Advertisement

ಗೊಂದಲ-ವಿವಾದ ಸೃಷ್ಟಿಸಿದ ಬುಲ್ಡೋಜರ್‌!

05:06 PM Apr 28, 2022 | Team Udayavani |

ಚಿಕ್ಕಮಗಳೂರು: ಕೆಲ ರಾಜ್ಯಗಳಲ್ಲಿ ಸರ್ಕಾರಿ ಜಾಗ ಒತ್ತುವರಿ ತೆರವು ಸೇರಿದಂತೆ ಹಲವು ಅಕ್ರಮ ತಡೆಗೆ ಬುಲ್ಡೋಜರ್‌ ಮಾದರಿ ಅನುಸರಿಸಲಾಗುತ್ತಿದ್ದು, ರಾಜ್ಯದಲ್ಲೂ ಬುಲ್ಡೋಜರ್‌ ಕಾರ್ಯಾಚರಣೆ ಬಗ್ಗೆ ಚರ್ಚೆ ನಡೆದಿವೆ. ಈ ಮಧ್ಯೆ ಚಿಕ್ಕಮಗಳೂರಿನಲ್ಲಿ ಬುಲ್ಡೋಜರ್‌ ಕಾರ್ಯಾಚರಣೆಯೊಂದು ಭಾರೀ ಸದ್ದು ಮಾಡಿದ್ದು, ಸ್ವಚ್ಛತಾ ಕಾರ್ಯಕ್ಕೆ ಬುಲ್ಡೋಜರ್‌ ಬಳಕೆಯಾಗಿದ್ದು ಬೇರೆ ಬೇರೆ ಸ್ವರೂಪ ಪಡೆದು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿ ಚರ್ಚೆಗೆ ಗ್ರಾಸವಾಗಿದೆ.

Advertisement

ಆಗಿದ್ದೇನು?

ನಗರಸಭೆಯಿಂದ ಸ್ವಚ್ಛತಾ ಕಾರ್ಯಕ್ಕಾಗಿ ಬುಲ್ಡೋಜರ್‌ ಬಳಸಲಾಗಿತ್ತು. ಇದರ ವಿಡಿಯೋ ಹರಿಬಿಟ್ಟು, ‘ಬುಲ್ಡೋಜರ್‌ ಕಾರ್ಯಾಚರಣೆಗಿಳಿದ ಹಿಂದೂ ಕಾರ್ಯಕರ್ತರು’ ಎಂಬ ತಲೆಬರಹ ಬರೆದು ವೈರಲ್‌ ಆಗಿರುವುದು ಗೊಂದಲ ಸೃಷ್ಟಿಸಿದೆ. ಅಂಗಡಿ ಎದುರು ಜೆಸಿಬಿ ನಿಲ್ಲಿಸಿಕೊಂಡು ಕೆಲವರು ಅಂಗಡಿ ಮುಂಭಾಗದಲ್ಲಿರುವ ವಸ್ತುಗಳ ತೆರವಿಗೆ ಸೂಚನೆ ನೀಡುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಬುಲ್ಡೋಜರ್‌ ಕಾರ್ಯಾಚರಣೆ ನಡೆಸಲು ಅಧಿಕಾರ ನೀಡಿದವರು ಯಾರು? ಎಂಬಿತ್ಯಾದಿಯಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರಸಭೆಯಿಂದ ಕಾರ್ಯಾಚರಣೆ

ಜಾಲತಾಣದಲ್ಲಿ ವಿಡಿಯೂ ವೈರಲ್‌ ಆಗುತ್ತಿದ್ದಂತೆ ಪರಿಶೀಲಿಸಿದಾಗ ಇದರ ಅಸಲಿಯತ್ತು ಬೆಳಕಿಗೆ ಬಂದಿದೆ. ಅಂಗಡಿ ಮುಂದೆ ಜೆಸಿಬಿ ನಿಲ್ಲಿಸಿಕೊಂಡು ಅಂಗಡಿ ಮುಂಭಾಗದ ಸಾಮಾನು ಸರಂಜಾಮುಗಳನ್ನು ತೆರವು ಮಾಡುವಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡುತ್ತಿರುವವರು ಯಾವುದೇ ಸಂಘಟನೆಗಳ ಕಾರ್ಯಕರ್ತರಲ್ಲ. ವಿಡಿಯೋದಲ್ಲಿರುವ ವ್ಯಕ್ತಿಗಳು ನಗರಸಭೆ ಅಧ್ಯಕ್ಷ, ಪೌರಾಯುಕ್ತ ಹಾಗೂ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಎಂಬುದು ತಿಳಿದು ಬಂದಿದೆ.

Advertisement

ಮಂಗಳವಾರ ನಗರಸಭೆ 32ನೇ ವಾರ್ಡ್‌ ನಲ್ಲಿ ಸ್ವಚ್ಛತಾ ಕಾರ್ಯ ನಡೆಸುವ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರು ಮತ್ತು ಸಿಬ್ಬಂದಿ ಅಂಗಡಿ ಮುಂಭಾಗದ ಫುಟ್‌ಪಾತ್‌ ಮೇಲೆ ಸರಕುಗಳನ್ನು ಇಟ್ಟು ಮಾರಾಟ ಮಾಡದಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಅದೇ ವಾರ್ಡ್‌ನ ಚರಂಡಿ ಸ್ವಚ್ಛಗೊಳಿಸಲು ಜೆಸಿಬಿ ಯಂತ್ರ ತೆಗೆದುಕೊಂಡು ಹೋಗಿದ್ದು, ಅಂಗಡಿ ಮುಂಭಾಗದಲ್ಲಿ ನಿಲ್ಲಿಸಿದ್ದು, ಇಷ್ಟೆಲ್ಲ ಗೊಂದಲಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಲ್ಲದೇ ಅದಕ್ಕೆ ಚಿಕ್ಕಮಗಳೂರಿನಲ್ಲಿ ಬುಲ್ಡೋಜರ್‌ ಕಾರ್ಯಾಚರಣೆಗಿಳಿದ ಹಿಂದೂ ಕಾರ್ಯಕರ್ತರು ತಲೆಬರಹ ನೀಡಿದ್ದು ನಗರಸಭೆ ಸಿಬ್ಬಂದಿ ಯನ್ನೇ ತಪ್ಪಾಗಿ ಅರ್ಥೈಸಿಕೊಂಡಿರುವುದು ಗೊಂದಲವನ್ನು ಹೆಚ್ಚಿಸಿದೆ.

ನಗರಸಭೆ ಅಧ್ಯಕ್ಷ-ಪೌರಾಯುಕ್ತರ ವಿರುದ್ಧವೂ ಆಕ್ರೋಶ

ನಗರಸಭೆ ಜಾಗ ಒತ್ತುವರಿ ತೆರವಿಗೆ ಅಧಿಕಾರಿಗಳು ಮಾಲೀಕರಿಗೆ ನೋಟಿಸ್‌ ನೀಡಬೇಕು ಆ ಬಳಿಕ ತೆರವುಗೊಳಿಸಬೇಕೆಂಬ ಕಾನೂನು ಇದೆ. ಆದರೆ ನಗರಸಭೆ ಸಿಬ್ಬಂದಿ ಕಾನೂನು ಗಾಳಿಗೆ ತೂರಿದ್ದಾರೆ. ಅಂಗಡಿ ಮುಂದೇ ಜೆಸಿಬಿ ನಿಲ್ಲಿಸಿಕೊಂಡು ಜಾಗ ತೆರವು ಮಾಡಿದ ರೀತಿ ಸರಿಯಿಲ್ಲ. ಜೆಸಿಬಿ ಯಂತ್ರ ತೋರಿಸಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿ ಸಲಾಗುತ್ತಿದೆ ಎಂದು ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಗೌರಿ ಕಾಲುವೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ್ದೇವೆ. ವಿಡಿಯೋದಲ್ಲಿರುವವರು ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ. ಅಂಗಡಿಯೊಂದರ ಮುಂದೆ ರಸ್ತೆ ಪಕ್ಕದ ಜಾಗದಲ್ಲಿ ಅಂಗಡಿ ವಸ್ತುಗಳನ್ನು ಜೋಡಿಸಿಟ್ಟಿದ್ದರು. ಅದನ್ನು ತೆರವು ಮಾಡಲು ಸೂಚನೆ ನೀಡಿದ್ಧೇವೆ. ಚರಂಡಿ ತ್ಯಾಜ್ಯ ತೆಗೆಯಲು ಜೆಸಿಬಿ ಕೊಂಡೊಯ್ದಿದ್ದು ನಗರಸಭೆಯಿಂದ ಬುಲ್ಡೋಜರ್‌ ಕಾರ್ಯಾಚರಣೆ ನಡೆಸಿಲ್ಲ. ಸರ್ಕಾರಿ ಜಾಗ ಒತ್ತುವರಿ ಮಾಡಿದವರಿಗೆ ನೋಟಿಸ್‌ ನೀಡಿ ತೆರವು ಮಾಡಲಾಗುತ್ತಿದೆ. ಯಾರೋ ಕಿಡಿಗೇಡಿಗಳು ತಿರುಚಿ ಹಾಕಿರುವ ವಿಡಿಯೋ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರಿಂದ ಈ ಗೊಂದಲ ಸೃಷ್ಟಿಯಾಗಿದೆ.  -ವರಸಿದ್ಧಿ ವೇಣುಗೋಪಾಲ್‌, ನಗರಸಭೆ ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next