ನಿನ್ನ ಸ್ಕೂಟಿಯ ಹಿಂದೆ ನನ್ನ ಹೆಡ್ಡಂಬಡ್ಡ ಬಾಯಿ ಬಡುಕ ಒರಟು ಬುಲೆಟ್ಟು. ಒಂದಕ್ಕೂಂದು ತಾಳೆಯಾಗುತ್ತಲೇ ಇಲ್ಲವಲ್ಲ ಅಂತ ನಂಗೆ ನಗು ಬರುತ್ತಿತ್ತು. ನೀ ನಿಧಾನಿಸಿದಷ್ಟೂ ಬುಲೆಟ್ಟು ತಂತಾನೆ ಆಗತಾನೆ ನಡಿಗೆ ಕಲಿತ ಮಗುವಿನಂತೆ ಮುಗ್ಧತೆಯಿಂದ ನಟಿಸುತ್ತಿತ್ತು…
ಅರೆ! ಅದೆಲಿದ್ದೆ ಇಷ್ಟು ದಿನ? ನಿತ್ಯ ಓಡಾಡುವ ರಸ್ತೆಯ ತುದಿಯ ಮನೆಯ ಹುಡುಗಿ ನೀನು ಅಂತ ಗೊತ್ತಾದಾಗ, ನನ್ನ ಹೃದಯ ಏಕೆ ನಿನ್ನನ್ನು ಹುಡುಕಲಿಕ್ಕೆ ಇಷ್ಟೊಂದು ದಿನ ನುಂಗಿ ಹಾಕಿತು ಅನ್ನಿಸಿ ಆಶ್ಚರ್ಯವಾಯ್ತು. ಅದೆಷ್ಟೋ ತಂಪನೆಯ ಮುಂಜಾನೆಗಳು ನಿನ್ನ ನೋಡುವ ಭಾಗ್ಯ ಕಳೆದುಕೊಂಡೆ ನಾನು ಅಂತ ಶಪಿಸಿಕೊಂಡೆ.
ನಿನ್ನ ನೋಡಿದ ಮೊದಲ ದಿನವೇ, ನನ್ನ ಬದುಕಿನೊಳಕ್ಕೆ ಸಂಭ್ರಮವೊಂದು ಕಳ್ಳ ಹಜ್ಜೆ ಇಟ್ಟು ನಡೆದು ಬಂತು. ರಾತ್ರಿ ಓದುತ್ತಾ ಯಾವುದೋ ಜಾವದಲ್ಲಿ ನಿದಿರೆಗೆ ಜಾರಿದಾಗ, ಓದುತ್ತಿದ್ದ ಪುಸ್ತಕ ಎದೆಯಪ್ಪಿಕೊಂಡು ನನ್ನೊಂದಿಗೇ ಕನಸು ಕಾಣುತ್ತಾ ಉಳಿಯುತ್ತಿತ್ತು. ಮುಂಜಾನೆ ಎಚ್ಚರಾದಾಗ ಎದೆಯಪ್ಪಿಕೊಂಡ ಪುಸ್ತಕ ನೀನೇ ಅನಿಸುತ್ತಿತ್ತು.ಅದಕ್ಕೊಂದು ಮುತ್ತನ್ನಿಟ್ಟು ಪುಸ್ತಕದ ಘಮ ಆಘ್ರಾಣಿಸುತ್ತಿದ್ದೆ. ಅಲ್ಲಿಂದ ಹದಿನೈದನೇ ನಿಮಿಷಕ್ಕೆ ನೀ ಬರುವ ಹಾದಿಯ ಕಾಯುತ್ತಾ ನಿಲ್ಲುತ್ತಿದ್ದೆ. ನಿಜಕ್ಕೂ ನೀನು ನನ್ನ ಮುಂಜಾವುಗಳಿಗೆ ಹೊಸ ರಂಗು ತುಂಬಿದ್ದೆ.
ಗಾಳಿಗೆ ಹಾರುವ ಹಕ್ಕಿರೆಕ್ಕೆಯ ಸೊಂಪು ಕೂದಲು. ಆ ನಗು ನಿನ್ನ ನಿಲುವಿಗೆ ಚೆಲುವು ತುಂಬುತ್ತಾ, ಸಂಭ್ರಮದ ತೇರಂತೆ ಹೊತ್ತು ಹೊರಟ ನಿನ್ನ ಆಜ್ಞಾಪಾಲಕ ಮೆದು ಭಾಷೆಯ ಸ್ಕೂಟಿ. ನಿನ್ನ ಸ್ಕೂಟಿಯ ಹಿಂದೆ ನನ್ನ ಹೆಡ್ಡಂಬಡ್ಡ ಬಾಯಿ ಬಡುಕ ಒರಟು ಬುಲೆಟ್ಟು. ಒಂದಕ್ಕೂಂದು ತಾಳೆಯಾಗುತ್ತಲೇ ಇಲ್ಲವಲ್ಲ ಅಂತ ನಂಗೆ ನಗು ಬರುತ್ತಿತ್ತು. ನೀ ನಿಧಾನಿಸಿದಷ್ಟೂ ಬುಲೆಟ್ಟು ತಂತಾನೆ ಆಗತಾನೆ ನಡಿಗೆ ಕಲಿತ ಮಗುವಿನಂತೆ ಮುಗ್ಧತೆಯಿಂದ ನಟಿಸುತ್ತಿತ್ತು.
ಮನೆಯಿಂದ ನಿನ್ನ ಕಾಲೇಜಿನ ವರೆಗಿನ ಆ ಹದಿನೈದು ನಿಮಿಷಗಳ ಪಯಣ, ನನ್ನೊಳಗೆ ಸಾವಿರ ತಂತಿಗಳ ಮೀಟಿದಂಥ ನಾದವೊಂದು ಆವರಿಸಿದಂತೆ ಪುಳಕಗೊಳ್ಳುತ್ತಿದ್ದೆ. ನಿತ್ಯದ ಚಿರಪರಿಚಿತ ಹಾದಿ ಕೂಡ, ನಿನ್ನಿಂದ ನಿತ್ಯವೂ ಹೊಸ ಗಮ್ಯವೊಂದಕ್ಕೆ ಹೊರಟಂಥ ಉತ್ಸಾಹವೊಂದು ಉಕ್ಕುತ್ತಿತ್ತು. ಮುಂಜಾನೆಯ ಸಕ್ಕರೆ ನಿದ್ದೆಯನ್ನು ಕಳೆದುಕೊಳ್ಳದ ನನ್ನನ್ನು, ಹೊಸ ಮುಂಜಾವುಗಳಿಗೆ ಪರಿಚಯಿಸಿಕೊಟ್ಟ ಹುಡುಗಿ ನೀನು. ನನ್ನ ರಾತ್ರಿಯ ಖಾಲಿ ಕನಸುಗಳ ದರ್ಬಾರಿಗೆ ಹಾಜರಾಗಿ ಹೊಸ ಸಂಭ್ರಮ ತುಂಬಿದವಳು ನೀನು. ನನಗೆ ಅನಿಸಿದಂತೆ ನಿನಗೂ ಅನ್ನಿಸಲಿ ಅಂತ ಮನಸಾರೆ ಶಪಿಸುತ್ತೇನೆ. ನನ್ನ ಬುಲೆಟ್ಟು ನೀನೊಬ್ಬನನ್ನೇ ಎಷ್ಟು ದಿನ ಅಂತ ಹೊತ್ತೂಯ್ಯಲಿ ಮಾರಾಯ. ನೀನೊಬ್ಬ ಮಹಾ ಬೋರು ಮಾರಾಯ. ಜೋಡಿಯಾಗಿ ಯಾವತ್ತೂ ನನ್ನ ಬೆನ್ನೇರುತ್ತೀರಿ ಅಂತ ಮುಖ ತಿರುಗಿಸಿಕೊಂಡು ವಾರೇ ಗಣ್ಣಲ್ಲೇ ಗುರಾಯಿಸುತ್ತದೆ. ಅದಕ್ಕೆ ಏನೂಂತ ಉತ್ತರಿಸಲಿ? ಸ್ಕೂಟಿಯೂ ನಿನ್ನ ಮೇಲೆ ಇದೇ ವಿಷಯಕ್ಕೆ ಮುನಿಸಿಕೊಂಡಿದೆಯಂತೆ ನಿಜವಾ..? ಮುಂಜಾನೆ ನಿನ್ನ ಉತ್ತರಕ್ಕಾಗಿ ಕಾದಿರುತ್ತೇನೆ.
ನಿನ್ನ ಅನಾಮಿಕ ಹುಡುಗ
ಜೀವ ಮುಳ್ಳೂರು