ಉಪ್ಪಳ: ರಾಷ್ಟ್ರದ ಸಾರ್ವಭೌಮತೆ, ಏಕತೆಯ ಮೇಲೆ ಗೌರವಾದರಗಳ ಮನಃಸ್ಥಿತಿಯನ್ನು ಕಾಯ್ದುಕೊಳ್ಳುವಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು. ವಿಶಿಷ್ಟ ವೈವಿಧ್ಯ ಮಯ ಭಾರತೀಯ ಸಂಸ್ಕೃತಿಗೆ ಮಾನ್ಯತೆ ನೀಡಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕು ರೂಪಿಸುವ ಕಲೆ ಪ್ರತಿಯೊಬ್ಬರ ಆದ್ಯತೆಯಾಗಬೇಕು ಎಂದು ಕರ್ನಾಟಕ ಕೊಡವ ಮತ್ತು ಅರೆ ಭಾಷೆ ಅಕಾಡೆಮಿ ರಿಜಿಸ್ಟಾರ್ ಉಮರಬ್ಬ ಅಭಿಪ್ರಾಯ ವ್ಯಕ್ತಪಡಿಸಿದರು.
ಉಪ್ಪಳ ಸಮೀಪದ ಮಣಿಮುಂಡ ಎಜ್ಯುಕೇಶನ್ ಸೊಸೈಟಿ ಆಶ್ರಯದಲ್ಲಿ ಮಣಿಮುಂಡ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ 71ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರ ಧ್ವಜಾರೋಹಣಗೈದು ಅವರು ಮಾತನಾಡಿದರು.
ರಾಷ್ಟ್ರದ ಸ್ವಾತಂತ್ರ್ಯ ಹೋರಾಟಗಾರರು, ರಾಷ್ಟ್ರ ಶಿಲ್ಪಿಗಳ ಬಗ್ಗೆ ಹೊಸ ತಲೆಮಾರಿಗೆ ಮಾಹಿತಿಯ ಕೊರತೆಯಿದ್ದು, ಇದನ್ನು ನಿವಾರಿಸುವ ಯತ್ನಗಳು ಶಿಕ್ಷಣ ಸಂಸ್ಥೆಗಳಿಂದಾಗಬೇಕು ಎಂದು ತಿಳಿಸಿದ ಅವರು ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ ಪ್ರತಿಯೊಬ್ಬ ಪ್ರಜೆಯ ಕರ್ತವ್ಯಗಳ ಬಗ್ಗೆ ಸ್ಪಷ್ಟತೆಯಿರಬೇಕೆಂದು ತಿಳಿಸಿದರು. ವಿದ್ಯಾಭ್ಯಾಸ ಗಳಿಕೆಯ ಮಾರ್ಗವೊಂದೇ ಅಲ್ಲದೆ ಸಾಮಾಜಿಕ, ರಾಷ್ಟ್ರೀಯ ಚಿಂತನೆಗಳಿಂದೊಡಗೂಡಿ ಸಾಕಾರಗೊಂಡಾಗ ಪ್ರಜಾಪ್ರಭುತ್ವದ ಉನ್ನತಿ ಸಾಧ್ಯವಾಗುವುದೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ಪತ್ರಕರ್ತ, ಸಾಹಿತಿ ಮಲಾರು ಜಯ ರಾಮ ರೈ ಮಾತನಾಡಿ ತಂತ್ರಜ್ಞಾನಗಳು ಮುಂದುವರಿದಂತೆ ಸಂಕುಚಿತ ಮನಃಸ್ಥಿತಿ ವ್ಯಾಪಕ ಗೊಂಡು ಸವಾಲಾಗಿ ಪರಿಣಮಿಸುತ್ತಿದೆ. ಪರಸ್ಪರ ಸಂಬಂಧಗಳು ಮರೆಯಾಗಿ ಮಾನವೀ ಯತೆ ನಶಿಸಿ ರಾಕ್ಷಸೀಯ ಪ್ರವೃತ್ತಿ ಬೆಳೆಯುತ್ತಿರುವುದು ಆತಂಕಕಾರಿ ಎಂದು ತಿಳಿಸಿ ದರು. ಪುಸ್ತಕಗಳನ್ನು ಓದುವ, ಸುತ್ತಲಿನ ಪರಿಸರ, ಸಮಾಜವನ್ನು ಸೂಕ್ಷ್ಮ¾ವಾಗಿ ಗಮನಿಸುವ ಪ್ರವೃತ್ತಿ ಮಾನವನನ್ನು ಎತ್ತರಕ್ಕೇರಿಸುತ್ತದೆ. ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಮೂಲ ತಳಹದಿ ಕುಸಿಯದಿರಲು ಇಂತಹ ವಿಶಾಲ ಮನಃಸ್ಥಿತಿ ಅಗತ್ಯವಿದೆ ಎಂದು ತಿಳಿಸಿದರು.
ಮಣಿಮುಂಡ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಮೂಸಾ ಹಾಜಿ ಅಲ್ವಾಯಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಂಬೈಯ ಸೈಯ್ಯದ್ ಇನಾಯತುಲ್ಲಾ, ಫಾದರ್ ಮುಲ್ಲರ್ ಆಸ್ಪತ್ರೆಯ ತಜ್ಞೆ ಡಾ.ಶುಭಾ ಪದಕಣ್ಣಾಯ ಉಪಸ್ಥಿತರಿದ್ದು ಮಾತನಾಡಿದರು.
ವಿದ್ಯಾರ್ಥಿ ಮೊಹಮ್ಮದ್ ಶೆರೀಫ್ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ಶಮೀನಾ ಇಕ್ಬಾಲ್ ವಂದಿಸಿದರು. ಅಝೀಂ ಮಣಿಮುಂಡ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಕನ್ನಡ, ಮಲೆಯಾಳ, ತುಳು, ಆಂಗ್ಲ, ಹಿಂದಿ, ಉರ್ದು, ಅರೆಬಿಕ್ ಭಾಷೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಿದರು. ವಿದ್ಯಾರ್ಥಿಗಳಾದ ಮೊಹಮ್ಮದ್ ಮುಸಾಬ್(ಆಂಗ್ಲ), ಆಯಿಷಾ ಝುಲ್ಪಾ(ಹಿಂದಿ), ಮೊಹಮ್ಮದಲಿ, ಲಹೀರ್ ಅಬ್ಟಾಸ್(ಅರೆಬಿಕ್), ಅಫೀಝಾ ಬಾನು(ಕನ್ನಡ), ಫಾತಿಮತ್ ಹಝಾ(ಮಲೆಯಾಳ), ನಫೀಸಾ ಬೀ(ಉರ್ದು) ಭಾಷೆಗಳಲ್ಲಿ ಭಾಷಣ ಮಾಡಿದರೆ, ಹಝಾ ಮತ್ತು ತಂಡ (ಮಲಯಾಳಂ, ಹಿಂದಿ), ರಶೀದಾ ಮತ್ತು ತಮಡ(ಅರೆಬಿಕ್, ಉರ್ದು), ಮೈಮೂನಾ ಮತ್ತು ತಂಡ (ಕನ್ನಡ) ಭಾಷೆಗಳಲ್ಲಿ ದೇಶಭಕ್ತಿಗೀತೆಗಳನ್ನು ಹಾಡಿದರು. ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ರಾಷ್ಟ್ರಗೀತೆ ರಚನೆ, ಪ್ರಬಂಧ, ಚಿತ್ರ ರಚನೆ, ಛದ್ಮವೇಷ ಮೊದಲಾದ ಸ್ಪರ್ಧೆಗಳು ಗಮನ ಸೆಳೆದವು.