ಮುಳ್ಳೇರಿಯ: ಇಲ್ಲಿನ ನೂತನ ಅಂಗನವಾಡಿ ಕಟ್ಟಡ ನಿರ್ಮಾಣ ಪೂರ್ಣಗೊಂಡರೂ ಉದ್ಘಾಟನೆಗಾಗಿ ಕಾಯಲಾಗುತ್ತಿದೆ. ಕಟ್ಟಡ ನಿರ್ಮಾಣಕ್ಕಾಗಿ ಹಲವು ವರ್ಷಗಳ ಕಾಲದ ಕಾಯುವಿಕೆಯ ಅನಂತರ ಅನುದಾನ ಬಿಡುಗಡೆಯಾಯಿತು. ಆಮೇಲೆ ನಿರ್ಮಾಣ ಕಾಮಗಾರಿಗಾಗಿ ಎರಡು ವರ್ಷಗಳ ಕಾಲ ಕಾಯಬೇಕಾಯಿತು. ಈಗ ನೂತನ ಕಟ್ಟಡ ನಿರ್ಮಾಣವಾದರೂ ಉದ್ಘಾಟನೆಗಾಗಿ ಕಾಯಬೇಕಾದ ಸ್ಥಿತಿ ಎದುರಾಗಿದೆ. ಇದು ಮುಳ್ಳೇರಿಯ ಪೇಟೆಯಲ್ಲಿರುವ ನೂತನ ಅಂಗನವಾಡಿಯ ಸ್ಥಿತಿ.
ಜಿಲ್ಲಾ ಪಂಚಾಯತ್ 13 ಲಕ್ಷ ರೂ. ಗಳನ್ನು ಅಂಗನವಾಡಿ ನಿರ್ಮಾಣಕ್ಕಾಗಿ ಬಿಡುಗಡೆಗೊಳಿಸಿತು. ಆದರೆ ತಡವಾಗಿ 2017ರಲ್ಲಿ ನಿರ್ಮಾಣವನ್ನು ಆರಂಭಿಸಲಾಯಿತು. ಕಟ್ಟಡ ನಿರ್ಮಾಣ ಪೂರ್ಣಗೊಂಡು ಕೆಲವು ತಿಂಗಳುಗಳು ಕಳೆದಿವೆ. ಇನ್ನೂ ಸಹಾ ಕಟ್ಟಡವನ್ನು ಪಂಚಾಯತ್‌ಗೆ ಬಿಟ್ಟುಕೊಡದ ಕಾರಣ ಉದ್ಘಾಟನೆಗೆ ಮೀನಮೇಷ ಎಣಿಸುವಂತಾಗಿದೆ.
ಕರಾರುದಾರನಿಗೆ ಹಣ ಲಭಿಸದ ಕಾರಣ ಕಟ್ಟಡವನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಈ ಅಂಗನವಾಡಿಯಲ್ಲಿ 22 ಮಕ್ಕಳು ಕಲಿಯುತ್ತಿದ್ದಾರೆ. ಮುಳ್ಳೇರಿಯ ಪೇಟೆಯ ಅಂಗನವಾಡಿಗಾಗಿ ಇಲ್ಲಿನ ವ್ಯಾಪಾರಿಯಾಗಿದ್ದ ದಿ| ರತ್ನಾಕರ ರಾವ್ ಅವರ ಪತ್ನಿ ರಮಾ ಬಾಯಿಯವರು 10 ಸೆಂಟ್ಸ್ ಸ್ಥಳವನ್ನು ಉದಾರವಾಗಿ ನೀಡಿದ್ದರು. ಪೇಟೆಯ ಮಕ್ಕಳಿಗೆ ಸುಲಭವಾಗಿ ತಲಪಲು ಸೂಕ್ತವಾದ ಸ್ಥಳದಲ್ಲಿ ಈ ಕಟ್ಟಡ ನಿರ್ಮಾಣವೂ ನಡೆದಿದೆ.
ಪ್ರಸ್ತುತ ಮುಳ್ಳೇರಿಯದ ಕ್ಲಬ್ ಕಟ್ಟಡದಲ್ಲಿ ಅಂಗನವಾಡಿ ಕಾರ್ಯ ನಿರ್ವಹಿಸುತ್ತಿದೆ. ತಿಂಗಳುಗಳ ಹಿಂದೆಯೇ ಸುಸಜ್ಜಿತ ಕಟ್ಟಡ ನಿರ್ಮಾಣ ಪೂರ್ತಿಯಾದರೂ ಮಕ್ಕಳಿಗೆ ಅದರ ಪ್ರಯೋಜನ ಲಭಿಸಿಲ್ಲ. ಸೂಕ್ತ ಕಟ್ಟಡದಲ್ಲಿ ಅಂಗನವಾಡಿ ಕಾರ್ಯ ನಿರ್ವಹಿಸದ ಕಾರಣ ಕೆಲವು ಪೋಷಕರು ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಹಿಂಜರಿಯುತ್ತಿದ್ದಾರೆ. ಕಟ್ಟಡದ ಕೆಲಸ ಪೂರ್ತಿಯಾದರೂ ಇದು ಉದ್ಘಾಟನೆಗೊಳ್ಳದ ಬಗ್ಗೆ ಮುಳ್ಳೇರಿಯ ವ್ಯಾಪಾರಿ ಸಮಿತಿಯು ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ. ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯರೂ ಒತ್ತಾಯಿಸಿದ್ದಾರೆ.
ಜಿಲ್ಲಾ ಪಂಚಾಯತ್ 13ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಿದೆ. ಇದರ ವಿದ್ಯುತ್ ಸಂಪರ್ಕಕ್ಕಾಗಿ ವಯರಿಂಗ್ ಕೆಲಸಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದು ಪೂರ್ಣಗೊಂಡರೆ ಕೂಡಲೇ ಕಟ್ಟಡವನ್ನು ಬಿಟ್ಟು ಕೊಡಲಾಗುವುದು.
-ಎ.ಪಿ. ಉಷಾ, ನ್ಯಾಯವಾದಿ
ಜಿ.ಪಂ. ಕ್ಷೇಮಕಾರ್ಯ ಸ್ಥಾಯೀ ಸಮಿತಿಅಧ್ಯಕ್ಷೆ
ಪಂಚಾಯತ್ ಅಸಿಸ್ಟೆಂಟ್ ಎಂಜಿನಿಯರ್ ಪದೇ ಪದೆ ಬದಲಾಗುತ್ತಿರುವುದರಿಂದ ಕಟ್ಟಡ ನಿರ್ಮಾಣವನ್ನು ಪರಿಶೋಧಿಸಿ ವರದಿ ನೀಡಿಲ್ಲ. ಹೀಗಾಗಿ ಕರಾರುದಾರರಿಗೆ ಹಣವೂ ಲಭಿಸಿಲ್ಲ. ಎಇ ನೇಮಕಾತಿಯ ಬಗ್ಗೆ ಒತ್ತಾಯಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದು ಪಂಚಾಯತ್‌ನ ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ಅಡ್ಡಿಯಾಗಿದೆ. ಎಂಜಿನಿಯರ್ ಸೇವೆ ಲಭಿಸಿದ ಕೂಡಲೇ ಅಂಗನವಾಡಿ ತೆರೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಎಂ. ಜನನಿ
ಕಾರಡ್ಕ ಗ್ರಾ. ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ