Advertisement

ಕಟ್ಟಡಗಳ ಅವಶೇಷ ವಿಲೇವಾರಿ ನಿಗೂಢ : ಟನ್‌ಗಟ್ಟಲೆ ಅವಶೇಷ ನಿರ್ಜನ ಪ್ರದೇಶದಲ್ಲಿ ಡಂಪ್‌

11:40 AM Jan 24, 2021 | Team Udayavani |

ಬೆಂಗಳೂರು: ನಗರದಲ್ಲಿ ಸ್ಮಾರ್ಟ್‌ ಸಿಟಿ ಹಾಗೂ ಮೆಟ್ರೋ ಸಂಸ್ಥೆ ಕೈಗೆತ್ತಿಕೊಂಡಿರುವ ಕಾಮಗಾರಿ ಸೇರಿದಂತೆ ವಿವಿಧ ಕಟ್ಟಡ ನಿರ್ಮಾಣದ ವೇಳೆ ಉತ್ಪತ್ತಿಯಾಗುವ ತ್ಯಾಜ್ಯ (ಮಣ್ಣು)ಹಾಗೂ ಕಟ್ಟಡ ಅವಶೇಷಗಳ ವಿಲೇವಾರಿ ಎಲ್ಲಿ ಆಗುತ್ತಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

Advertisement

ಏಕೆಂದರೆ, ನಗರದಲ್ಲಿ ಮೆಟ್ರೋ ಹಾಗೂ ಸ್ಮಾರ್ಟ್‌ ಸಿಟಿ ಕಾಮಗಾರಿಗಳು ಹಾಗೂ ಖಾಸಗಿ ವಲಯದ ಕಾಮಗಾರಿಗಳಿಂದ ನಿತ್ಯ ಎರಡೂವರೆ ಸಾವಿರದಿಂದ ಮೂರು ಸಾವಿರ ಮೆಟ್ರಿಕ್‌ ಟನ್‌ ಕಟ್ಟಡ ಅವಶೇಷಗಳು ಸಂಗ್ರಹವಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ ಸುಮಾರು ಎರಡು ಸಾವಿರ ಮೆಟ್ರಿಕ್‌ ಟನ್‌ ವಿಲೇವಾರಿ ಸಾಮರ್ಥ್ಯದ ಘಟಕ ಇದೆ. ಆದರೆ, ಅಲ್ಲಿಗೆ ಬರುತ್ತಿರುವುದು ನಿತ್ಯ ಕೇವಲ 100 ಮೆಟ್ರಿಕ್‌ ಟನ್‌ ಮಾತ್ರ. ಉಳಿದ ಕಟ್ಟಡ ಅವಶೇಷ ತಾಜ್ಯ ಎಲ್ಲಿ ವಿಲೇವಾರಿ ಆಗುತ್ತಿದೆ ಎಂಬುದೇ ನಿಗೂಢವಾಗಿದೆ.

ಕೆರೆ, ನಿರ್ಜನ ಪ್ರದೇಶಕ್ಕೆ ಡಂಪ್‌: ನಗರದಲ್ಲಿ ಎಲ್ಲೆಂದರಲ್ಲಿ ಕಟ್ಟಡ ನಿರ್ಮಾಣ, ಕಟ್ಟಡ ಕೆಡವುವುದು ಹಾಗೂ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಉತ್ಪತ್ತಿಯಾಗುವ ಮಣ್ಣು, ಕಬ್ಬಿಣ, ಜೆಲ್ಲಿ ಹಾಗೂ ಸಿಮೆಂಟ್‌ ತ್ಯಾಜ್ಯಎಲ್ಲೆಂದರಲ್ಲಿ ಸುರಿಯುವುದು ತಪ್ಪಿಸುವ ಉದ್ದೇಶದಿಂದ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಚಿಕ್ಕಜಾಲ ಹಾಗೂ ಕಣ್ಣೂರಿನಲ್ಲಿ ಕಾಮಗಾರಿ ಹಾಗೂ ಕಟ್ಟಡ ನಿರ್ಮಾಣ ತ್ಯಾಜ್ಯ ಸಂಸ್ಕರಣಾ (ಸಿ ಮತ್ತು ಡಿ)ಘಟಕಗಳನ್ನು ನಿರ್ಮಿಸಲಾಗಿದೆಯಾದರೂ, ಈ ಘಟಕದ ಸಾಮರ್ಥ್ಯದ ಶೇ. 5 ತ್ಯಾಜ್ಯ ಬರುತ್ತಿಲ್ಲ.

ಹೀಗಾಗಿ, ನಗರದಲ್ಲಿನ ಕೆರೆಗಳು, ರಾಜಕಾಲುವೆ ಭಾಗ, ನಿರ್ಜನ ಪ್ರದೇಶ ಹಾಗೂ ಖಾಲಿ ನಿವೇಶನಗಳಲ್ಲಿ ಡಂಪ್‌ ಆಗುತ್ತಿದೆಯೇ ಎಂಬ ಅನುಮಾನ ಶುರುವಾಗಿದೆ.

ಇದನ್ನೂ ಓದಿ:ಡಿಕೆಶಿಗೆ ಧಮ್‌ ಇದ್ರೆ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಲಿ: ಈಶ್ವರಪ್ಪ

Advertisement

ಪ್ರತಿ ನಿತ್ಯ ಚಿಕ್ಕಜಾಲದಲ್ಲಿ ಒಂದು ಸಾವಿರ ಮೆಟ್ರಿಕ್ಟನ್‌ ಸಾಮರ್ಥ್ಯ ಹಾಗೂ ಕಣ್ಣೂರು 750 ಮೆಟ್ರಿಕ್‌ ಟನ್‌ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣೆ ಹಾಗೂ ಮರುಬಳಕೆ ಮಾಡಬಹುದಾದ ಸಂಸ್ಕರಣಾ ಘಟಕಗಳು ಇವೆ. ಕಟ್ಟಡ ನಿರ್ಮಾಣ, ಮರು ನಿರ್ಮಾಣ ಹಾಗೂ ನಗರದ ವಿವಿಧ ಇಲಾಖೆಗಳಿಂದ ಉತ್ಪತ್ತಿಯಾಗುತ್ತಿರುವ ಮಣ್ಣು ಹಾಗೂ ಕಟ್ಟಡ ಅವಶೇಷಗಳನ್ನು ಸಂಸ್ಕರಣೆ ಮಾಡುವ ಉದ್ದೇಶದಿಂದ ಬಿಬಿಎಂಪಿ ಚಿಕ್ಕಜಾಲ ಹಾಗೂ ಕಣ್ಣೂರಿನಲ್ಲಿ ಎರಡು ಸಂಸ್ಕರಣಾ ಘಟಕಗಳನ್ನು ನಿರ್ಮಾಣ ಮಾಡಿದೆ.

ಮೆಟ್ರೋ ಹಾಗೂ ಸ್ಮಾರ್ಟ್‌ ಸಿಟಿ ಯೋಜನೆಗಳ ಮೇಲೆ ಅನುಮಾನ?: ಮೆಟ್ರೋ ಸಂಸ್ಥೆಯು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಾಜ್ಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಗಳ ನಿರ್ದೇಶನದ ಮೇಲೆ ಮೆಟ್ರೋದಿಂದ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳ ವೇಳೆ (ಬನ್ನೇರುಘಟ್ಟದಿಂದ ನಾಗವಾರದ ವರೆಗೆ ಮೆಟ್ರೋ ನಿರ್ಮಾಣ ಹಾಗೂ ಜಯದೇವ ಮೇಲ್ಸೇತುವೆ ಕೆಡವಿದ ಸಂದರ್ಭ)ದಲ್ಲಿ ಇದರಿಂದ ಅಂದಾಜು 98,940 ಮೆಟ್ರಿಕ್‌ ಟನ್‌ ನ ತ್ಯಾಜ್ಯ ಉತ್ಪತ್ತಿಯಾಗುವ ಸಾಧ್ಯತೆ ಇದ್ದು, ಇದನ್ನು ಸಂಸ್ಕರಣಾ ಘಟಕಗಳಿಗೆ ರವಾನಿಸಲಾಗುವುದು ಎಂದು ಹೇಳಿತ್ತು.

ಆದರೆ, ಇದರಲ್ಲಿ ಕೇವಲ ಐದು ಸಾವಿರ ಮೆಟ್ರಿಕ್‌ಟನ್‌ ನಿರ್ಮಾಣ ಹಂತದ ತ್ಯಾಜ್ಯ ಮಾತ್ರ ಸಂಸ್ಕರಣಾ ಘಟಕಕ್ಕೆ ಬಂದಿದೆ. ಅದೂ ಒಂದು ನಿರ್ದಿಷ್ಟ ಕಾಮಗಾರಿಯಲ್ಲಿ ಉಳಿದ ಯೋಜನೆಗಳ ಪ್ರಗತಿ ವೇಳೆ ನಿರ್ಮಾಣವಾಗುವ ತ್ಯಾಜ್ಯದ ಬಗ್ಗೆ ಪ್ರಸ್ತಾವನೆಯನ್ನೂ ಸಲ್ಲಿಸಿಲ್ಲ. ಇನ್ನು ಸ್ಮಾರ್ಟ್‌ ಸಿಟಿ ವತಿಯಿಂದ ಒಂದೇ ಒಂದು ಮೆಟ್ರಿಕ್‌ ಟನ್‌ ತ್ಯಾಜ್ಯವೂ ಸಂಸ್ಕರಣಾ ಘಟಕಗಳಿಗೆ ಬಂದಿಲ್ಲ
ಎಂದು ಸಂಸ್ಕರಣಾ ಘಟಕದ ಅಧಿಕಾರಿಗಳು ಆರೋಪಿಸಿದ್ದಾರೆ.

ಸೂಚನೆ: ಪಾಲಿಕೆಯಿಂದ ಮೆಟ್ರೋ, ಜಲಮಂಡಳಿ ಹಾಗೂ ಸ್ಮಾರ್ಟ್‌ ಸಿಟಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಾಜ್ಯ ಘನತ್ಯಾಜ್ಯ ನಿರ್ವಹಣೆ ಉಸ್ತುವಾರಿ ಸಮಿತಿ ಅಧ್ಯಕ್ಷ ಸುಭಾಷ್‌ ಬಿ.ಅಡಿ ತಿಳಿಸಿದರು.

ಈ ಸಂಬಂಧ ಉದಯವಾಣಿಯೊಂದಿಗೆ ಮಾತನಾಡಿದ ಅವರು, ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯವರೇ ಆಗಿರಲಿ. ಕಟ್ಟಡ
ನಿರ್ಮಾಣ, ಕಟ್ಟಡ ಕೆಡವಿದ ಮೇಲೆ ಅಥವಾ ಕಾಮಗಾರಿಗೆ ಪರವಾನಗಿ ನೀಡುವ ಸಂದರ್ಭದಲ್ಲೇ ಸಿ ಮತ್ತು ಡಿ ಶುಲ್ಕವನ್ನೂ ಪಾವತಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಮತ್ತೂಂದು ಸುತ್ತಿನ ಸಭೆಯನ್ನೂ ಕರೆಯಲಾಗುವುದು ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next