ಅದೇನೇ ತಿಪ್ಪರಲಾಗ ಹಾಕಿದ್ರೂ ನಾನಂತೂ ನಿನ್ನ ಮರೆಯೋಕೆ ಸಾಧ್ಯವಿಲ್ಲ. ಜೀವದ ಕಣ ಕಣದಲ್ಲೂ ನಿನ್ನನ್ನೇ ತುಂಬಿಕೊಂಡಿರುವ ನನಗೆ ನಿನ್ನ ಮರೆಯವಷ್ಟು ಶಕ್ತಿ ಎಲ್ಲಿಂದ ಬಂದೀತು ಹೇಳು? ಮರುಭೂಮಿಯಂತಿದ್ದ ನನ್ನ ಹೃದಯದಲ್ಲಿ ಒಲವಿನ ಮಳೆ ಸುರಿಸಿ ಎಂದಿಗೂ ಒಣಗದ ಪ್ರೀತಿಯ ಗಿಡ ನೆಟ್ಟವಳು ನೀನು. ಕೆಲವರಿಗೆ ತಮ್ಮ ಬಳಿ ಇರುವ ಅತ್ಯಮೂಲ್ಯವಾದುದನ್ನು ಉಳಿಸಿಕೊಳ್ಳವ ಕಲೆ ಇರುವುದಿಲ್ಲ. ಬಹುಶಃ ನನ್ನ ವಿಷಯದಲ್ಲೂ ಹಾಗೆಯೇ ಆಗಿರಬೇಕು, ಇಲ್ಲದಿದ್ದರೆ ಇಂದು ನನ್ನ ಬಳಿ ನೀನಿರುತ್ತಿದ್ದೆ.
Advertisement
ಆಕಾಶಕ್ಕೆ ಜೋಕಾಲಿ ಕಟ್ಟಿ ನಿನ್ನೊಂದಿಗೆ ಆಡುವ ಕನಸು ಕಂಡಿ¨ªೆ; ಆದರೆ ಆಕಾಶವೇ ಕಳಚಿ ಬಿದ್ದುಬಿಟ್ಟಿತಲ್ಲ. ಮೈ ಕೊರೆವ ಚಳಿಯಲ್ಲಿ ಬೆಟ್ಟದ ತುದಿಯಲ್ಲಿ ನಿಂತು ನಿನ್ನ ಹೆಸರು ಕೂಗಲು ಹೋದರೆ, ಬೆಟ್ಟವೇ ಪುಡಿಯಾಯಿತಲ್ಲ. ಅರಳು ಹುರಿದಂತೆ ಮಾತನಾಡುವ ನಿನ್ನ ಮಾತುಗಳಿಗೆ ನನ್ನ ಧ್ವನಿ ಸೇರಿಸಿ, ಯುಗಳಗೀತೆ ಹಾಡಬೇಕೆಂದೆಕೊಂಡೆ; ಆದರೆ ಒಂದೂ ಮಾತನಾಡದೆ ನೀ ಮೌನಿಯಾದೆ. ಪ್ರಕೃತಿಯಂತೆ ನಿತ್ಯಹರಿದ್ವರ್ಣವಾಗಿರುವ ನಿನ್ನ ಸೌಂದರ್ಯವನ್ನು ದಿನವೂ ಕಣ್ತುಂಬಿಕೊಳ್ಳುವ ಆಸೆಪಟ್ಟೆ; ಆದರೆ ಕಾಣಿಸದ ಹಾಗೆ ನೀನು ಮರೆಯಾದೆ. ಹೃದಯ ಸಿಂಹಾಸನದಲ್ಲಿ ನಿನ್ನ ಪ್ರತಿಷ್ಠಾಪಿಸಿ ರಾಜ್ಯಭಾರ ನೋಡಬೇಕೆಂದುಕೊಂಡೆ; ಪ್ರೇಮರಾಜ್ಯದಿಂದ ನೀನು ನನ್ನನ್ನೇ ಗಡಿಪಾರು ಮಾಡಿಬಿಟ್ಟೆ. ಹೀಗೆ ಕನಸುಗಳ ಆರಂಭಕ್ಕೆ ಮುನ್ನವೇ ಸೋಲು ಕಂಡ ನಾನು ಎಂಥ ನತದೃಷ್ಟನಿರಬೇಕು!
ನಿನ್ನವನೇ ಆದ
ಗೆಳೆಯ
– ಶ್ರೀಧರ ಶಿಂಧೆ, ಅಂಗಡಿ ಕಾಲೇಜು, ಬೆಳಗಾವಿ