Advertisement

Mangaluru: ಬಂದರು ಇಲಾಖೆ ಅಧೀನದ ಕಟ್ಟಡ; ಬಳಕೆ ಮಾಡದೆ ವ್ಯರ್ಥ

04:58 PM Aug 19, 2024 | Team Udayavani |

ಮಹಾನಗರ: ದ.ಕ. ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲೇ ಇರುವ ಶತಮಾನದ ಹಿಂದಿನ ಆಂಗ್ಲರ ಆಳ್ವಿಕೆಯ ಕಾಲದ ಭವ್ಯ ಪಾರಂಪರಿಕ “ಮರೈನ್‌ ಬಂಗಲೆ’ ಮತ್ತೆ ಪಾಳುಬಿದ್ದಿದೆ.

Advertisement

ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾಗಿದ್ದ ವೇಳೆ ಎಸ್‌. ಅಂಗಾರ ಅವರು ಕಚೇರಿಗಾಗಿ ಹುಡುಕಾಡುತ್ತಿದ್ದಾಗ ಸ್ಟೇಟ್‌ಬ್ಯಾಂಕ್‌- ರೊಸಾರಿಯೋ ಚರ್ಚ್‌ ರಸ್ತೆಯಯಲ್ಲಿ ಹ್ಯಾಮಿಲ್ಟನ್‌ ವೃತ್ತದ ಪಕ್ಕದಲ್ಲೇ ಬಲಭಾಗದಲ್ಲಿರುವ “ಮರೈನ್‌ ಬಂಗಲೆ’ಯ ಬಗ್ಗೆ ತಿಳಿದು ಬಂದಿದೆ. ಪಾಳು ಬಿದ್ದಿದ್ದ ಬಂಗಲೆಯನ್ನು ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಮಾಡಿಸಿ ತಮ್ಮ ಕಚೇರಿಯನ್ನಾಗಿ ಬಳಕೆ ಮಾಡಿದ್ದರು. ಜಿಲ್ಲಾಧಿಕಾರಿ ಕಚೇರಿಯ ಸಮೀಪದಲ್ಲೇ ಇರುವುದರಿಂದ ಸಾರ್ವಜನಿಕರಿಗೂ ಅನುಕೂಲವಾಗಿತ್ತು.

ಇದೀಗ ಸರಕಾರ ಬದಲಾಗಿದ್ದು, ಸಚಿವರೂ ಬದಲಾಗಿದ್ದಾರೆ. ಪರಿಣಾಮ ಕಟ್ಟಡ ಮತ್ತೆ ಪಾಳು ಬಿದ್ದಿದೆ. ನಿಷ್ಪ್ರಯೋಜಕವಾಗಿದ್ದ ಕಟ್ಟಡವನ್ನು ನವೀಕರಣ ಮಾಡಿದರೂ ಮತ್ತೆ ಉಪಯೋಗಕ್ಕೆ ಇಲ್ಲ ಎನ್ನುವಂತಾಗಿದೆ. ಕಟ್ಟಡದ ಆವರಣದಲ್ಲೆಲ್ಲ ಹುಲ್ಲು ಪೊದೆಗಳು ಬೆಳೆದಿದ್ದು, ಛಾವಣಿವರೆಗೂ ವ್ಯಾಪಿಸಿದೆ. ಇವುಗಳನ್ನೆಲ್ಲ ತೆರವುಗೊಳಿಸದೆ ಒಳಗೆ ಹೋಗಲು ಸಾಧ್ಯವಿಲ್ಲ ಎನ್ನುವಂತಾಗಿದೆ. ತೆಂಗಿನ ಮರದಿಂದ ಬಿದ್ದಿರುವ ಗರಿಗಳು ಕೂಡ ಅಲ್ಲಿಯೇ ಇದ್ದು, ಸಚಿವರು ನಿರ್ಗಮಿಸಿದ ಬಳಿಕ ಕಟ್ಟಡದೊಳಗೆ ಯಾರೂ ಹೋದಂತಿಲ್ಲ. ಹಾವು, ಚೇಳುಗಳು ಓಡಾಡುವುದು ಸಾಮಾನ್ಯವಾಗಿದ್ದು, ರಾತ್ರಿ ವೇಳೆ ಪರಿಸರ ಇನ್ನೂ ಅಪಾಯಕಾರಿಯಾಗಿದೆ. ಕಟ್ಟಡದ ಪಕ್ಕದಲ್ಲೇ ಬಂದರು ಇಲಾಖೆಯ ಗೆಸ್ಟ್‌ಹೌಸ್‌, ಅಧಿಕಾರಿ/ಸಿಬಂದಿಯವರ ಕ್ವಾಟ್ರರ್ಸ್‌ ಕೂಡ ಇದೆ. ಆವರಣಕ್ಕೆ ಹೊಸದಾಗಿ ಅಳವಡಿಸಲಾಗಿದ್ದ ದೀಪಗಳು ಹಾಳಾಗಿದ್ದು, ಉಪಯೋಗವಿಲ್ಲದೆ ಮಳೆ – ಬಿಸಿಲಿನ ಹೊಡೆತದಿಂದ ತುಕ್ಕು ಹಿಡಿದಿದೆ.

ಬಳಕೆ ಮಾಡದಿದ್ದರೆ ಕಟ್ಟಡವೂ ಹಾಳು

ಹೊರಭಾಗದಲ್ಲಿ ಪಾಳು ಬಿದ್ದ ಸ್ಥಿತಿಯಲ್ಲಿದ್ದರೂ ಇತ್ತೀಚೆಗೆ ನವೀಕರಣ ಮಾಡಿರುವುದರಿಂದ ಕಟ್ಟಡ ಸುಸ್ಥಿತಿಯಲ್ಲಿದೆ. ಮುಂಭಾಗದಲ್ಲಿ ಛಾವಣಿಗೆ ಹೊಸ ಹೆಂಚು ಕೂಡ ಆಳವಾಡಿಸಲಾಗಿದೆ. ಹಳೆಯ ಬ್ರಿಟಿಷರ ಕಾಲದ ಬಂಗಲೆಯಾಗಿರುವುದರಿಂದ ಅದೇ ವಿನ್ಯಾಸದಲ್ಲಿಯೂ ಇದೆ. ಕಟ್ಟಡವನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸದಿದ್ದರೆ ಒಂದೆರಡು ವರ್ಷದಲ್ಲಿ ಕಟ್ಟಡವೂ ಸಂಪೂರ್ಣವಾಗಿ ಹಾಳಾಗುವ ಸಾಧ್ಯತೆಯಿದೆ. ಆದ್ದರಿಂದ ಜಿಲ್ಲಾಡಳಿತ, ಸಂಬಂಧಪಟ್ಟ ಇಲಾಖೆಯ ಮುಖ್ಯಾಧಿಕಾರಿಗಳು ಈ ಬಗ್ಗೆ ಕ್ರಮ ವಹಿಸುವ ಅಗತ್ಯವಿದೆ.

Advertisement

ಕಟ್ಟಡದ ಕುರಿತು

ಬ್ರಿಟಿಷ್‌ ಆಡಳಿತ ಅವಧಿಯಲ್ಲಿ ನಗರದ ಹಳೆ ಬಂದರು ವಾಣಿಜ್ಯ ಚಟುವಟಿಕೆಯ ಪ್ರಮುಖ ಕೇಂದ್ರವಾಗಿತ್ತು. ಆದ್ದರಿಂದ 1918ರಿಂದ ಈ ಬಂಗಲೆ ಬಂದರು ಅಧಿಕಾರಿಗಳ ನಿವಾಸವಾಗಿತ್ತು. ಮರೈನ್‌ ಬಂಗಲೆ ಎಂದೇ ಗುರುತಿಸಲ್ಪಟ್ಟಿದ್ದ ಈ ಕಟ್ಟಡ ಸ್ವಾತಂತ್ರ್ಯದ ಬಳಿಕ ಬಂದರು ವಿಶ್ವಸ್ಥ ಮಂಡಳಿ (ಪೋರ್ಟ್‌ ಟ್ರಸ್ಟ್‌)ಗೆ ಒಳಪಟ್ಟಿತ್ತು. 1980 ರಲ್ಲಿ ಬಂದರು, ಒಳನಾಡು ಜಲಸಾರಿಗೆ ಇಲಾಖೆಯ ವ್ಯಾಪ್ತಿಗೆ ಸೇರಿದ ಮರೈನ್‌ ಬಂಗಲೆಯನ್ನು ಬಂದರು ಅಧಿಕಾರಿಗಳು ಬಳಸುತ್ತಿದ್ದರು.

ಕಟ್ಟಡ ಉಳಿಸಿಕೊಳ್ಳಲು ಕ್ರಮ

ಕಟ್ಟಡದ ಅವರಣವನ್ನು ಶೀಘ್ರ ಸ್ವತ್ಛಗೊಳಿಸಲಾಗುವುದು. ಆಂಗ್ಲರ ಕಾಲದ ಈ ಭವ್ಯ ಪಾರಂಪರಿಕ ಕಟ್ಟಡವನ್ನು ಹಾಗೇ ಉಳಿಸುವ ಉದ್ದೇಶ ಹೊಂದಲಾಗಿದೆ. ಕಟ್ಟಡವನ್ನು ಉಪಯೋಗಿಸಬೇಕು ಎನ್ನುವ ದೃಷ್ಟಿಯಿಂದ ಕರ್ನಾಟಕ ಮೆರಿಟೈಮ್‌ ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌ ಆರಂಭಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. -ಧರೇಂದ್ರ ಕುಮಾರ್‌,
ಆಡಳಿತ ಅಧಿಕಾರಿ, ಮಂಗಳೂರಿನ ಬಂದರು ಇಲಾಖೆ

– ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next