Advertisement

ಪುತ್ರಿ ಹುಟ್ಟುಹಬ್ಬಕ್ಕೆ ಶಾಲಾ ಕೊಠಡಿ ನಿರ್ಮಿಸಿ ಮಾದರಿ

03:03 PM Aug 14, 2022 | Team Udayavani |

ನೆಲಮಂಗಲ: ಮಕ್ಕಳ ಹುಟ್ಟುಹಬ್ಬಕ್ಕೆ ಕೇಕ್‌ ಕತ್ತರಿಸಿ ಸಂಭ್ರಮಿಸುವ ಪೋಷಕರ ನಡುವೆ, ತಾಲೂಕಿನ ತೊರೆಕೆಂಪಹಳ್ಳಿ ಗ್ರಾಮದ ಹರೀಶ್‌ 40 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಶಾಲೆಯ ಕಟ್ಟಡ ನಿರ್ಮಾಣ ಮಾಡಿ ಪೋಷಕರ ಸ್ಮರಣಾರ್ಥ ಮಗಳ ಜನುಮದಿ ನದಂದು ಸರ್ಕಾರಕ್ಕೆ ನೂತನ ಕಟ್ಟಡ ಹಸ್ತಾಂತರಿಸಿಮಾದರಿಯಾಗಿದ್ದಾರೆ.

Advertisement

ತಾಲೂಕಿನ ತೊರೆಕೆಂಪಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸರ್ಕಾರಿ ಶಾಲಾ ಕಟ್ಟಡವನ್ನು ಬಸವನಹಳ್ಳಿ ಶಿವಾನಂದ ಆಶ್ರಮದ ಶ್ರೀ ರಮಾಣಾನಂದ ಸ್ವಾಮೀಜಿ ಉದ್ಘಾಟನೆ ಮಾಡಿದರು. ಈ ವೇಳೆ ಮಾತನಾಡಿ ಸ್ವಾಮೀಜಿ, ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಜೀವನ ರೂಪಿಸಿಕೊಳ್ಳುವಲ್ಲಿ ಎಂದೂ ಸೋಲು ಕಾಣಲಾರರು. ಇಂದು ಜಗತ್ತಿನಲ್ಲಿ ತಮ್ಮ ಹುಟ್ಟು ಹಬ್ಬಗಳ ಆಚರಣೆಗೆ ಕೋಟಿ ಕೋಟಿ ಖರ್ಚು ಮಾಡುತ್ತಾರೆ. ಅದರಲ್ಲಿ ಶೇ. 90ರಷ್ಟು ಭಾಗ ಜನರು ಕುಡಿತ, ಜಾಲಿ ಮಾಡುವುದು, ಪಾರ್ಟಿ ಮಾಡುವುದು ಈ ರೀತಿ ಯಾಗಿ ದುಂದು ವೆಚ್ಚ ಮಾಡುತ್ತಾರೆ. ಉಳಿದ ಕೆಲವರು ತೊರೆಕೆಂಪಹಳ್ಳಿಯ ಹರೀಶ್‌ನಂತೆ ಸಮಾಜಕ್ಕಾಗಿ ಸೇವೆ ಮಾಡುತ್ತಾರೆ. ಇಂತವರ ಸಂಖ್ಯೆ ಸಮಾಜದಲ್ಲಿ ಹೆಚ್ಚಾಗಬೇಕು ಎಂದು ಶ್ಲಾಘಸಿದರು.

ಹುಟ್ಟುಹಬ್ಬಕ್ಕೆ ಶಾಶ್ವತ ಕೊಡುಗೆ: ಶಾಲೆ ನಿರ್ಮಾಣ ಮಾಡಿ ದಾನ ನೀಡಿದ ಹರೀಶ್‌ ಮಾತನಾಡಿ, ಲಕ್ಷಮ್ಮ, ನರಸಪ್ಪನವರ ಸ್ಮರಣಾರ್ಥ ನಮ್ಮ ತಂದೆ ನರಸಿಂಹಯ್ಯ ತಾಯಿ ಅನುಸೂಯಮ್ಮನವರ ಮಾರ್ಗ ದರ್ಶನದಲ್ಲಿ ನನ್ನ ಮಗಳು ಕೆ.ಎಚ್‌ ನಿಶ್ಚಿಕಳ ಹುಟ್ಟುಹಬ್ಬಕ್ಕೆ ಶಾಶ್ವತವಾಗಿರುವ ಕೊಡುಗೆ ನಮ್ಮ ಗ್ರಾಮಕ್ಕೆ ನೀಡುವ ಬಯಕೆ ಇತ್ತು. ಅದರಂತೆ ನಮ್ಮ ಗ್ರಾಮದ ಸರ್ಕಾರಿ ಶಾಲೆಗೆ ವಿವಿಧ ಸೌಲಭ್ಯಗಳನ್ನು ಸುಮಾರು 40 ಲಕ್ಷ ವೆಚ್ಚದಲ್ಲಿ ನೀಡಲಾಗಿದೆ ಎಂದರು.

ಹೈಟೆಕ್‌ ಸೌಲಭ್ಯ: ತೊರೆಕೆಂಪಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ 40 ಲಕ್ಷರೂ. ವೆಚ್ಚದಲ್ಲಿ ಮೂರು ಕೊಠಡಿ, ಅಡುಗೆ ಕೋಣೆ, ಭೋಜನಾಲಯ, ಎರಡು ಶೌಚಾಲಯ, ನೀರಿನ ಪಂಪು, ಶಾಲಾ ಕಾಂಪೌಂಡ್‌, ಶಾಲೆಯ ನಾಮಫ‌ಲಕ, ಶಾಲಾ ಕಾರ್ಯಾಲಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗಿದ್ದು, ಶಿಕ್ಷಕರು, ತಾಲೂಕು ಶಿಕ್ಷಣಾಧಿಕಾರಿಗಳು ಸಂತೋಷ ವ್ಯಕ್ತಪಡಿಸಿದರು.

ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌.ಶ್ರೀಕಂಠ, ನಿವೃತ್ತ ಉಪನಿರ್ದೇಶಕ ಗಂಗಮಾರೇಗೌಡ್ರು, ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮಯ್ಯ, ಕಾಂಗ್ರೆಸ್‌ ಕೆಪಿಸಿಸಿ ವೀಕ್ಷಕ ಎನ್‌.ಶ್ರೀನಿವಾಸ್‌, ಬೂದಿಹಾಳ್‌ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಕೆ ನಾಗರಾಜು, ಇಸಿಒ ಶಿವಕುಮಾರ್‌. ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟರುದ್ರಾರಾಧ್ಯ, ಶಿಕ್ಷಕ ಗಿರೀಶ್‌, ಕೃಷ್ಣಮೂರ್ತಿ, ಗ್ರಾಮದ ಮುಖಂಡ ನಾಗೇಂದ್ರಪ್ರಸಾದ್‌, ಅನಿಲ್‌, ಮುಖ್ಯ ಶಿಕ್ಷಕ ಗೋಪಾಲಗೌಡ, ಶಿಕ್ಷಕ ಚೌಡಮ್ಮ, ಉಮಾರಾಣಿ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next