ಲಕ್ನೋ: ಪ್ರವಾದಿ ಮೊಹಮ್ಮದ್ ಕುರಿತ ನೂಪುರ್ ಹೇಳಿಕೆ ವಿವಾದಕ್ಕೀಡಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರತಿಭಟನೆ, ಹಿಂಸಾಚಾರ ನಡೆದಿದೆ.
ಕೆಲವು ದುಷ್ಕರ್ಮಿಗಳು ಇದನ್ನೇ ಲಾಭವಾಗಿ ಬಳಸಿಕೊಂಡು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ. ಇಂಥವರನ್ನು ಪತ್ತೆ ಹಚ್ಚಿರುವ ಉತ್ತರ ಪ್ರದೇಶ ಸರಕಾರ, ಇವರ ಮನೆಗಳ ಮೇಲೆ ಬುಲ್ಡೋಜಾರ್ ಅಸ್ತ್ರ ಪ್ರಯೋಗಿಸಿದೆ.
ದೇಶಾದ್ಯಂತ ಶಾಂತಿಯುತ ಪ್ರತಿಭಟನೆ ನಡೆ ಯುತ್ತಿದ್ದರೂ ಉತ್ತರ ಪ್ರದೇಶ, ಝಾರ್ಖಂಡ್ ಮತ್ತು ಪಶ್ಚಿಮ ಬಂಗಾಲದಲ್ಲಿ ಹೆಚ್ಚು ಹಿಂಸಾಚಾರ ನಡೆದಿದೆ. ಅದರಲ್ಲೂ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಮತ್ತು ಸಹರಾನ್ಪುರದಲ್ಲಿ ಹೆಚ್ಚು ಗಲಾಟೆಗಳಾಗಿವೆ. ಇಲ್ಲಿ ಗಲಾಟೆಗೆ ಕಾರಣರಾದವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, 200ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.
ಕಳೆದ ವಾರವಷ್ಟೇ ಇದೇ ವಿಷಯ ಸಂಬಂಧ ಗಲಾಟೆಗೆ ಕಾರಣವಾಗಿದ್ದ ಪ್ರಮುಖ ಆರೋಪಿಯ ಸಹವರ್ತಿಯ ಮನೆ ಮೇಲೆ ಬುಲ್ಡೋಜರ್‌ಗಳು ಅಬ್ಬರಿಸಿವೆ. ಜಾಫರ್ ಹಯಾತ್ ಹಾಶ್ಮಿ ಎಂಬಾ ಪ್ರಮುಖ ಆರೋಪಿಯಾಗಿದ್ದು, ಈತನ ಸಹಚರ ಮೊಹಮ್ಮದ್ ಇಶಿಯಾಕ್‌ನ ಬಹು ಅಂತಸ್ತಿನ ಕಟ್ಟಡ ವನ್ನು ಹೊಡೆದುರುಳಿಸಲಾಗಿದೆ. ಈ ಕಟ್ಟಡವನ್ನು ಮೂರು ವರ್ಷದ ಹಿಂದೆ ನಿರ್ಮಿಸಲಾಗಿದ್ದು, ಪೊಲೀಸರ ಬಂದೋಬಸ್ತ್ ನಲ್ಲಿ ಒಡೆಯಲಾಗಿದೆ.
ಪೊಲೀಸರಿಗೆ ಅಲರ್ಟ್: ಪೊಲೀಸರೇ ಪ್ರತಿಭಟನಕಾರರ ಟಾರ್ಗೆಟ್ ಆಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದಿರುವಂತೆ ಎಲ್ಲ ರಾಜ್ಯಗಳ ಪೊಲೀಸ್ ಇಲಾಖೆಗಳಿಗೆ ಕೇಂದ್ರ ಗೃಹ ಇಲಾಖೆ ಶುಕ್ರವಾರವೇ ಸುತ್ತೋಲೆ ರವಾನಿಸಿದೆ.
ದಿಲ್ಲಿ ತೊರೆದ ಜಿಂದಾಲ್ ಕುಟುಂಬ: ಆಕ್ಷೇ ಪಾರ್ಹ ಹೇಳಿಕೆ ನೀಡಿ ವಜಾಗೊಂಡಿರುವ ಬಿಜೆಪಿ ನಾಯಕ ನವೀನ್ ಕುಮಾರ್ ಜಿಂದಾಲ್ ಅವರ ಕುಟುಂಬ ಈಗ ದಿಲ್ಲಿಯನ್ನೇ ತೊರೆದಿದೆ. ನಿರಂತರ ಬೆದರಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ನನ್ನ ಕುಟುಂಬ ದಿಲ್ಲಿಯನ್ನು ತೊರೆಯುತ್ತಿದೆ. ಪೊಲೀಸರಿಗೂ ಈ ಕುರಿತು ದೂರು ನೀಡಿದ್ದೇನೆ ಎಂದು ಜಿಂದಾಲ್ ಹೇಳಿದ್ದಾರೆ.