Advertisement

ಬಾಯತ್ತಾರು: ಗ್ರಾಮಸ್ಥರಿಂದಲೇ ಕಾಲುಸಂಕ ನಿರ್ಮಾಣ

01:09 AM Jul 22, 2019 | sudhir |

ಉಪ್ಪಿನಂಗಡಿ: ಸರಕಾರಿ ಸವಲತ್ತಿಗಾಗಿ ಕಾದು ಸುಸ್ತಾಗಿ ಗ್ರಾಮಸ್ಥರೇ ಹಣ ಒಟ್ಟುಗೂಡಿಸಿ ಕಾಲುಸಂಕ ನಿರ್ಮಿಸಿದ ಘಟನೆ ಕುಪ್ಪೆಟ್ಟಿಯಲ್ಲಿ ನಡೆದಿದೆ.

Advertisement

ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಕುಪ್ಪೆಟ್ಟಿ ಸಮೀಪ ರಾಜ್ಯ ಹೆದ್ದಾರಿಯ ಸನಿಹದಲ್ಲೇ ಬಾಯಿತ್ತಾರು ಎಂಬಲ್ಲಿ ತೋಡು ದಾಟಲು ಕಾಲುಸಂಕ ನಿರ್ಮಾಣ ಮಾಡುವಂತೆ ಸ್ಥಳೀಯರು ಸಾಕಷ್ಟು ಮನವಿ ಮಾಡಿದ್ದರೂ ಸ್ಪಂದನೆ ಸಿಕ್ಕಿರಲಿಲ್ಲ. ಮಳೆಗಾಲದಲ್ಲಿ ಈ ತೋಡು ದಾಟುವುದೇ ದೊಡ್ಡ ಸಾಹಸದ ಕೆಲಸ.

ದೇವರೇ ಗತಿ!

ಸುಮಾರು 50ಕ್ಕೂ ಮಿಕ್ಕ ಕುಟುಂಬಗಳು ವಾಸವಾಗಿದ್ದು, ಶಾಲೆಗೆ ಹೋಗುವ ಮಕ್ಕಳೂ ಇಲ್ಲಿದ್ದಾರೆ. ರಾತ್ರಿ ವೇಳೆ ದಿಢೀರ್‌ ಅನಾರೋಗ್ಯ ಉಂಟಾದರೆ ದೇವರೇ ಗತಿ ಎನ್ನುವ ಸ್ಥಿತಿ ಇತ್ತು. ಪ್ರತಿ ವರ್ಷವೂ ಸ್ಥಳೀಯರು ತಮ್ಮ ತೋಟಗಳಲ್ಲಿ ಸಿಗುವ ಅಡಿಕೆ ದಬ್ಬೆ ಇತ್ಯಾದಿಗಳನ್ನು ಬಳಸಿಕೊಂಡು ಕಾಲುಸಂಕ ನಿರ್ಮಿಸುತ್ತಿದ್ದರು. ಜೋರು ಮಳೆಯಾದರೆ ಅದು ಕೊಚ್ಚಿಕೊಂಡು ಹೋಗುತ್ತಿತ್ತು. ಹೀಗಾಗಿ, ಇಲ್ಲೊಂದು ಕಾಲುಸಂಕ ನಿರ್ಮಿಸುವಂತೆ ಕ್ಷೇತ್ರದ ಶಾಸಕರು ಹಾಗೂ ಜನಪ್ರತಿನಿಧಿಗಳಿಗೆ ಸ್ಥಳೀಯರು ಮನವಿ ಮಾಡಿದ್ದರು. ಮತ ಯಾಚನೆಗೆ ಬಂದಾಗಲೂ ಬೇಡಿಕೆ ಸಲ್ಲಿಸಿದ್ದರು. ಆದರೆ, ಅವರು ನೀಡಿರುವ ಭರವಸೆ ಈಡೇರಿಲ್ಲ.

ಹಲವು ಅವಘಡಗಳು

Advertisement

ಈ ಬಾರಿಯ ಮಳೆಗಾಲದಲ್ಲಿ ಶಾಲೆಯಿಂದ ಮನೆಗೆ ಮರಳುತ್ತಿದ್ದ ಪುಟ್ಟ ಮಗುವೊಂದು ತೋಡಿನ ನೀರಿನಲ್ಲಿ ಮೃತಪಟ್ಟಿದೆ. ಮಹಿಳೆಯೊಬ್ಬರು ತೋಡು ದಾಟುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಅಪಾಯದಲ್ಲಿದ್ದರು. ದಾರಿಹೋಕರ ಸಮಯಪ್ರಜ್ಞೆಯಿಂದ ಅವರು ಬಚಾವಾದರು. ಇಂತಹ ಹಲವು ಘಟನೆಗಳು ನಡೆದಿವೆ. ಹತ್ತು ವರ್ಷಗಳ ಹಿಂದೆ ಆಗಿನ ಶಾಸಕ ವಸಂತ ಬಂಗೇರ ಅವರು ಈ ಕಾಲು ಸಂಕಕ್ಕೆ 4 ಲಕ್ಷ ರೂ. ಮಂಜೂರು ಮಾಡಿದ್ದರು. ಆದರೆ, ಕೆಲವರು ಶಾಸಕರ ಮೇಲೆ ಒತ್ತಡ ಹೇರಿ, ಇಲ್ಲಿಂದ ಸುಮಾರು 100 ಮೀ. ದೂರದಲ್ಲಿರುವ ಕಾಲು ಸಂಕದ ವಿಸ್ತರಣೆಗೆ ಈ ಅನುದಾನವನ್ನು ಬಳಸಿಕೊಂಡರು. ಇದರಿಂದ ಆಗುವ ಸಮಸ್ಯೆಗಳನ್ನೂ ಅವರಿಂದ ಮರೆ ಮಾಚಿದರು ಎಂಬ ಆರೋಪವಿದೆ.

ಬಾಯತ್ತಾರು ಪರಿಸರದಲ್ಲಿ ಬಹು ತೇಕರು ಕೃಷಿಕರಾಗಿದ್ದು, ಚುನಾವಣೆ ಬಹಿಷ್ಕರಿಸಲು ಮುಂದಾಗಿದ್ದರೂ ಕೊನೆ ಗಳಿಗೆಯಲ್ಲಿ ಅವರ ಮನವೊಲಿಸಲಾಗಿತ್ತು.

ಆತಂಕದ ಛಾಯೆ

ಗತಕಾಲದಿಂದಲೂ ಕಾಲು ಸಂಕಕ್ಕೆ ಮನವಿ ನೀಡುತ್ತಲೇ ಇದ್ದೇವೆ. ಮಳೆಗಾಲ ಬಂತೆಂದರೆ ಸಾಕು, ಆತಂಕದ ಛಾಯೆ ಮೂಡುತ್ತದೆ. ಶಾಲಾ ಕಾಲೇಜಿಗೆ ತೆರಳುವ ಮಕ್ಕಳು ಮನೆ ಸೇರುವ ತನಕ ಹೆತ್ತಮ್ಮ ಕಾಯುವುದೇ ಕಾಯಕ. ಈ ತೋಡು ನೇತ್ರಾವತಿ ನದಿಯನ್ನು ಸೇರುತ್ತದೆ. ಪ್ರತಿ ಬಾರಿ ಅವಘಡಗಳು ಸಂಭವಿಸಿದಾಗ ಜನಪ್ರತಿನಿಧಿಗಳ ಭರವಸೆ ಮೇಲೆದ್ದು ಬರುತ್ತದೆ. ಮತ್ತೆ ನನೆಗುದಿಗೆ ಬೀಳುತ್ತದೆ.
– ಅಬ್ಟಾಸ್‌ ಬಾಯತ್ತಾರು, ಗ್ರಾಮಸ್ಥ

ಅನುದಾನ ಬರಲಿಲ್ಲ

ಗ್ರಾ.ಪಂ. ವ್ಯಾಪ್ತಿಯ ಕುಪ್ಪೆಟ್ಟಿ ಬಾಯತ್ತಾರು ನಿವಾಸಿಗಳ ಬಹುದಿನಗಳ ಬೇಡಿಕೆ ಕುರಿತು ಮನವರಿಕೆಯಾಗಿದೆ. ಇಲ್ಲಿ ಕಾಲು ಸಂಕ ರಚಿಸಲು ಗ್ರಾ.ಪಂ. ಅನುದಾನ ಕೊರತೆ ಇದೆ. ಪ್ರತಿ ವರ್ಷವೂ ಗ್ರಾ.ಪಂ.ನಿಂದ 5,000 ರೂ. ನೀಡುತ್ತಿದ್ದು, ಉಳಿದ ಹಣವನ್ನು ಸ್ಥಳೀಯರೇ ಒಟ್ಟುಗೂಡಿಸಿ ಕಾಲುಸಂಕ ಮಾಡಿಕೊಳ್ಳುತ್ತಿದ್ದಾರೆ. ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸುವುದಾಗಿ ಹೇಳಿದ್ದಾರೆ. ಈ ಬಾರಿ ಕಾಲುಸಂಕ ರಚನೆಗೆ ಅನುದಾನ ಬಾರದ ಕಾರಣ, ಅದಕ್ಕೆ ಅಳವಡಿಸುವ ರೋಪ್‌ ಪಂಚಾಯತ್‌ನಲ್ಲೇ ಉಳಿದುಕೊಂಡಿದೆ.
– ಜಯವಿಕ್ರಮ ಕಲ್ಲಾಪು, ಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷರು

– ಎಂ.ಎಸ್‌. ಭಟ್

Advertisement

Udayavani is now on Telegram. Click here to join our channel and stay updated with the latest news.

Next