Advertisement

ನಗರಕ್ಕೆ ಜನಪರ್ಯಾಯ ಕಟ್ಟೋಣ ಜಾಥಾ

12:08 PM Apr 04, 2017 | |

ದಾವಣಗೆರೆ: ಮಂಡ್ಯದಲ್ಲಿ ಏ. 17ರಂದು ಪ್ರಾರಂಭವಾಗುವ ಜನಪರ್ಯಾಯ ಕಟ್ಟೋಣ ಜಾಥಾ… ಏ.23ಕ್ಕೆ ದಾವಣಗೆರೆಗೆ ಆಗಮಿಸಲಿದೆ ಎಂದು ಜನಾಂದೋಲನಗಳ ಮಹಾಮೈತ್ರಿ ಮುಖಂಡ ಎಸ್‌.ಆರ್‌. ಹಿರೇಮಠ್ ತಿಳಿಸಿದ್ದಾರೆ. ಮಂಡ್ಯದ ಸಿಲ್ವರ್‌ ಜ್ಯುಬಿಲಿ ಪಾರ್ಕ್‌ ನಲ್ಲಿ ಏ. 17ರ ಬೆಳಗ್ಗೆ 11ಕ್ಕೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಜಾಥಾಕ್ಕೆ ಚಾಲನೆ ನೀಡಲಿದ್ದು, ವಿಶ್ರಾಂತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಇತರರು ಭಾಗವಹಿಸುವರು. 

Advertisement

ಏ. 24ರಂದು ಹುಬ್ಬಳ್ಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಡೋಜರಾದ ಡಾ| ಚನ್ನವೀರ ಕಣವಿ, ಡಾ| ಪಾಟೀಲ ಪುಟ್ಟಪ್ಪ, 25ರಂದು ಗದಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದೇವನೂರು ಮಹಾದೇವ ಇತರರು ಭಾಗವಹಿಸುವರು. ದಾವಣಗೆರೆ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಮಂಡ್ಯದಿಂದ ಪ್ರಾರಂಭವಾಗುವ ಜಾಥಾ ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ ಮೂಲಕ ದಾವಣಗೆರೆಗೆ ಆಗಮಿಸಲಿದೆ. ಜಾಥಾದಲ್ಲಿ ತಮ್ಮೊಂದಿಗೆ ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ, ರಾಘವೇಂದ್ರ ಕುಷ್ಟಗಿ, ರವಿಕೃಷ್ಣಾರೆಡ್ಡಿ, ನೂರ್‌ ಶ್ರೀಧರ್‌ ಇತರರು ಭಾಗವಹಿಸುವರು ಎಂದು ತಿಳಿಸಿದರು.

ರಾಜ್ಯದ ಜನರು ಅನುಭವಿಸುತ್ತಿರುವ ಹಲವಾರು ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ರಾಜಕೀಯ ಆಂದೋಲನಕ್ಕಾಗಿ ಕರೆ ನೀಡುವ ಹಾಗೂ ಜನರನ್ನು ಮಾನಸಿಕವಾಗಿ ಸಿದ್ಧಪಡಿಸುವ ಉದ್ದೇಶ ಮತ್ತು ಕಾಂಗ್ರೆಸ್‌, ಜನತಾದಳ, ಬಿಜೆಪಿ(ಜೆಸಿಬಿ) ದುಷ್ಟ ರಾಜಕಾರಣದ ವಿರುದ್ಧ ಒಗ್ಗಟ್ಟಾಗಲು ಜಾಗೃತಿ ಮೂಡಿಸುವ ಸಲುವಾಗಿ ಜಾಥಾ ಹಮ್ಮಿಕೊಳ್ಳಲಾಗಿದೆ. 

ಇವೆಲ್ಲವೂ ಒಂದರೆಡು ದಿನಗಳಲ್ಲಿ ಆಗುವ ಕೆಲಸ  ಅಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಿದೆ. ಹೊಸ ಕನಸಿನ ಭಾರತದ ನಿರ್ಮಾಣ ಮಹತ್ತರ ಉದ್ದೇಶದೊಂದಿಗೆ ಅಹಿರ್ನಿಶಿ ಹೋರಾಟಕ್ಕೆ ಒಂದು ವೇದಿಕೆ ರೂಪಿಸಲು ಜಾಥಾ ನಡೆಸಲಾಗುವುದು ಎಂದು ತಿಳಿಸಿದರು. ರಾಜ್ಯದ ಶೇ. 60ರಷ್ಟು ಜನರು ಅವಲಂಬಿತವಾಗಿರುವ ಕೃಷಿ ಕ್ಷೇತ್ರ ಪ್ರಸ್ತುತ ತೀರಾ ಸಂಕಷ್ಟದಲ್ಲಿದೆ.

Advertisement

ಕೃಷಿಯೋಗ್ಯ ಭೂಮಿ ಕೃಷಿಯೇತರ ಚಟುವಟಿಕೆಗೆ ಬಳಕೆ ಆಗುತ್ತಿರುವುದರ ಜಾಥಾ ಮೂಲಕ ಹೋರಾಟ ನಡೆಸಲಾಗುವುದು. ಬೀಜ, ರಸಗೊಬ್ಬರ, ಕ್ರಿಮಿನಾಶಕಗಳು ವಿದೇಶಿ, ಬಂಡವಾಳಬಡುಕ ಕಂಪನಿಗಳ ಕೈಯಲ್ಲಿವೆ. ಸರ್ಕಾರಗಳು ವರ್ಷಕ್ಕೆ 5 ಲಕ್ಷ ಕೋಟಿ ಸಹಾಯ ಮಾಡುತ್ತಿವೆ. ಅದರ ಬದಲಿಗೆ 1 ಲಕ್ಷ ಕೋಟಿ ಅನುದಾನ ವಿನಿಯೋಗಿಸಿ ಬೀಜ, ರಸಗೊಬ್ಬರ, ಕ್ರಿಮಿನಾಶಕಗಳ ಸಹಕಾರ ವ್ಯವಸ್ಥೆ ಪ್ರಾರಂಭಿಸುವ ಚಿಂತನೆಯ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
 
ಅಗತ್ಯ ಮೂಲಭೂತ ಸೌಲಭ್ಯಗಳಾದ ಉದ್ಯೋಗ, ಶಿಕ್ಷಣ, ಆರೋಗ್ಯಕ್ಷೇತ್ರಗಳು ಉಳ್ಳವರ ಕೈಯಲ್ಲಿ ಸಿಕ್ಕು ವ್ಯಾಪಾರೀಕರಣಗೊಂಡಿರುವುದರ ವಿರುದ್ಧ ಹೋರಾಟ ರೂಪಿಸಲಾಗುವುದು. ಈಗಿನ ಅಭಿವೃದ್ಧಿಗೆ ಪರ್ಯಾಯವಾಗಿ ನೈಸರ್ಗಿಕ, ಸಾಮಾಜಿಕ, ಸಂಸ್ಕೃತಿ ಆಧಾರಿತ ಸುಸ್ಥಿರ ಅಭಿವೃದ್ಧಿ ನೀತಿ ಜಾರಿ.

ಜನ ಸಾಮಾನ್ಯರು ಗೌರವ, ಅರ್ಥಪೂರ್ಣ ಜೀವನ ವಾತಾವರಣದ ನಿರ್ಮಾಣ, ಎಲ್ಲಕ್ಕಿಂತಲೂ ಮುಖ್ಯವಾಗಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾಗರಿಕರು ಸಾರ್ವಭೌಮರು ಎಂಬುದನ್ನು ತಿಳಿಸುವ ಮೂಲಕ ಮುಂದಿನ 2018ನೇ ಸಾಲಿನ ಚುನಾವಣೆ ವೇಳೆಗೆ ಒಂದು ಜನಪರ್ಯಾಯ ಕಟ್ಟುವುದು ಜಾಥಾದ ಮೂಲ ಉದ್ದೇಶ ಎಂದು ತಿಳಿಸಿದರು.

ಮಹಾಮೈತ್ರಿಯ ಬಸವನಕೆರೆ ಶಿವಲಿಂಗಪ್ಪ, ಅರುಣ್‌ಕುಮಾರ್‌ ಕುರುಡಿ, ಬಲ್ಲೂರು ರವಿಕುಮಾರ್‌, ಅನೀಸ್‌ ಪಾಷಾ, ವಾಸನದ ಓಂಕಾರಪ್ಪ, ಜಬೀನಾಖಾನಂ, ಆದಿಲ್‌ಖಾನ್‌, ಉಷಾ ಕೈಲಾಸದ್‌, ಚಿಕ್ಕನಹಳ್ಳಿ ರೇವಣಸಿದ್ದಪ್ಪ, ಮೌಲಾನಾಯ್ಕ ಸುದ್ದಿಗೋಷ್ಠಿಯಲ್ಲಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next