ಗಜೇಂದ್ರಗಡ: ಸಮೀಪದ ಗೋಗೇರಿ ಗ್ರಾಪಂನಲ್ಲಿ ರಾಜೀವ ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡ ನಿರ್ಮಾಣವಾಗಿ ವರ್ಷ ಕಳೆದರೂ ಈವರೆಗೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಪರಿಣಾಮ ಕಟ್ಟಡದ ಬಾಗಿಲಿಗೆ ಗೆದ್ದಲು ಹತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
2016-17ನೇ ಸಾಲಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಗೋಗೇರಿ ಗ್ರಾಪಂನಲ್ಲಿ ನೂತನ ಕಟ್ಟಡದ ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನೆ ಮಾತ್ರ ಈವರೆಗೂ ಆಗಿಲ್ಲ. ಇದರಿಂದ ಗ್ರಾಪಂ ಹಳೆಯ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುವ ದುಸ್ಥಿತಿ ಬಂದೊದಗಿದೆ.
ಹಳೆಯ ಗ್ರಾಪಂ ಕಚೇರಿ ಪಕ್ಕದಲ್ಲೇ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡ ನಿರ್ಮಾಣ ಮಾಡಲಾಗಿದೆ. ಸರಕಾರಿ ಸೇವೆಗಳನ್ನು ಒಂದೇ ಸೂರಿನಡಿ ನೀಡುವ ಉದ್ದೇಶದಿಂದ ಈ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಕಾಮಗಾರಿ ಸಂಪೂರ್ಣವಾಗಿ ವರ್ಷ ಗತಿಸಿದರೂ ಈವರೆಗೂ ಜನ ಸೇವೆಗೆ ಅಣಿಯಾಗದಿರುವುದರಿಂದ ಸರಕಾರಿ ಸೇವೆಯಿಂದ ಜನರು ವಂಚಿತರಾಗಿತ್ತಿದ್ದಾರೆ. 2014ರಲ್ಲೇ ಆರಂಭವಾಗಿರುವ ಕಟ್ಟಡ ಕಾಮಗಾರಿಯು ಕುಂಟುತ್ತಾ ತೆವಳುತ್ತಾ ಸಾಗಿ ಮೂರು ವರ್ಷಗಳ ಬಳಿಕ ಪೂರ್ಣಗೊಂಡಿತು. ಇದೀಗ ಉದ್ಘಾಟನೆಗಾಗಿ ಕಳೆದ ವರ್ಷಗಳಿಂದ ಕಾದಿರುವ ಕಟ್ಟಡದ ಬಾಗಿಲಿಗೆ ಗೆದ್ದಲು ಹತ್ತುತ್ತಿದೆ. ಉದ್ಘಾಟನೆಗೂ ಮುನ್ನವೇ ದ್ವಾರ ಬಾಗಿಲು ದುರಸ್ತಿಗೊಳಪಟ್ಟಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಗ್ರಾಮೀಣ ಭಾಗದ ಜನತೆ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದರ ಜೊತೆಗೆ ಗ್ರಾಪಂ ಕಚೇರಿಗಳೂ ಆಧುನಿಕರಣಗೊಳ್ಳಬೇಕು ಎನ್ನುವ ಉದ್ದೇಶದಿಂದ ಸರಕಾರ ಲಕ್ಷಾಂತರ ಅನುದಾನ ವ್ಯಯಿಸಿ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳ ಇತ್ಛಶಕ್ತಿ ಕೊರತೆಯಿಂದಾಗಿ ಸರಕಾರದ ಕನಸು ಸಾಕಾರಗೊಳ್ಳುವಲ್ಲಿ ವಿಫಲತೆ ಕಾಣುತ್ತವೆ ಎನ್ನುವುದಕ್ಕೆ ಗೋಗೇರಿ ಗ್ರಾಪಂನ ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡ ಉದ್ಘಾಟನೆ ಆಗದಿರುವುದೇ ಸಾಕ್ಷಿಯಾಗಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಗಳನ್ನು ಪರಸ್ಪರ ಪರಿಚಯಿಸುವ ಮಾಹಿತಿ ಕೇಂದ್ರದಂತಿರುವ ರಾಜೀವ್ ಗಾಂಧಿ ಸೇವಾ ಕೇಂದ್ರ ಗ್ರಾಮೀಣ ಭಾಗದ ಜನತೆಗೆ ಸಂಜೀವಿನಿಯಿದ್ದಂತೆ. ಅಂತಹ ಕಟ್ಟಡ ಪೂರ್ಣಗೊಂಡು ಜನ ಸೇವೆಗೆ ಸಿದ್ಧಗೊಂಡರೂ ಉದ್ಘಾಟನೆಯಾಗಿಲ್ಲ. ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ. ಗ್ರಾಮೀಣ ಜನರ ಹಿತ ದೃಷ್ಟಿಯಿಂದ ನಿರ್ಮಾಣವಾಗಿರುವ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ ಕೂಡಲೇ ಉದ್ಘಾಟನೆ ಮಾಡುವ ಮೂಲಕ ಸಾರ್ವಜನಿಕರ ಸೇವೆಗೆ ಅಣಿಗೊಳಿಸಬೇಕು ಎನ್ನುವುದು ಜನಸಾಮಾನ್ಯರ ಆಗ್ರಹವಾಗಿದೆ.
ಗೋಗೇರಿ ಗ್ರಾಪಂನ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಉದ್ಘಾಟನೆಗೆ ಶಾಸಕರು ದಿನಾಂಕ ನಿಗದಿಕೊಳಿಸಿದ ತಕ್ಷಣವೇ ಜನ ಸೇವೆಗೆ ನೀಡಲಾಗುವುದು.
∙ಸಿ.ಎಂ. ಇಂಬ್ರಾಪುರ, ಪಿಡಿಒ
.ಡಿ.ಜಿ. ಮೋಮಿನ್