ಕಲಬುರಗಿ: ಇಲ್ಲಿನ ಅಪ್ಪನ ಕೆರೆ ಸಮೀಪದಲ್ಲಿರುವ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಸೆ.23ರಿಂದ 25ರ ವರೆಗೆ ಸರ್| ಎಂ. ವಿಶ್ವೇಶ್ವರಯ್ಯ ಅವರ 162ನೇ ಜನ್ಮದಿನಾಚರಣೆ ಅಂಗವಾಗಿ ಕನ್ಸ್‌ಲ್ಟಿಂಗ್ ಸಿವಿಲ್ ಇಂಜಿನಿಯರ್ ಅಸೋಶಿಯೇಷನ್ ಹಾಗೂ ಬೆಂಗಳೂರಿನ ಯು.ಎಸ್. ಕಮ್ಯುನಿಕೇಷನ್ಸ್ ವತಿಯಿಂದ ಬೃಹತ್ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ (ಬಿಲ್ಡ್ ಟೆಕ್-2022) ಹಮ್ಮಿಕೊಳ್ಳಲಾಗಿದೆ ಎಂದು ಅಸೋಶಿಯೇಷನ್ ಅಧ್ಯಕ್ಷ ಮುರುಳೀಧರ ಜಿ. ಕರಲಗೀಕರ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2 ವರ್ಷಗಳಿಂದ ಕೋವಿಡ್‌ನಿಂದಾಗಿ ಬಿಲ್ಡ್ ಟೆಕ್ ವಸ್ತು ಪ್ರದರ್ಶನ ನಡೆಸಿರಲಿಲ್ಲ. ಈ ಬಾರಿ ಬಿಲ್ಡ್ ಟೆಕ್‌ಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ 104 ಕಂಪನಿಗಳು ಬರಲಿವೆ. ತಮ್ಮ ವಿಶಿಷ್ಟವಾದ ವಸ್ತುಗಳ ಮಳಿಗೆಯನ್ನು ಹಾಕಲಿವೆ. ಇದರಿಂದ ಜನರಿಗೆ ಅದರಲ್ಲೂ ಮನೆಯನ್ನು ತುಂಬಾ ಇಷ್ಟದಿಂದ ಕಟ್ಟುವರಿಗೆ ಪ್ರತಿ ವಸ್ತುವೂ ಅವರ ಇಷ್ಟದಂತೆ ಸಿಗಲಿದೆ. ಕಾಳಿಕಾ ಸ್ಟೀಲ್ ಕಂಪನಿಯು ಈ ಪ್ರದರ್ಶನದ ಪ್ರಾಯೋಜಕತ್ವ ಮಾಡಿದ್ದಾರೆ ಎಂದರು.
ಸೆ. 23ರಂದು ಬೆಳಗ್ಗೆ 11:30ಕ್ಕೆ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಚಾಲನೆ ನೀಡಲಿದ್ದಾರೆ. ಲೋಕೋಪಯೋಗಿ ಇಲಾಖೆ ವಲಯ ಕಚೇರಿ ಮುಖ್ಯ ಇಂಜಿನಿಯರ್ ಜಗನ್ನಾಥ ಹಾಲಿಂಗೆ ಜ್ಯೋತಿ ಬೆಳಗಿಸುವರು. ಕೆಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ್, ಕಾಳಿಕಾ ಸ್ಟೀಲ್ ಕಂಪನಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಅತುಲ್ ಪರಮಾರ್ ಮುಖ್ಯ ಅತಿಥಿಗಳಾಗಿ ಆಗಮಿ ಸುವರು. ಅಸೋಶಿಯೇಷನ್ ಜಿಲ್ಲಾಧ್ಯಕ್ಷ ಮುರಳೀಧರ ಜಿ. ಕರಲಗಿಕರ್ ಅಧ್ಯಕ್ಷತೆ ವಹಿಸುವರು. ಅಸೋಶಿಯೇಷನ್ ಉಪಾಧ್ಯಕ್ಷ ಅನಿಲಕುಮಾರ ಜಿ. ಗಂಗಾಣಿ, ಕಾರ್ಯದರ್ಶಿ ಪ್ರವೀಣಕುಮಾರ ಮೋದಿ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.
ಪ್ರದರ್ಶನದಲ್ಲಿ ಗೃಹಾಲಂಕಾರ ಸಾಮಗ್ರಿ, ಸಿಮೆಂಟ್, ಗ್ರ್ಯಾನೈಟ್, ಇಲೆಕ್ಟ್ರಿಕಲ್ ಫಿಟ್ಟಿಂಗ್ಸ್, ಕಿಟಕಿ, ಗ್ಲಾಸ್, ಸೋಲಾರ್, ಪೀಠೊಪಕರಣಗಳು, ಮಾಡ್ನೂಲರ್ ಕಿಚನ್, ಮಳೆ ನೀರು ಕೋಯ್ಲು, ಗೃಹ ನಿರ್ಮಾಣ ಸಾಲ ಸೌಲಭ್ಯದ ಬಗ್ಗೆ ಅಗತ್ಯ ಮಾಹಿತಿ ನೀಡಲಾಗುತ್ತದೆ. ಈ ಸಂಬಂಧ ಮೂರು ರಾಷ್ಟ್ರೀಕೃತ ಬ್ಯಾಂಕ್‌ಗಳ ಮಳಿಗೆಗಳು ಇರಲಿವೆ ಎಂದರು.
ಅಸೋಶಿಯೇಷನ್ ಉಪಾಧ್ಯಕ್ಷ ಅನಿಲ ಕುಮಾರ ಜಿ. ಗಂಗಾಣಿ, ಕಾರ್ಯದರ್ಶಿ ಪ್ರವೀಣ ಕುಮಾರ ಮೋದಿ, ಬೆಂಗಳೂರಿನ ಯು.ಎಸ್ ಕಮ್ಯುನಿಕೇಷನ್ ವ್ಯವಸ್ಥಾಪಕ ಉಮಾಪತಿ ಇದ್ದರು.