ಲಕ್ನೋ : ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಅಕ್ರಮ ಕಸಾಯಿಖಾನೆಯೊಂದರಲ್ಲಿ ಕದ್ದ ದನಗಳನ್ನು ಹತ್ಯೆ ಮಾಡಲಾಗುತ್ತಿದೆ ಎಂಬ ಕಾರಣಕ್ಕೆ ಸ್ಥಳೀಯರಿಂದ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಮತ್ತು 20ರ ಹರೆಯದ ಸುಮಿತ್ ಎಂಬ ಯುವಕನ ಹತ್ಯೆ ನಡೆದುದನ್ನು ಅನುಸರಿಸಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಇವತ್ತು ಪೊಲೀಸರು ಎರಡು ಎಫ್ಐಆರ್ ದಾಖಲಿಸಿದರು. ಮೊದಲನೇಯದ್ದು ಗೋಹತ್ಯೆ ವಿರುದ್ಧ; ಎರಡನೆಯದ್ದು ಹಿಂಸಾತ್ಮಕ ಪ್ರತಿಭಟನೆ ನಡೆಸಿದವರ ವಿರುದ್ಧ.
ಪೊಲೀಸರ ಎಫ್ಐಆರ್ ನಲ್ಲಿ 27 ಮಂದಿಯನ್ನು ಹಿಂಸಾಕೃತ್ಯಗಳ ಆರೋಪಿಗಳೆಂದು ಹೆಸರಿಸಲಾಗಿದೆ. ಅಲ್ಲದೆ ಇನ್ನೂ ಸುಮಾರು 60 ಮಂದಿ ಅನಾಮಿಕರನ್ನು ಕೂಡ ಎಫ್ಐಆರ್ ನಲ್ಲಿ ನಮೂದಿಸಲಾಗಿದೆ.
ಬುಲಂದ್‌ಶಹರ್ ಪರಿಸ್ಥಿತಿ ಇಂದು ಉದ್ರಿಕ್ತವಾಗಿಯೇ ಇದೆ. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ; ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ದೊಂಬಿ ನಿಗ್ರಹ ದಳದ ಸುಮಾರು 1,000 ಸಿಬಂದಿಗಳನ್ನು ಕೂಡ ನಿಯೋಜಿಸಲಾಗಿದೆ.
ಎಸ್‌ಐಟಿ, ಎಡಿಜಿ-ಗುಪ್ತಚರ ಮತ್ತು ಮ್ಯಾಜಿಸ್ಟ್ರೇಟರ ತನಿಖೆ ಸೇರಿದಂತೆ ಬಹುಸ್ತರಗಳ ತನಿಖೆಯನ್ನು ಆದೇಶಿಸಲಾಗಿದೆ.