರ್ದೇಶನ: ಹರಿಕೃಷ್ಣ ಎಸ್.
ತಾರಾಗಣ: ಜಗ್ಗೇಶ್, ವಸಿಷ್ಠ ಸಿಂಹ, ಮಯೂರಿ, ರಾಕ್‌ಲೈನ್ ವೆಂಕಟೇಶ್, ಶೋಭರಾಜ್, ಆದಿಲೋಕೇಶ್ ಇತರರು. * ವಿಜಯ್ ಭರಮಸಾಗರ