ಬೀದರ: ಸ್ವಚ್ಛತೆಯಿಂದ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ಕಾರ್ಯದರ್ಶಿ ಎಸ್.ಸಿ. ಮಹೇಶ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿ.ಪಂ, ಜಿಲ್ಲಾ ಕಸಾಪ ಹಾಗೂ ಸ್ವಚ್ಛ ಭಾರತ ಮಿಷನ್ ಸಹಯೋಗದಲ್ಲಿ ಸ್ವಚ್ಛತೆಯೇ ಸೇವೆ ಆಂದೋಲನದ ಪ್ರಯುಕ್ತ ನಗರದ ಶಹಾಪುರದ ಶಾಹೀನ್ ಪಿಯು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಚ್ಛತೆಯಿಂದಲೇ ಅನೇಕ ರೋಗಗಳು ದೂರವಾಗುತ್ತವೆ. ಕಾರಣ ಸಾರ್ವಜನಿಕರು ವೈಯಕ್ತಿಕ ಸ್ವತ್ಛತೆ ಕಾಪಾಡಬೇಕು. ಮನೆ, ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದರು.
ಸಾರ್ವಜನಿಕರಲ್ಲಿ ಸ್ವತ್ಛತೆ ಅರಿವು ಮೂಡಿಸಲು ಸೆ.15ರಿಂದ ಅ.2ರ ವರೆಗೆ ಸ್ವಚ್ಛತೆಯೇ ಸೇವೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸ್ವಚ್ಛತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಸೃಷ್ಟಿಸುವುದು ಆಂದೋಲನದ ಗುರಿಯಾಗಿದೆ. ಅಭಿಯಾನದಲ್ಲಿ ಸಾರ್ವಜನಿಕರಲ್ಲಿ ವಿವಿಧ ವಿಷಯಗಳ ಜಾಗೃತಿ ಮೂಡಿಸಲಾಗುತ್ತಿದೆ. ಸಂಘ-ಸಂಸ್ಥೆಗಳು, ಸಾರ್ವಜನಿಕರು ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಶಾಹೀನ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಸ್ವಚ್ಛತಾ ಅರಿವನ್ನೂ ಮೂಡಿಸುತ್ತಿರುವುದು ಶ್ಲಾಘನೀಯ. ಕಾಲೇಜು ವಿದ್ಯಾರ್ಥಿಗಳು ಸ್ವಂತ ಹಣದಲ್ಲಿ ಸ್ವತ್ಛತಾ ಕಿಟ್ ಖರೀದಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿರುವುದು ಮಾದರಿಯಾಗಿದೆ ಎಂದರು.
ಶಾಹೀನ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಸಾಮಾಜಿಕ ಹೊಣೆಗಾರಿಕೆ ಜ್ಞಾನವನ್ನೂ ಕೊಡಲಾಗುತ್ತಿದೆ. ಅದರ ಫಲವಾಗಿ ವಿದ್ಯಾರ್ಥಿಗಳು ಸ್ವಚ್ಛತೆ ಅಭಿಯಾನ, ಆರೋಗ್ಯ, ಪರಿಸರ, ಮಾದಕ ವಸ್ತುಗಳ ಪುಷ್ಪರಿಣಾಮ ಜಾಗೃತಿ ಮೊದಲಾದ ಚಟುವಟಿಕೆಗಳಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ| ಅಬ್ದುಲ್ ಖದೀರ್ ತಿಳಿಸಿದರು.
ಸ್ವಚ್ಛತೆಯೇ ದೊಡ್ಡ ಸಮಾಜ ಸೇವೆಯಾಗಿದೆ. ಸಾರ್ವಜನಿಕರು ಸ್ವಚ್ಛತೆ ಕಾಪಾಡುವ ಮೂಲಕ ಸ್ವತ್ಛ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು. ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಇಲಾಖೆಯ ಇಇ ತುಕಾರಾಮ ತ್ಯಾಗಿ, ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಮಾಲೋಚಕ ಗುರುಪ್ರಸಾದ ಪಾಟೀಲ ಇದ್ದರು.